ಕುಂಟು ನೆಪ ಹೇಳಿ ಕರ್ನಾಟಕ ಐಪಿಎಸ್ ಕೇಡರ್‌ನಲ್ಲಿ ವಿಲೀನ: ಚಂದ್ರಶೇಖರ್‌ ಅಮಾನತಿಗೆ ಜೆಡಿಎಸ್‌ ದೂರು

Public TV
2 Min Read
lokayukta igp IPS officer Chandrashekar

ಬೆಂಗಳೂರು: ಕೇಂದ್ರ ಸಚಿವ ಕುಮಾರಸ್ವಾಮಿ (HD Kumaraswamy) ವಿರುದ್ದ ಅವಹೇಳನಕಾರಿ ಪದ ಬಳಕೆ ಹಿನ್ನೆಲೆಯಲ್ಲಿ ಲೋಕಾಯುಕ್ತ ಐಜಿಪಿ, ಐಪಿಎಸ್‌ ಅಧಿಕಾರಿ ಚಂದ್ರಶೇಖರ್ (Chandrashekar) ವಿರುದ್ದ ಜೆಡಿಎಸ್ (JDS) ಶಾಸಕಾಂಗ ನಾಯಕ ಸುರೇಶ್ ಬಾಬು (Suresh Babu) ನೇತೃತ್ವದ ನಿಯೋಗ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದೆ.

ದೂರಿನಲ್ಲಿ ಏನಿದೆ?
ಭ್ರಷ್ಟಾಚಾರ, ದುರ್ನಡತೆ ಮತ್ತು ಸುಲಿಗೆ ಮುಂತಾದ ಕ್ರಿಮಿನಲ್ ಕೇಸುಗಳಲ್ಲಿ ಭಾಗಿಯಾಗಿರುವ ಕರ್ನಾಟಕ ಲೋಕಾಯುಕ್ತ (Lokayukta) ವಿಶೇಷ ತನಿಖಾದಳ ಮುಖ್ಯಸ್ಥ ಎಡಿಜಿಪಿ ಎಂ. ಚಂದ್ರಶೇಖರ್ ಅವರನ್ನು ಕೂಡಲೇ ಭಾರತೀಯ ಸೇವೆಯಿಂದ ಅಮಾನತುಗೊಳಿಸಬೇಕು. ಉನ್ನತ ಮಟ್ಟದ ತನಿಖೆ ನಡೆಸಿ ಶಿಸ್ತು ಕ್ರಮ ಕೈಗೊಳ್ಳಲು ಕೇಡರ್ ಸೆಂಟ್ರಲ್ ಪ್ರಾಧಿಕಾರಿಯಾಗಿರುವ ಕೇಂದ್ರ ಗೃಹ ಸಚಿವಾಲಯಕ್ಕೆ ಸೂಕ್ತ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರದ ಶಿಫಾರಸ್ಸಿನೊಂದಿಗೆ ಕಳುಹಿಸಬೇಕು. ಇದನ್ನೂ ಓದಿ: ಜನಾರ್ದನ ರೆಡ್ಡಿಗೆ ಸುಪ್ರೀಂ ರಿಲೀಫ್ – ಬಳ್ಳಾರಿ ಪ್ರವೇಶಕ್ಕೆ ಗ್ರೀನ್‌ಸಿಗ್ನಲ್‌

jds leader sureh babu

ಭಾರತೀಯ ಪೊಲೀಸ್ ಸೇವೆಗೆ ಸೇರಿರುವ ಚಂದ್ರಶೇಖರ್ ಕರ್ನಾಟಕ ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮೂಲತಃ ಹಿಮಾಚಲ ಪ್ರದೇಶ (Himachal Pradesh) ಐಪಿಎಸ್‌ ಕೇಡರ್‌ಗೆ ಸೇರಿದವರಾಗಿದ್ದಾರೆ. ತದನಂತರ ತನ್ನ ಪತ್ನಿಯ ಅನಾರೋಗ್ಯ ಮತ್ತು ಹಿಮಾಚಲ ಪ್ರದೇಶದ ವಾತಾವರಣ ಮತ್ತು ಹವಾಗುಣ ಹೊಂದುವುದಿಲ್ಲ ಎನ್ನುವ ಕುಂಟು ನೆಪ ಹೇಳಿ ಮತ್ತು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಹಾಗೂ ರಾಜಕೀಯ ಪ್ರಭಾವ ಬೀರಿ ಕರ್ನಾಟಕ ರಾಜ್ಯಕ್ಕೆ ವರ್ಗಾವಣೆಗೊಂಡು, ತದನಂತರ ಕರ್ನಾಟಕ ಐಪಿಎಸ್ ಕೇಡರ್‌ನಲ್ಲಿ ವಿಲೀನಗೊಂಡಿದ್ದಾರೆ.

ಚಂದ್ರಶೇಖರ್‌ ವಿರುದ್ಧ ಹಲವಾರು ಕೋರ್ಟ್ ಪ್ರಕರಣಗಳಲ್ಲಿ ಇವರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದೆ. ಚಂದ್ರಶೇಖರ್‌ ಅವರೇ ಆಗಸ್ಟ್‌ 21 ರಂದು ಕರ್ನಾಟಕ ಹೈಕೋರ್ಟ್‌ನಲ್ಲಿ ಶ್ರೀಧರ್ ವಿರುದ್ಧ ಕೇಸು ದಾಖಲಿಸಿ ಮಧ್ಯಂತರ ಆದೇಶ ಪಡೆದಿದ್ದಾರೆ.

 

ರಾಜ್ಯದ ಪೊಲೀಸ್ ಅಧಿಕಾರಿಯ ವಿರುದ್ಧ ದಾಖಲಾಗಿರುವ ಪ್ರಕರಣಗಳ ಬಗ್ಗೆ ರಾಜ್ಯ ಸರ್ಕಾರ ಏನು ಕ್ರಮಕೈಗೊಂಡಿದೆ ಮತ್ತು ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯಕ್ಕೆ ಯಾವ ವರದಿಯನ್ನು ಸಲ್ಲಿಸಿದೆ ಎನ್ನುವುದನ್ನು ಇದುವರೆಗೂ ಯಾರಿಗೂ ತಿಳಿದಿಲ್ಲ. ಹೀಗಾಗಿ ಎಂ.ಚಂದ್ರಶೇಖರ್ ರವರ ವಿರುದ್ಧ ಈ ಮೇಲೆ ತಿಳಿಸಿದಂತೆ ದಾಖಲಾಗಿರುವ ದೂರುಗಳು ಎಫ್‌ಐಆರ್‌ ಕೋರ್ಟ್ ಪ್ರಕರಣಗಳು ಹಾಗೂ ಕೇಂದ್ರ ಸಚಿವರಾದ ಹೆಚ್.ಡಿ ಕುಮಾರಸ್ವಾಮಿ ರವರ ವಿರುದ್ಧ ಅವಾಚ್ಯ, ಅಸಭ್ಯ ಮತ್ತು ಅವಹೇಳನಕಾರಿ ಪದಬಳಕೆ ಮಾಡಿ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತಂದಿದ್ದಾರೆ. ಹೀಗಾಗಿ ಚಂದ್ರಶೇಖರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಭಾರತೀಯ ಪೊಲೀಸ್ ಸೇವೆಯಿಂದ ಅಮಾನತುಗೊಳಿಸಿ ಇವರ ವಿರುದ್ದ ಉನ್ನತ ಮಟ್ಟದ ತನಿಖೆ ನಡೆಸಲು ಅಗತ್ಯವಿರುವ ದಾಖಲಾತಿಗಳೊಂದಿಗೆ ಭಾರತೀಯ ಪೊಲೀಸ್ ಸೇವೆಗಳ ವೃಂದದ ಪ್ರಾಧಿಕಾರವಾಗಿರುವ ಕೇಂದ್ರ ಗೃಹ ಮಂತ್ರಾಲಯಕ್ಕೆ ಪ್ರಸ್ತಾವನೆಯನ್ನು ಸೂಕ್ತ ಶಿಫಾರಸ್ಸಿನೊಂದಿಗೆ ಕಳುಹಿಸಬೇಕೆಂದು ಒತ್ತಾಯಿಸುತ್ತೇವೆ.

 

Share This Article