ಬೈರುತ್: ಲೆಬನಾನ್‌ನಲ್ಲಿ ಪೇಜರ್, ವಾಕಿಟಾಕಿ ಸ್ಫೋಟಗೊಂಡ ಬೆನ್ನಲ್ಲೇ ಹಿಜ್ಜುಲ್ಲಾ ಸಂಘಟನೆ ಇಸ್ರೇಲ್ ಮೇಲೆ ಪ್ರತಿ ದಾಳಿಗೆ ಸಿದ್ಧತೆ ನಡೆಸಿತ್ತು. ಆದ್ರೆ ಹಿಜ್ಜುಲ್ಲಾದ (Hezbollah) ಸಿದ್ಧತೆಗೆ ಆರಂಭದಲ್ಲೇ ಇಸ್ರೇಲ್ (Israel) ಪೆಟ್ಟು ಕೊಟ್ಟಿದೆ.
ಇಸ್ರೇಲ್ ರಕ್ಷಣಾ ಪಡೆ (IDF) ಯುದ್ಧವಿಮಾನಗಳು ಸುಮಾರು 1000 ಬ್ಯಾರೆಲ್‌ಗಳನ್ನು ಒಳಗೊಂಡಿರುವ ಸುಮಾರು 100 ರಾಕೆಟ್ ಲಾಂಚರ್‌ಗಳನ್ನು (Hezbollah Rocket launcher) ಹೊಡೆದುರುಳಿಸಿವೆ. ಅಲ್ಲದೇ ಹಿಜ್ಬುಲ್ಲಾದ ರಕ್ಷಣಾ ಘಟಕವನ್ನೂ ಹೊಡೆದುರುಳಿಸಿದೆ ಎಂದು ವರದಿಯಾಗಿದೆ. ಈ ಕ್ಷಿಪಣಿ ಲಾಂಚರ್‌ಗಳು ಇಸ್ರೇಲ್-ಲೆಬನಾನ್ ಗಡಿಯಲ್ಲಿ ಸಿದ್ಧವಾಗಿದ್ದವು ಎಂದು ಇಸ್ರೇಲಿ ಮಿಲಿಟರಿ ಪಡೆ ಹೇಳಿಕೊಂಡಿದೆ.
ಇಸ್ರೇಲ್ ರಕ್ಷಣಾ ಪಡೆ ತನ್ನ ಎಕ್ಸ್ ಖಾತೆಯಲ್ಲೂ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಹಿಜ್ಬುಲ್ಲಾದವರು ಸುಮ್ಮನಿರದಿದ್ದರೇ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಸಹ ಎಚ್ಚರಿಸಿದೆ. ಇದೇ ವೇಳೆ ಗಾಜಾ ಯುದ್ಧ ಮುಗಿಯುವವರೆಗೂ ಇಸ್ರೇಲ್ ಉತ್ತರದ ಕಡೆ (ಲೆಬನಾನ್ ಗಡಿಯತ್ತ) ಬರುವುದಿಲ್ಲ ದಾಳಿ ನಡೆಸಿ ಎಂದು ಹಿಜ್ಜುಲ್ಲಾ ಮುಖಂಡರು ತಮ್ಮ ಸಂಘಟನೆಯನ್ನು ಪ್ರಚೋದಿಸಿದ್ದಾರೆ. ಇನ್ನೊಂದೆಡೆ ತಕ್ಷಣವೇ ಕದನ ವಿರಾಮ ಘೋಷಿಸಿ ಎಂದು ಬ್ರಿಟನ್ ಇಸ್ರೇಲ್ ಹಾಗೂ ಲೆಬನಾನ್‌ಗೆ ಕರೆ ನೀಡಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಮಿಡಲ್ ಈಸ್ಟ್‌ನಲ್ಲಿ ಅಮೆರಿಕದ ಸೇನಾಪಡೆಗಳು ಅಲರ್ಟ್ ಸ್ಥಿತಿಯಲ್ಲಿವೆ ಎಂದು ಪೆಂಟಗಾನ್ ವಕ್ತಾರೆ ಸರ್ಬಿನಾ ಸಿಂಗ್ ಹೇಳಿದ್ದಾರೆ
ಇತ್ತೀಚೆಗೆ ಉತ್ತರ ಗಡಿ ಭಾಗದಲ್ಲಿ ಇಸ್ರೇಲ್ ಹೆಚ್ಚಿನ ಪಡೆಗಳನ್ನು ನಿಯೋಜಿಸುತ್ತಿದೆ. ಗಾಜಾ ಗಡಿಯಿಂದ ಸೇನಾ ಪಡೆಗಳನ್ನು ಉತ್ತರದ ಗಡಿ ಭಾಗಕ್ಕೆ ಸ್ಥಳಾಂತರಿಸುವುದರಲ್ಲಿ ತೊಡಗಿದೆ. ಇದರ ನಡುವೆ ಅಧಿಕಾರಿಗಳು ವಾಗ್ದಾಳಿಯನ್ನೂ ಹೆಚ್ಚಿಸಿದ್ದಾರೆ. ಈ ಹಿಂದೆಯೂ ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವಿನ ಹೋರಾಟವು ಹಲವು ಭಾರಿ ಉಲ್ಬಣಗೊಂಡಿದ್ದಿದೆ.
ಲೆಬನಾನ್‌ನಲ್ಲಿ ಮಂಗಳವಾರ ಮತ್ತು ಬುಧವಾರ ಪೇಜರ್‌ಗಳು, ವಾಕಿ-ಟಾಕಿಗಳು ಮತ್ತು ಇತರ ಸಾಧನಗಳು ಸ್ಫೋಟಗೊಂಡು ಕನಿಷ್ಠ 20 ಮಂದಿ ಮೃತಪಟ್ಟದ್ದಾರೆ. ಸಹಸ್ರಾರು ಜನರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಈ ಸ್ಫೋಟಗಳಿಗೆ ಇಸ್ರೇಲ್ ಕಾರಣ ಎಂಬುದು ಹಿಜ್ಜುಲ್ಲಾದ ಆರೋಪವಾಗಿದೆ. ಅಲ್ಲದೆ ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹಿಜ್ಜುಲ್ಲಾ ಶಪಥ ಕೂಡ ಮಾಡಿದೆ.