ಬೆಂಗಳೂರು: ಮುಡಾ ಪ್ರಕರಣದಲ್ಲಿ (MUDA Case) ಸಿಎಂ ಸಿದ್ದರಾಮಯ್ಯಗೆ (CM Siddaramaiah) ಅಸಲಿ ಸಂಕಷ್ಟದ ಸರಮಾಲೆ ಈಗ ಶುರುವಾಗಿದೆ. ನ್ಯಾಯಿಕ ಪ್ರಕ್ರಿಯೆಗೆ ಇದ್ದ ತಡೆ ತೆರವು ಬೆನ್ನಲ್ಲೇ ಜನಪ್ರತಿನಿಧಿಗಳ ಕೋರ್ಟ್ ಆದೇಶ ನೀಡಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ತನಿಖೆಗೆ (Lokayukta Enquiry) ಆದೇಶ ಹೊರಡಿಸಿದೆ.
ಹಗರಣ ಸಂಬಂಧ ಸಿಆರ್‌ಪಿಸಿ ಸೆಕ್ಷನ್ 156(3) ಅಡಿ ತನಿಖೆ ನಡೆಸಿ ಮೂರು ತಿಂಗಳಲ್ಲಿ ವರದಿ ನೀಡುವಂತೆ ಮೈಸೂರಿನ ಲೋಕಾಯುಕ್ತ ಪೊಲೀಸರಿಗೆ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಆದೇಶ ನೀಡಿದ್ದಾರೆ.
ಮುಡಾ ಕೇಸಲ್ಲಿ ಸಿಎಂ ಸಿದ್ದರಾಮಯ್ಯ ಪಾತ್ರದ ಬಗ್ಗೆ ತನಿಖೆ ನಡೆಸುವ ಅಗತ್ಯವಿದೆ. ಹೀಗಾಗಿ ತನಿಖೆಗೆ ಆದೇಶ ನೀಡಬೇಕು ಎಂದು ಕೋರಿ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಗಿಸಿದ್ದ ಜನಪ್ರತಿನಿಧಿಗಳ ಕೋರ್ಟ್, ನಿನ್ನೆ ಹೈಕೋರ್ಟ್ ನೀಡಿದ್ದ ಆದೇಶ ಪರಿಗಣಿಸಿ ಇಂದು ಆದೇಶ ಪ್ರಕಟಿಸಿತು. ಇದನ್ನೂ ಓದಿ: ಮಹಾಲಕ್ಷ್ಮಿ ಪ್ರಕರಣದಲ್ಲಿ ಟ್ವಿಸ್ಟ್ – ಶಂಕಿತ ಕೊಲೆ ಆರೋಪಿ ಒಡಿಶಾದಲ್ಲಿ ಆತ್ಮಹತ್ಯೆ
ಜನಪ್ರತಿಧಿಗಳ ಕೋರ್ಟ್ ಆದೇಶವೇನು?
ಸಿಎಂ ವಿರುದ್ಧ ಮೈಸೂರು ಲೋಕಾಯುಕ್ತ ಪೊಲೀಸರು ತನಿಖೆ ನಡೆಸಬೇಕು. ಸಿಆರ್‌ಪಿಸಿ ಸೆಕ್ಷನ್ 156(3) ಅಡಿ ತನಿಖೆ ನಡೆಸಬೇಕು. ಡಿಸೆಂಬರ್ 24ರ ಒಳಗೆ ತನಿಖಾ ವರದಿ ಸಲ್ಲಿಸಬೇಕು.
ಕೋರ್ಟ್ ಅಭಿಪ್ರಾಯ ಏನು?
ಮುಡಾ ಜಮೀನು ಸ್ವಾಧೀನ ನಂತರ ಪರಿಹಾರ ನಿಗದಿಯಾಗಿದೆ. ಪರಿಹಾರ ನಿಗದಿ ಬಳಿಕವೂ ಡಿನೋಟಿಫಿಕೇಷನ್ (Denotification) ನಡೆದಿದೆ. 14 ನಿವೇಶನಗಳ ಹಂಚಿಕೆ ಕಾನೂನು ಬಾಹಿರವಾಗಿದೆ. ದೇವರಾಜು ಹೆಸರಿನಲ್ಲಿ ನಕಲಿ ಡಿನೋಟಿಫೈ ಮಾಡಲಾಗಿದೆ. ಮಾಲೀಕರಲ್ಲದ ದೇವರಾಜುರಿಂದ ಭೂ ಮಾರಾಟ ಮಾಡಲಾಗಿದೆ. ಪಿಸಿ ಆಕ್ಟ್ 17ಎ ಅಡಿ ರಾಜ್ಯಪಾಲರ ಅನುಮತಿ ಪರಿಗಣಿಸಲಾಗಿದೆ. ತನಿಖೆಗೆ ಸಿಎಂ ಹಿಂಜರಿಯಬಾರದು ಎಂಬ ಹೈಕೋರ್ಟ್ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಗುತ್ತಿಗೆಯಲ್ಲಿ ಮೀಸಲಾತಿ ಕೊಡಿ – ಅಧಿಕಾರಿಗಳಿಗೆ ನರೇಂದ್ರಸ್ವಾಮಿ ಸೂಚನೆ
ಸಿಆರ್‌ಪಿಸಿ ಸೆಕ್ಷನ್ 156 (3) ಅಡಿ ತನಿಖೆ
ಮ್ಯಾಜಿಸ್ಟ್ರೇಟ್ ಆದೇಶದ ಮೇರೆಗೆ ಎಫ್‌ಐಆರ್ ದಾಖಲಿಸಿ ತನಿಖೆ ಮಾಡಬೇಕು. 90 ದಿನದಲ್ಲಿ ತನಿಖಾ ವರದಿಯನ್ನು ಸಲ್ಲಿಸಬೇಕು. ಬಂಧನ ಮಾತ್ರ ತನಿಖಾಧಿಕಾರಿ ವಿವೇಚನೆಗೆ ಬಿಟ್ಟಿದ್ದು.
ಯಾವ ಯಾವ ಕಾಯ್ದೆಗಳಡಿ ತನಿಖೆ?
ಒಟ್ಟು 4 ಕಾಯ್ದೆಗಳ ಅಡಿ ತನಿಖೆಗೆ ಆದೇಶ ನೀಡಲಾಗಿದೆ. ಐಪಿಸಿ ಸೆಕ್ಷನ್ 120ಬಿ, 166, 403, 420 ಮತ್ತು ಪಿಸಿ ಆಕ್ಟ್ ಸೆಕ್ಷನ್ 9, 13ರ ಅಡಿ ತನಿಖೆ ನಡೆಸಬೇಕು. ಇದರ ಜೊತೆ ಬೇನಾಮಿ ವ್ಯವಹಾರ ನಿಷೇಧ ಕಾಯ್ದೆ 53, 54 ಮತ್ತು ಭೂಕಬಳಿಕೆ ನಿಗ್ರಹ ಕಾಯ್ದೆಯಡಿಯೂ ತನಿಖೆ ನಡೆಸಬೇಕು.
ಯಾರ ವಿರುದ್ಧ ತನಿಖೆ ಮಾಡಬೇಕು?
* ಸಿದ್ದರಾಮಯ್ಯ, ಮುಖ್ಯಮಂತ್ರಿ
* ಪಾರ್ವತಿ ಬಿಎಂ, ಸಿದ್ದರಾಮಯ್ಯ ಪತ್ನಿ
* ಮಲ್ಲಿಕಾರ್ಜುನ ಸ್ವಾಮಿ, ಸಿದ್ದರಾಮಯ್ಯ, ಬಾಮೈದ
* ದೇವರಾಜು, ಮಾರಾಟಗಾರ
* ಇತರರು