– ಬರೋಬ್ಬರಿ 5,820 ಕೆಜಿ ತೂಗಿದ ಅಭಿಮನ್ಯು
– ಮಾಜಿ ಕ್ಯಾಪ್ಟನ್ ಅರ್ಜುನನ ಸ್ಥಾನಕ್ಕೇರಿದ ಧನಂಜಯ
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಆಕರ್ಷಣೆಯಾಗಿರುವ ದಸರಾ ಗಜಪಡೆಗೆ ಮಂಗಳವಾರ ತೂಕದ ಪರೀಕ್ಷೆ ಮಾಡಲಾಯ್ತು. ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ 14 ಆನೆಗಳ ತೂಕ ಹಾಕಲಾಯ್ತು. ಮೈಸೂರಿನ ಧನ್ವಂತರಿ ರಸ್ತೆಯಲ್ಲಿರೋ ಸಾಯಿರಾಂ ಅಂಡ್ ಕಂ ತೂಕ ಮಾಪನ ಕೇಂದ್ರದಲ್ಲಿ ಆನೆಗಳಿಗೆ ತೂಕ ಮಾಡಲಾತು. ಈ ತೂಕ ಪರೀಕ್ಷೆಯಲ್ಲಿ 3ನೇ ಬಾರಿಗೆ ಕ್ಯಾಪ್ಟನ್ ಅಭಿಮನ್ಯು ಟೀಂನ ಆನೆಗಳು ಭಾಗಿ ಆಗಿದ್ದವು. ಅಭಿಮನ್ಯು, ಭೀಮ, ಏಕಲವ್ಯ, ಲಕ್ಷ್ಮಿ, ವರಲಕ್ಷ್ಮಿ, ಕಂಜನ್, ಹಿರಣ್ಯ, ಗೋಪಿ, ಪ್ರಶಾಂತ, ಮಹೇಂದ್ರ ಸೇರಿ 14 ಆನೆಗಳು ಭಾಗಿ ಆಗಿದ್ದವು.
ಇನ್ನೂ ದಸರೆ ಗಜಪಡೆಯ ಕ್ಯಾಪ್ಟನ್ ಮತ್ತು ಅಂಬಾರಿ ಹೊರಲಿರುವ ಅಭಿಮನ್ಯು ತೂಕದಲ್ಲೂ ಅಗ್ರಸ್ಥಾನ ಪಡೆದಿದ್ದಾನೆ. ಕಳೆದ ಬಾರಿ 5,560 ಕೆಜಿ ತೂಕ ಹೊಂದಿದ್ದ ಅಭಿಮನ್ಯು, ಈ ಬಾರಿಯೂ 5,820 ಕೆಜಿ ತೂಕ ಹೊಂದಿದ್ದಾನೆ. ಒಂದೇ ತಿಂಗಳ ಅಂತರದಲ್ಲಿ 260 ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾನೆ. ಇದನ್ನೂ ಓದಿ: ಜಮ್ಮು-ಕಾಶ್ಮೀರ, ಹರಿಯಾಣ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ – ಯಾರಿಗೆ ಗದ್ದುಗೆ?
ದಸರೆ ಗಜಪಡೆಯ ತೂಕ ಹೀಗಿದೆ…
ಕ್ಯಾಪ್ಟನ್ ಅಭಿಮನ್ಯು – 5,820 ಕೆಜಿ
ಸುಗ್ರೀವ – 5,540 ಕೆಜಿ
ಭೀಮ – 5,380 ಕೆಜಿ
ಗೋಪಿ – 5,280 ಕೆಜಿ
ಧನಂಜಯ – 5,255 ಕೆಜಿ
ಪ್ರಶಾಂತ – 5,240 ಕೆಜಿ
ಮಹೇಂದ್ರ – 5,150 ಕೆಜಿ
ಏಕಲವ್ಯ – 5,095 ಕೆಜಿ
ಕಂಜನ್ – 4,725 ಕೆಜಿ
ರೋಹಿತ – 3,930 ಕೆಜಿ
ದೊಡ್ಡಹರವೆ ಲಕ್ಷ್ಮಿ – 3,570 ಕೆಜಿ
ವರಲಕ್ಷ್ಮಿ – 3,555 ಕೆಜಿ
ಹಿರಣ್ಯ – 3,160 ಕೆಜಿ
ಲಕ್ಷ್ಮಿ – 2,625 ಕೆಜಿ
ಇನ್ನೂ ಈ ಬಾರಿ ಜಂಬೂಸವಾರಿಯಲ್ಲಿ ಅಭಿಮನ್ಯು ಚಿನ್ನದ ಅಂಬಾರಿ ಹೊತ್ತು ಮುಂದೆ ಸಾಗಿದರೆ, ಅಭಿಮನ್ಯುಗೆ ಹಿರಣ್ಯ ಲಕ್ಷ್ಮಿ ಆನೆಗಳು ಕುಮ್ಕಿ ಆನೆಗಳಾಗಲಿವೆ. ನಿಶಾನೆ ಆನೆಯಾಗಿ ಧನಂಜಯ ಆಯ್ಕೆಯಾಗಿದ್ದಾನೆ. ನೌಫತ್ ಆನೆಯಾಗಿ ಗೋಪಿ ಆಯ್ಕೆ ಆಗಿದ್ದು, ಜಂಬೂಸವಾರಿಯಲ್ಲಿ 9 ಆನೆಗಳು ಭಾಗಿಯಾಗಲಿವೆ. ಇದನ್ನೂ ಓದಿ: ಕೋವಿಡ್ ಕಾಲದಲ್ಲಿ ಪಿಪಿಇ ಕಿಟ್ ಖರೀದಿ ಅಕ್ರಮ – ಕಿದ್ವಾಯಿ ಆಸ್ಪತ್ರೆಯ ಆರ್ಥಿಕ ಸಲಹೆಗಾರ ಅಮಾನತು
ನವರಾತ್ರಿಯ 5ನೇ ದಿನವು ಅರಮನೆಯಲ್ಲಿ ಪೂಜಾಕೈಂಕರ್ಯ ನೆರವೇರಿಸಲಾಯ್ತು. ಅರಮನೆಯ ಪೂಜೆಯಲ್ಲಿ ಭಾಗಿಯಾದ ಪಟ್ಟ ಆನೆ, ಪಟ್ಟದ ಹಸು, ಪಟ್ಟದ ಕುದುರೆಗಲಿಗೆ ಪೂಜೆ ಮಾಡಲಾಯ್ತು. ಪಟ್ಟದ ಆನೆ ಕಂಜನ್, ನಿಶಾನೆ ಆನೆಯಾಗಿರುವ ಭೀಮ ಪೂಜೆಯಲ್ಲಿ ಭಾಗಿ ಆಗಿದ್ದವು. ಇಂದು ಸಹ ಅರಮನೆಯಲ್ಲಿ ಖಾಸಗಿ ದರ್ಬಾರ್ ನಡೆಸಲಾಯ್ತು.
ರೈತರಿಗೆ ಪ್ರೋತ್ಸಾಹ ನೀಡಲು ಹಾಲು ಕರೆಯುವ ಸ್ಪರ್ಧೆ:
ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ ಹಿನ್ನೆಲೆ ರೈತ ದಸರಾ ಸಮಿತಿಯಿಂದ ರೈತರಿಗೆ ಉತ್ತೇಜನ ನೀಡಲು ಹಾಲು ಕರೆಯುವ ಸ್ಪರ್ಧೆ ಆಯೋಜಿಸಲಾಗಿತ್ತು. ಮೈಸೂರಿನ ಜೆ.ಕೆ.ಮೈದಾನದಲ್ಲಿ ನಡೆದ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಭಾಗದಿಂದ ಬಂದ ಏಳು ಮಂದಿ ರೈತರು ತಮ್ಮ ಹಸುನಿನ ಜೊತೆ ಭಾಗಿ ಆಗಿದ್ರು. ಕಳೆದ ಬಾರಿಗೆ ಹೋಲಿಕೆ ಮಾಡಿದ್ರೆ ಈ ಬಾರಿ ಸ್ಪರ್ಧಿಗಳ ಸಂಖ್ಯೆ ಕಡಿಮೆ ಆಗಿದೆ. ಈ ಹಾಲು ಕರೆಯುವ ಸ್ಪರ್ಧೆಯನ್ನು ಬೆಳಗ್ಗೆ ಮತ್ತು ಸಂಜೆ ವೇಳೆ ಎರಡುಹೊತ್ತು ನಡೆಸಲಾಗುತ್ತಿದೆ. ಬೆಳಗ್ಗೆ ಮತ್ತು ಸಂಜೆ ಸ್ಪರ್ಧೆಗಳಲ್ಲಿ ಭಾಗವಹಿಸುವವರಿಗೆ 20 ನಿಮಿಷ ಹಾಲು ಕರೆಯಲು ಕಾಲಾವಕಾಶ ನೀಡಲಾಗುತ್ತದೆ. ಎರಡೂ ಸಮಯದಲ್ಲಿ ವೇಳೆ ಹೆಚ್ಚು ತೂಕದ ಹಾಲನ್ನು ಯಾರು ಕರೆಯುತ್ತಾರೋ ಅವರನ್ನು ವಿಜೇತರನ್ನಾಗಿ ಘೋಷಣೆ ಮಾಡಲಾಗುತ್ತದೆ. ಗೆದ್ದವರಿಗೆ ನಗದು ಹಾಗೂ ಆಕರ್ಷಕ ಟ್ರೋಫಿ ಬಹುಮಾನ ನೀಡಲಾಗುತ್ತದೆ.
ಅರಮನೆ ಆವರಣದಲ್ಲಿ `ಯೋಗ’ ಸರಪಳಿ:
ಮೈಸೂರು ದಸರೆ ಮಹೋತ್ಸವ ಐದೇ ದಿನಕ್ಕೆ ಕಾಲಿಟ್ಟಿದೆ. ಯೋಗ ದಸರಾ ಉಪ ಸಮಿತಿಯಿಂದ ಅರಮನೆ ಆವರಣದಲ್ಲಿ ಯೋಗ ಸರಪಳಿ ನಿರ್ಮಿಸಲಾಯಿತು. ಪ್ರಜಾಪ್ರಭುತ್ವಕ್ಕಾಗಿ ಯೋಗ ಸರಪಳಿ ಎಂಬ ಶೀರ್ಷಿಕೆ ಅಡಿ ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮೈಸೂರಿನ ವಿವಿಧೆಡೆಗಳಿಂದ ಆಗಮಿಸಿದ್ದ ಸಾವಿರಾರು ಯೋಗಪಟುಗಳು ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಸಂವಿಧಾನ ಪೀಠಿಕೆ ಬೋಧನೆಯ ಜೊತೆಗೆ ಪ್ರಜಾಪ್ರಭುತ್ವದ ಆಶಯಗಳನ್ನು ಸಾರುವ ಪ್ಲೇಕಾರ್ಡ್ ಪ್ರದರ್ಶನ ಮಾಡಿದರು. ಬಳಿಕ ವಿವಿಧ ಬಗೆಯ ಆಸನಗಳನ್ನು ಪ್ರದರ್ಶಿಸಿದ ಯೋಗಪಟುಗಳು ಎಲ್ಲರ ಗಮನ ಸೆಳೆದರು.