– ಸಾಲ ಮಾಡಿ ಬೆಳೆದಿದ್ದ ಸೋಯಾಬಿನ್ ಮಣ್ಣುಪಾಲು!
ಹಾವೇರಿ: ಕೌಟುಂಬಿಕ ಕಲಹದಿಂದ ವಿಚ್ಛೇದನ ಪಡೆದ ನಂತರವೂ ಪತಿ-ಪತ್ನಿ ಗಲಾಟೆ ಮುಂದುವರಿದು, ಸಾವಿರಾರು ಮೌಲ್ಯದ ಕೃಷಿ ಬೆಳೆ ನಾಶದ ಹಂತಕ್ಕೆ ತಲುಪಿರುವ ಘಟನೆ ಹಾವೇರಿಯಲ್ಲಿ (Haveri) ನಡೆದಿದೆ. ವಿಚ್ಛೇದಿತ ಪತಿ ವಿರುದ್ಧವೇ ಈಗ ಪತ್ನಿ ಗಂಭೀರ ಆರೋಪ ಮಾಡಿದ್ದಾಳೆ.
ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ ವರ್ದಿ ಗ್ರಾಮದಲ್ಲಿ ನಡೆದ ಘಟನೆಯಿದು. ಕಳೆದ ಎರಡು-ಮೂರು ದಿನಗಳ ಹಿಂದೆ, ಹೇಮಲತಾ ಕಟಗಿ ಎಂಬವರಿಗೆ ಸೇರಿದ ಎರಡೂವರೆ ಎಕರೆಯಲ್ಲಿ ಬೆಳೆದಿದ್ದ ಸೋಯಾಬಿನ್ ಬೆಳೆಯನ್ನು ರಾತ್ರೋರಾತ್ರಿ ನಾಶ ಮಾಡಲಾಗಿದೆ. ಇದನ್ನೂ ಓದಿ: ಗಡಿಭಾಗದ ಮಕ್ಕಳನ್ನು ಶಾಲೆಗೆ ಸೆಳೆಯೋಕೆ ಶಿಕ್ಷಕರ ಪ್ಲ್ಯಾನ್ – ಸ್ವಂತ ಖರ್ಚಿನಲ್ಲಿ ಎಲ್‌ಕೆಜಿ, ಯುಕೆಜಿ
ಹೇಮಲತಾ ಮತ್ತು ಸತೀಶ್‌ಗೆ ಆರು ವರ್ಷದ ಹಿಂದೆ ಮದುವೆ ಆಗಿತ್ತು. ಇಬ್ಬರ ನಡುವೆ ಕೌಟುಂಬಿಕ ಕಲಹದಿಂದ ಒಂದೂವರೆ ವರ್ಷದ ಹಿಂದೆ ವಿಚ್ಛೇದನ ಪಡೆದುಕೊಂಡಿದ್ದರು. ಹಣಕ್ಕಾಗಿ ರಾಜಿ ಪಂಚಾಯಿತಿ ಮಾಡಿಸಿದ್ದ ಗ್ರಾಮಸ್ಥರು ಜಮೀನು ಉಳುಮೆ ಮಾಡಿಕೊಳ್ಳೋಕೆ ಅವಕಾಶ ಮಾಡಿಕೊಟ್ಟಿದ್ದರು. ಹೇಮಲತಾ ಕುಟುಂಬದವರು ಈ ಬಾರಿ ಸೋಯಾಬಿನ್ ಬೆಳೆದಿದ್ದರು. ಜಮೀನು ಉಳುಮೆ ಮಾಡೋವಾಗಲೇ ಸತೀಶ್ ಸವಾಲು ಹಾಕಿದ್ದ. ಈಗ ಆತನೇ ಬೆಳೆ ನಾಶ ಮಾಡಿದ್ದಾನೆ ಎಂದು ಹೇಮಲತಾ ಆರೋಪಿಸಿದ್ದಾರೆ.
ಎರಡೂವರೆ ಎಕರೆ ಜಮೀನಿನಲ್ಲಿ ಬೆಳೆದಿದ್ದ ಸೋಯಾಬಿನ್ ಬೆಳೆಯನ್ನ ಟ್ರ‍್ಯಾಕ್ಟರ್ ಬಳಸಿ ಸಂಪೂರ್ಣ ನಾಶ ಮಾಡಿದ್ದಾರೆ ಎಂದು ಹೇಮಲತಾ ಹೇಳುತ್ತಿದ್ದಾರೆ. ನನಗೂ ಇದಕ್ಕೂ ಸಂಬಂಧನೇ ಇಲ್ಲ ಅಂತಾ ಸತೀಶ್ ಹೇಳುತ್ತಿದ್ದಾರೆ. ಆದರೆ ಸಂಬಂಧಿಕರು ಸತೀಶ್ ಮೇಲೆ ಆರೋಪ ಮಾಡುತ್ತಿದ್ದಾರೆ. 60 ರಿಂದ 70 ಸಾವಿರ ಖರ್ಚು ಮಾಡಿ ಬೆಳೆದಿದ್ದೇವೆ. ಕೌಟುಂಬಿಕ ಕಲಹದ ದ್ವೇಷ ಇಟ್ಟುಕೊಂಡು, ಜಮೀನು ತಾನೇ ಉಳುಮೆ ಮಾಡುವ ಉದ್ದೇಶದಿಂದ ರಾತ್ರೋರಾತ್ರಿ ಬಂದು ಬೆಳೆನಾಶ ಮಾಡಿದ್ದಾನೆ ಎಂದು ಕುಟುಂಬದ ಸದಸ್ಯರು ಅರೋಪಿಸಿದ್ದಾರೆ. ಜೊತೆಗೆ ಆಡೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಬೆಳೆನಾಶ ಮಾಡಿರುವವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಲೋಕಾಯುಕ್ತದಲ್ಲಿ ವಿಚಾರಣೆಗೆ ಬಾಕಿ ಉಳಿದಿವೆ 18 ಸಾವಿರಕ್ಕೂ ಹೆಚ್ಚು ಕೇಸ್