`ಕೆಟ್ಟ ಮೇಲೆ ಬುದ್ಧಿ ಬಂತು’ ಎಂಬ ಗಾದೆ ಮಾತು ಸಿಎಂಗೆ ಅನ್ವಯ- ವಿಜಯೇಂದ್ರ

Public TV
2 Min Read
VIJAYENDRA 1

ಬೆಂಗಳೂರು: ಕೆಟ್ಟ ಮೇಲೆ ಬುದ್ಧಿ ಬಂತು ಎಂಬ ಗಾದೆ ಮಾತು ಸಿಎಂಗೆ (CM Siddaramaiah) ಅನ್ವಯವಾಗುತ್ತದೆ ಎಂದು ಮುಡಾ ಪ್ರಕರಣ (MUDA Scam) ಸಂಬಂಧ ಬಿವೈ ವಿಜಯೇಂದ್ರ (BY Vijayendra) ಹೇಳಿದ್ದಾರೆ.

ಮುಡಾ ಪ್ರಕರಣ ಸಂಬಂಧಿಸಿದಂತೆ ಸಿಎಂ ಪತ್ನಿ ಪಾರ್ವತಿ (Parvathi Siddaramaiah) ಸೈಟ್ ವಾಪಸ್ಸು ಕೊಡುವುದಾಗಿ ತಿಳಿಸಿದ ಮೇಲೆ ತಮ್ಮ ಎಕ್ಸ್ (X) ಖಾತೆಯಲ್ಲಿ ಟ್ವೀಟ್ ಹಾಕಿಕೊಂಡಿದ್ದಾರೆ.ಇದನ್ನೂ ಓದಿ: MUDA Case| ಪತ್ನಿ ನಿರ್ಧಾರ ಆಶ್ಚರ್ಯ ತಂದಿದೆ: ಸಿದ್ದರಾಮಯ್ಯ

ಸಿಎಂ ಸಿದ್ದರಾಮಯ್ಯರಿಗೆ ರಾಜೀನಾಮೆಯೊಂದೇ ಉಳಿದಿರುವ ದಾರಿ. ‘ಕೆಟ್ಟ ಮೇಲೆ ಬುದ್ಧಿ ಬಂತು’ ಎಂಬ ಗಾದೆ ಮಾತು ಮುಖ್ಯಮಂತ್ರಿಗಳಿಗೆ ಅನ್ವಯಿಸುತ್ತಿದೆ. ಮುಖ್ಯಮಂತ್ರಿ ಮನೆಯವರು ಎಂದರೆ ಬಿಟ್ಟುಬಿಡಬೇಕಾ? 62 ಕೋಟಿ ಕೊಟ್ಟರೆ ನಿವೇಶನಗಳನ್ನು ಹಿಂದಿರುಗಿಸುತ್ತೇನೆ ಎಂದು ಅಂದು ಸಿಎಂ ಆರ್ಭಟಿಸಿದ್ದರು. ಮಾನ್ಯ ಸಿದ್ದರಾಮಯ್ಯನವರು ಇಂದು ಬೇಷರತ್ತಾಗಿ ಅವರ ಪತ್ನಿಯವರಿಂದ ನಿವೇಶನ ಹಿಂದಿರುಗಿಸುವ ನಿರ್ಧಾರ ಪ್ರಕಟಿಸಿದ್ದಾರೆ ಎಂದರು.

ಬಿಜೆಪಿ (BJP) ಆರೋಪಗಳನ್ನು ಸಾರಾಸಗಟಾಗಿ ನಿರಾಕರಿಸಿದರು. ನಿಮಗೆ ದೊರೆತ 14 ಅಕ್ರಮ ನಿವೇಶನಗಳು 5000 ಸಾವಿರಕ್ಕೂ ಹೆಚ್ಚು ನಿವೇಶನಗಳ ಲೂಟಿಕೋರತನಕ್ಕೆ ರಕ್ಷಣೆಯಾಗಿ ನಿಂತಿದೆ ಎಂದು ಆರೋಪಿಸಿದ್ದೇವು. ಆರೋಪಿಸಿ ನಾವು ನಡೆಸಿದ ಮೈಸೂರು ಚಲೋ ಪಾದಯಾತ್ರೆಗೆ ಪರ್ಯಾಯ ಸಮಾವೇಶ ಆಯೋಜಿಸಿ ಭಂಡತನದ ಸಮರ್ಥನೆಗಿಳಿದಿದ್ದರು. ಸಾಮಾಜಿಕ ಕಾರ್ಯಕರ್ತರ ನ್ಯಾಯಾಲಯದ ಹೋರಾಟಕ್ಕೆ ಅಸ್ತು ಎಂದ ಘನತೆವೆತ್ತ ರಾಜ್ಯಪಾಲರನ್ನು ಅವಹೇಳನ ಮಾಡಿದ್ದರು. ಅವರು ನೀಡಿದ ಅನುಮತಿಯನ್ನು ಪ್ರಶ್ನಿಸಿ ಉಚ್ಚ ನ್ಯಾಯಾಲಯದಲ್ಲಿ ಹೋರಾಟ ಮಾಡಿದರು ಎಂದು ಆಗ್ರಹಿಸಿದರು.

ನ್ಯಾಯಾಲಯದಲ್ಲಿ ಜಯ ದೊರಕದ ಹಿನ್ನಲೆಯಲ್ಲಿ ಕಾನೂನಿನ ಕುಣಿಕೆ ಬಿಗಿತ ಹೆಚ್ಚಾದಂತೆ, ಸಿಬಿಐ-ಇಡಿ (CBI-ED) ತನಿಖೆಗಳ ನಿರೀಕ್ಷೆಯಿಂದ ಬೆದರಿದ ಮುಖ್ಯಮಂತ್ರಿಗಳು ಏಕಾಏಕಿ ನಿವೇಶನಗಳನ್ನು ಹಿಂದಿರುಗಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಇದು ಅವರು ಕಾನೂನು ಹೋರಾಟಕ್ಕೆ ಮುನ್ನವೇ ಶಸ್ತ್ರ ತ್ಯಜಿಸಿ ಶರಣಾಗತಿ ಪ್ರಕಟಿಸಿದಂತಾಗಿದೆ. ಅಂದ ಮಾತ್ರಕ್ಕೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಬಹುದು, ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಬಹುದು ಎಂದು ಅಂದುಕೊಂಡಿದ್ದರೆ ಅದು ಅವರ ಅಜ್ಞಾನವನ್ನು ಪ್ರತಿಬಿಂಬಿಸುತ್ತದೆ. ನಿವೇಶನಗಳನ್ನು ಹಿಂದಿರುಗಿಸಿ ತಪ್ಪೊಪ್ಪಿಕೊಂಡಂತೆ ಸಿಎಂ ಸ್ಥಾನಕ್ಕೂ ರಾಜೀನಾಮೆ ನೀಡಿದರೆ ಮರೆತು ಹೋಗಿರುವ ತಮ್ಮ ನೈತಿಕತೆ ಪ್ರಜ್ಞೆ ಪ್ರದರ್ಶಿಸಿದಂತಾಗುತ್ತದೆ ಎಂದು ಹೇಳಿದರು.ಇದನ್ನೂ ಓದಿ: Davanagere | ಕೃಷಿಹೊಂಡಕ್ಕೆ ಬಿದ್ದು ಇಬ್ಬರು ಬಾಲಕಿಯರ ದುರ್ಮರಣ

Share This Article