ಟೆಸ್ಟ್‌ನಲ್ಲಿ ಟಿ20 ಆಟ – ಕ್ಲೀನ್‌ಸ್ವೀಪ್‌ನೊಂದಿಗೆ ಸರಣಿ ಗೆದ್ದ ಭಾರತ

Public TV
2 Min Read
team india

– 2016ರ ನಂತರ ಅತಿ ಹೆಚ್ಚು ಟೆಸ್ಟ್‌ ಪಂದ್ಯ ಗೆದ್ದ ಸಾಧನೆ

ಕಾನ್ಪುರ: ಮಳೆಯಿಂದ (Rain) ರದ್ದಾಗಬಹುದೆಂಬ ಭೀತಿಯಲ್ಲಿದ್ದ ಪಂದ್ಯವನ್ನು ಭಾರತ (Team India) ಗೆದ್ದುಕೊಂಡಿದೆ. ಬಾಂಗ್ಲಾ (Bangladesh) ವಿರುದ್ಧದ ಎರಡನೇ ಟೆಸ್ಟ್‌ (Second Test) ಪಂದ್ಯವನ್ನು ಭಾರತ 7 ವಿಕೆಟ್‌ಗಳಿಂದ ಜಯಗಳಿಸಿದೆ.

ಎರಡನೇ ಇನ್ನಿಂಗ್ಸ್‌ನಲ್ಲಿ ಗೆಲ್ಲು 95 ರನ್‌ಗಳ ಸುಲಭ ಸವಾಲನ್ನು ಪಡೆದ ಭಾರತ 17.2 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 98 ರನ್‌ ಹೊಡೆಯುವ ಮೂಲಕ ಜಯ ಸಾಧಿಸಿ ಎರಡು ಪಂದ್ಯಗಳ ಸರಣಿಯನ್ನು ಕ್ಲೀನ್‌ಸ್ವೀಪ್‌ ಮಾಡಿಕೊಂಡಿದೆ.

 

ಭಾರತದ ಪರ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್‌ 51 ರನ್‌ (45 ಎಸೆತ, 8 ಬೌಂಡರಿ, 1 ಸಿಕ್ಸರ್)‌ ಹೊಡೆದರೆ ವಿರಾಟ್‌ ಕೊಹ್ಲಿ ಔಟಾಗದೇ 29 ರನ್‌ (37 ಎಸೆತ, 4 ಬೌಂಡರಿ) ಹೊಡೆದರು.

ಇದಕ್ಕೂ ಮೊದಲು ಬ್ಯಾಟ್‌ ಮಾಡಿದ ಬಾಂಗ್ಲಾ 47 ಓವರ್‌ಗಳಲ್ಲಿ 146 ರನ್‌ಗಳಿಗೆ ಆಲೌಟ್‌ ಆಯ್ತು. ಬುಮ್ರಾ, ಅಶ್ವಿನ್‌, ಜಡೇಜಾ ತಲಾ ಮೂರು ವಿಕೆಟ್‌ ಪಡೆದರೆ ಆಕಾಶ್‌ ದೀಪ್‌ 1 ವಿಕೆಟ್‌ ಪಡೆದರು. ಇದನ್ನೂ ಓದಿ: ಸಚಿನ್‌ ಮತ್ತೊಂದು ದಾಖಲೆ ಉಡೀಸ್‌ – ಕೊಹ್ಲಿಯೇ ʼಕಿಂಗ್‌ʼ

ಭಾರತ ಗೆದ್ದಿದ್ದು ಹೇಗೆ?
ಮೊದಲ ದಿನ ಕೇವಲ 35 ಓವರ್‌ ಮಾತ್ರ ಬೌಲ್‌ ಮಾಡಲು ಸಾಧ್ಯವಾಗಿತ್ತು. 2 ಮತ್ತು 3ನೇ ದಿನ ಒಂದು ಎಸೆತ ಹಾಕಲು ಸಾಧ್ಯವಾಗಿರಲಿಲ್ಲ. 4 ದಿನದಿಂದ ಪಂದ್ಯ ಸರಿಯಾಗಿ ಆರಂಭವಾಗಿತ್ತು. ಭಾರತ ಟಿ20 ಮಾದರಿಯಲ್ಲಿ ಬ್ಯಾಟ್‌ ಬೀಸಿತ್ತು. ಪರಿಣಾಮ ವೇಗದ 50, 100, 200, 250 ರನ್‌ ಹೊಡೆದ ತಂಡ ಎಂಬ ವಿಶ್ವದಾಖಲೆ ಬರೆದಿತ್ತು. ಈ ಮೂಲಕ ಟೆಸ್ಟ್‌ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ರನ್‌ ರೇಟ್‌ ಹೊಂದಿದ್ದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

ಈ ಪಂದ್ಯವನ್ನು ಗೆಲ್ಲುವುದರ ಮೂಲಕ ಜನವರಿ 2016ರ ನಂತರ ಅತಿ ಹೆಚ್ಚು ಟೆಸ್ಟ್‌ ಪಂದ್ಯವನ್ನು ಗೆದ್ದ ತಂಡ ಎಂಬ ಸಾಧನೆ ಮಾಡಿದೆ. ಭಾರತ 86 ಪಂದ್ಯವಾಡಿ 53 ಪಂದ್ಯ ಗೆದ್ದುಕೊಂಡಿದೆ. 21 ಪಂದ್ಯವನ್ನು ಸೋತರೆ 12 ಪಂದ್ಯವನ್ನು ಡ್ರಾ ಮಾಡಿಕೊಂಡಿದೆ.

ಎರಡನೇ ಸ್ಥಾನದಲ್ಲಿರುವ ಇಂಗ್ಲೆಂಡ್‌ 111 ಪಂದ್ಯವಾಡಿ 52 ಪಂದ್ಯವನ್ನು ಗೆದ್ದುಕೊಂಡಿದೆ. 44 ಪಂದ್ಯವನ್ನು ಸೋತು 15 ಪಂದ್ಯವನ್ನು ಡ್ರಾ ಮಾಡಿಕೊಂಡಿದೆ.

ಸಂಕ್ಷಿಪ್ತ ಸ್ಕೋರ್‌
ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್‌ 233/10
ಭಾರತ ಮೊದಲ ಇನ್ನಿಂಗ್ಸ್‌ 285/9
ಬಾಂಗ್ಲಾದೇಶ ಎರಡನೇ ಇನ್ನಿಂಗ್ಸ್‌ 146/10
ಭಾರತ ಎರಡನೇ ಇನ್ನಿಂಗ್ಸ್‌ 98/3

Share This Article