– ಬೆಂಗಳೂರಿಗೆ ತಿರುಪತಿ ಅರ್ಚಕರ ಆಗಮನ
ಬೆಂಗಳೂರು: ತಿರುಪತಿ ಲಡ್ಡು ಪ್ರಸಾದಕ್ಕೆ ಪ್ರಾಣಿಗಳ ಕೊಬ್ಬು ಮಿಶ್ರಣ ವಿವಾದಕ್ಕೆ ಸಂಬಂಧಿಸಿದಂತೆ ಟಿಟಿಡಿ ಅಧೀನದ ದೇವಾಲಯದಲ್ಲಿ ಮತ್ತೆ ಶುದ್ಧೀಕರಣ ಕಾರ್ಯ ನಡೆಯುತ್ತಿದೆ. ಇಂದಿನಿಂದ ನಾಲ್ಕು ದಿನ ತಿರುಪತಿ ದೇವಾಲಯದ ಪವಿತ್ರೋತ್ಸವ ನಡೆಯುತ್ತಿದೆ.
ತಿರುಪತಿ ತಿರುಮಲ ದೇವಸ್ಥಾನಂ (ಟಿಟಿಡಿ) ದೇಗುಲದ ಪಾವಿತ್ರ್ಯತೆಗೆ ಧಕ್ಕೆಯಾದ ಹಿನ್ನೆಲೆಯಲ್ಲಿ ಇಂದಿನಿಂದ ಸೋಮವಾರದವರೆಗೆ, ಪ್ರತಿ ದಿನ ಸಂಜೆ 6:30 ರ ಹೊತ್ತಿಗೆ ಶುದ್ಧಿಕಾರ್ಯ ನಡೆಯಲಿದೆ. ವೈಯಾಲಿಕಾವಲ್‌ನಲ್ಲಿರುವ ಟಿಟಿಡಿ ದೇವಾಲಯದಲ್ಲಿ ಶುದ್ಧಿಕಾರ್ಯ ನಡೆಯಲಿದೆ.
ಮೊದಲ ದಿನ ಆಚಾರ್ಯವರನಮ್, ಎರಡನೇ ದಿನ ಹೋಮ, ಮೂರನೇ ದಿನ ಪವಿತ್ರ ಸಮರ್ಪಣ ಮತ್ತು ನಾಲ್ಕನೇ ದಿನ ಪವಿತ್ರೋತ್ಸವ ನಡೆಸಲಾಗುವುದು. ಈ ಕಾರ್ಯಕ್ರಮಗಳಿಗೆ ತಿರುಪತಿಯಿಂದ 10 ಅರ್ಚಕರು ಬೆಂಗಳೂರಿಗೆ ಆಗಮಿಸಲಿದ್ದಾರೆ. ಅರ್ಚಕರು ಮೂರು ದಿನದ ಪೂಜೆ, ಹೋಮ, ಹವನ ಮಾಡಲಿದ್ದಾರೆ.
ಈಗಾಗಲೇ ಟಿಟಿಡಿ ದೇವಾಲಯದಲ್ಲಿ ಅಗ್ನಿಕುಂಡ ಹೋಮಕುಂಡಗಳ ತಯಾರಿ ಮಾಡಿಕೊಳ್ಳಲಾಗಿದೆ. ಪವಿತ್ರೋತ್ಸವ ಶುದ್ಧಿ ಕಾರ್ಯದಲ್ಲಿ ದೇವಾಲಯದ ಆಡಳಿತ ಮಂಡಳಿ ಭಕ್ತರಿಗೂ ಅವಕಾಶ ನೀಡಿದೆ. ಇಬ್ಬರು 1 ಸಾವಿರ ರೂ. ರಶೀದಿ ಪಡೆದು ಪೂಜೆಯಲ್ಲಿ ಭಾಗಿಯಾಗಲು ಕಲ್ಪಿಸಲಾಗಿದೆ.