ಹೆಚ್‌ಡಿಕೆ, ಬಿಎಸ್‌ವೈಯಿಂದ ಜಂಟಿ ಡಿನೋಟಿಫೈ – ಕಾಂಗ್ರೆಸ್ ಸಚಿವರಿಂದ ಗಂಭೀರ ಆರೋಪ

Public TV
2 Min Read
dinesh gundu rao krishne byre gowda dinesh gundu rao

ಬೆಂಗಳೂರು: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (Yediyurappa) ವಿರುದ್ಧ ಮತ್ತೆ ಡಿನೋಟಿಫಿಕೇಶನ್ (Denotification) ಆರೋಪ ಕೇಳಿಬಂದಿದೆ. 2007ರಲ್ಲಿ ಬೆಂಗಳೂರಿನ ಗಂಗೇನಹಳ್ಳಿಯ 1.11 ಎಕೆರ ಭೂಮಿಯನ್ನು ಸತ್ತವರ ಹೆಸರಲ್ಲಿ ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಜಂಟಿಯಾಗಿ ಡಿನೋಟಿಫೈ ಮಾಡಿಸಿದ್ದರು ಎಂದು ಕಾಂಗ್ರೆಸ್ (Congress) ಆರೋಪಿಸಿದೆ.

ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದ ಸಚಿವರಾದ ಕೃಷ್ಣಬೈರೇಗೌಡ, ದಿನೇಶ್ ಗುಂಡೂರಾವ್, ಸಂತೋಷ್ ಲಾಡ್ 2015ರಲ್ಲಿ ಲೋಕಾಯುಕ್ತದಲ್ಲಿ (Lokayukta) ಕೇಸ್‌ ದಾಖಲಾದರೂ ಈವರೆಗೂ ತನಿಖೆ ಪೂರ್ತಿಯಾಗಿಲ್ಲ. 2021ರಿಂದ ಲೋಕಾಯುಕ್ತದಲ್ಲಿ ಈ ಕೇಸ್ ವಿಚಾರದಲ್ಲಿ ಯಾವುದೇ ಪ್ರಗತಿಯಾಗಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಇನ್ಮುಂದೆ ಹಿಜ್ಬುಲ್ಲಾ ಹೋರಾಟಗಾರರು ಟಾಯ್ಲೆಟ್‌, ಆಹಾರ ಸೇವನೆಗೆ ಹೆದರಬೇಕು – ಮತ್ತೆ ಶಾಕ್‌ ಕೊಟ್ಟ ಇಸ್ರೇಲ್‌

hd kumaraswamy

ಕಾಂಗ್ರೆಸ್ ಸಚಿವರ ಆರೋಪ ಏನು?
1976 ರಲ್ಲಿ ಗಂಗೇನಹಳ್ಳಿಯಲ್ಲಿ ಬಿಡಿಎ (BDA) ನೋಟಿಫಿಕೇಶನ್ ಆಗಿದೆ. ಅದರಲ್ಲಿ 1.11 ಎಕ್ರೆ ಜಾಗ ಡಿನೋಟಿಫೈ ಮಾಡಲು 30 ವರ್ಷದ ನಂತರ ಅರ್ಜಿ ಸಲ್ಲಿಸಲಾಗಿದೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಡಿನೋಟಿಫೈಗೆ ರಾಜಶೇಖರಯ್ಯ ಎಂಬವರು ಅರ್ಜಿ ಸಲ್ಲಿಸಿದ್ದರು. ಆದರೆ ಈ ಜಮೀನಿಗೂ ರಾಜಶೇಖರಯ್ಯಗೂ ಯಾವುದೇ ಸಂಬಂಧ ಇಲ್ಲ.

ಸಿಎಂ ಆಗಿದ್ದ ಕುಮಾರಸ್ವಾಮಿ ಅವರು ಡಿನೋಟಿಫಿಕೇಶನ್‌ಗೆ ಸೂಚನೆ ಕೊಡುತ್ತಾರೆ. ಸೆಪ್ಟೆಂಬರ್‌ 11, 2007 ರಲ್ಲಿ ಇದೇ ಜಮೀನನ್ನು ಅನಿತಾ ಕುಮಾರಸ್ವಾಮಿ ತಾಯಿ ವಿಮಲಾ ಅವರಿಗೆ ಜಿಪಿಎ ಮಾಡಲಾಗಿದೆ. ಜಿಪಿಎ ರಾಜಶೇಖರಯ್ಯ ಮಾಡಿಸಿಕೊಳ್ಳದೇ ಮೂಲ ಮಾಲೀಕರ 21 ಮಂದಿ ವಾರಸುದಾರರಿಂದ ಆಗುತ್ತದೆ. ನಂತರ ಆ ಭೂಮಿ ಕುಮಾರಸ್ವಾಮಿ ಬಾಮೈದ ಚನ್ನಪ್ಪ ಎಂಬುವವರ ಹೆಸರಿಗೆ ರಿಜಿಸ್ಟ್ರರ್‌ ಆಗುತ್ತದೆ. ಇದನ್ನೂ ಓದಿ: ತಿರುಪತಿ ಲಡ್ಡುಗೆ ಪ್ರಾಣಿಗಳ ಕೊಬ್ಬು ಬಳಕೆ – ಜಗನ್ ಅವಧಿಯಲ್ಲಿ ಹಿಂದೂಗಳ ಭಾವನೆಗಳಿಗೆ ಧಕ್ಕೆ!

BS YEDIYURAPPA

2008ರಲ್ಲಿ ಸಿಎಂ ಆಗಿದ್ದ ಬಿಎಸ್‌ ಯಡಿಯೂರಪ್ಪನವರು ಡಿನೋಟಿಫೈಯಿಂದ ಕೈಬಿಡಿ ಅಂತ ಷರಾ ಬರೆಯುತ್ತಾರೆ. ಈ ರಾಜಶೇಖರಯ್ಯ ಎಂಬ ಬೇನಾಮಿ ಅರ್ಜಿ ಮೇರೆಗೆ ಈ ಷರಾ ಬರಯಲಾಗಿದೆ. 2015ರಲ್ಲಿ ಈ ಸಂಬಂಧ ಲೋಕಾಯುಕ್ತದಲ್ಲಿ ದೂರು ದಾಖಲಾಗುತ್ತದೆ. 2021 ರಲ್ಲಿ ಲೋಕಾಯುಕ್ತದಲ್ಲಿ ಕೊನೆಯ ಬಾರಿಗೆ ವಿಚಾರಣೆ ನಡೆಯುತ್ತದೆ.

ಕುಮಾರಸ್ವಾಮಿ ಇದ್ದಾಗ ಡಿನೋಟಿಫೈ ಮಾಡಲು ಮುಂದಾಗಿ ಯಡಿಯೂರಪ್ಪ ಸಿಎಂ ಆದಾಗ ಮಾಡಲು ಶಿಫಾರಸ್ಸು ಮಾಡಲಾಗಿದೆ. ಅಂದಿನ ಮುಖ್ಯ ಕಾರ್ಯದರ್ಶಿ ಡಿ‌‌ನೋಟಿಫೈ ಮಾಡಲು ಬರುವುದಿಲ್ಲ ಎಂದರೂ ಡಿನೋಟಿಫೈ ಮಾಡಲಾಗಿದೆ.

 

Share This Article