Breaking – ಸಿಎಂ ಹುದ್ದೆಗೆ ರಾಜೀನಾಮೆ ಘೋಷಿಸಿದ ಅರವಿಂದ್‌ ಕೇಜ್ರಿವಾಲ್‌!

Public TV
3 Min Read
ARVIND KEJRIWAL

ನವದೆಹಲಿ: ಆಮ್‌ ಆದ್ಮಿ ಪಕ್ಷದ (AAP) ನಾಯಕರೂ ಆಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ (Arvind Kejriwal) ಅವರು ಮುಂದಿನ 48 ಗಂಟೆಗಳ ಒಳಗೆ ತಮ್ಮ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಭಾನುವಾರ ಘೋಷಿಸಿದ್ದಾರೆ.

ಹೊಸ ಅಬಕಾರಿ ನೀತಿ ಪ್ರಕರಣದಲ್ಲಿ (Liquor Policy Case) ಬರೋಬ್ಬರಿ 6 ತಿಂಗಳು ಜೈಲಿನಲ್ಲಿದ್ದ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಇದೇ ಸೆಪ್ಟೆಂಬರ್‌ 13ರಂದು ಷರತ್ತು ಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಜೈಲಿಂದ ರಿಲೀಸ್‌ ಆದ ನಂತರ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾಡಿದ ಮೊದಲ ಭಾಷಣದಲ್ಲಿ ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ನೂತನ ಮುಖ್ಯಮಂತ್ರಿ ಆಯ್ಕೆಗೆ ನಿರ್ಧರಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಇದೇ ವೇಳೆ ಮಹಾರಾಷ್ಟ್ರ ಚುನಾವಣೆಯೊಂದಿಗೆ ದೆಹಲಿ ವಿಧಾನಸಭಾ ಚುನಾವಣೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.

ಮುಂದಿನ 48 ಗಂಟೆಗಳ ಒಳಗೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದೇನೆ. ಆ ನಂತರ ಸಚಿವ ಸಂಪುಟ ಸಭೆಯಲ್ಲಿ ಪಕ್ಷದ ಸದಸ್ಯರೊಬ್ಬರನ್ನು ಮುಖ್ಯಮಂತ್ರಿಯಾಗಿ ಹೆಸರಿಸಲಾಗುವುದು. ನಾನು ಜನತೆ ತೀರ್ಪು ನೀಡುವವರೆಗೂ ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಳ್ಳುವುದಿಲ್ಲ. ಪ್ರತಿ ಮನೆ, ಬೀದಿಗೆ ಹೋಗುತ್ತೇನೆ, ಅಲ್ಲಿಯವರೆಗೆ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರುವುದಿಲ್ಲ. ನಾನು ಜನರಿಂದ ತೀರ್ಪು ಪಡೆಯುತ್ತೇನೆ ಎಂದು ಗುಡುಗಿದ್ದಾರೆ. ಇದನ್ನೂ ಓದಿ: Suicide Pod; ಒಂದು ಬಟನ್‌ ಒತ್ತಿದರೆ ಸಾಕು ನಿಮಿಷದಲ್ಲಿ ನೋವಿಲ್ಲದೇ ಸಾಯಬಹುದು!

ಕೇಸ್‌ ಹಾಕಿದ್ರೆ ರಾಜೀನಾಮೆ ಕೊಡಬೇಡಿ:
ಪ್ರಜಾಪ್ರಭುತ್ವ ಉಳಿಸುವ ಉದ್ದೇಶದಿಂದ ಈ ಹಿಂದೆ ಬಂಧನಕ್ಕೊಳಗಾಗಿದ್ದರೂ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರಲಿಲ್ಲ ಎಂದ ಅವರು, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ಉಲ್ಲೇಖಿಸಿದರು. ನಾನು ಬಿಜೆಪಿಯೇತರರಿಗೆ ಮನವಿ ಮಾಡಲು ಬಯಸುತ್ತೇನೆ, ಅವರು ನಿಮ್ಮ ವಿರುದ್ಧ ಪ್ರಕರಣ ದಾಖಲಿಸಿದರೆ ರಾಜೀನಾಮೆ ನೀಡಬೇಡಿ. ಇದು ಅವರ ಹೊಸ ಆಟ ಎಂದು ಕರೆ ನೀಡಿದ್ದಾರೆ.

ಇದು ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಗಿಂತ ಹೆಚ್ಚು ಸರ್ವಾಧಿಕಾರಿ ಆಡಳಿತವಾಗಿದೆ. ಕೇಂದ್ರ ಸರ್ಕಾರ ಏನೇ ಪಿತೂರಿ ಮಾಡಿದರೂ ನಮ್ಮ ಸಂಕಲ್ಪ ಮುರಿಯಲು ಸಾಧ್ಯವಿಲ್ಲ, ರಾಷ್ಟ್ರಕ್ಕಾಗಿ ನಮ್ಮ ಹೋರಾಟ ಮುಂದುವರಿಯುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: Video | ಕೇಸರಿ ಶಾಲು ಹಿಡಿದು ವೇದಿಕೆಗೆ ನುಗ್ಗಿದ ಯುವಕ – ಸಿಎಂ ಕಾರ್ಯಕ್ರಮದಲ್ಲಿ ಭದ್ರತಾ ಲೋಪ?

ಜೈಲಿನ ಕಹಿ ಘಟನೆ ನೆನೆದ ಕೇಜ್ರಿವಾಲ್‌:
ಇದೇ ವೇಳೆ ಜೈಲಿನ ಕಹಿ ಘಟನೆಗಳನ್ನು ನೆನೆದು ಕೇಜ್ರಿವಾಲ್‌ ಮಾತನಾಡಿದ್ದಾರೆ. ನಾನು ಜೈಲಿನಲ್ಲಿದ್ದಾಗ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ನನ್ನ ಅನುಪಸ್ಥಿತಿಯಲ್ಲಿ ಅತಿಶಿ ಅವರಿಂದ ಧ್ವಜಾರೋಹಣಕ್ಕೆ ಅನುಮತಿ ಕೋರಿ ರಾಜ್ಯಪಾಲರಿಗೆ ಪತ್ರ ಬರೆದಿದ್ದೆ. ಆದ್ರೆ ಪತ್ರವನ್ನ ಹಿಂತಿರುಗಿಸಿದರು. ನನ್ನ ಕುಟುಂಬವನ್ನು ಭೇಟಿ ಮಾಡಬೇಕೆಂದು ಮತ್ತೊಂದು ಪತ್ರ ಬರೆದೆ, ಅದನ್ನೂ ತಿರಸ್ಕರಿಸಲಾಯಿತು ಎಂದು ಬೇಸರ ಹೊರಹಾಕಿದ್ದಾರೆ. ಇದನ್ನೂ ಓದಿ: ಶಾಸಕ ಮುನಿರತ್ನ ಬಂಧನ ಪ್ರಕರಣ – ತಪ್ಪು ಮಾಡಿರೋದು ಸಾಮಾನ್ಯ ವ್ಯಕ್ತಿಯಲ್ಲ ಒಬ್ಬ ಮಾಜಿ ಮಂತ್ರಿ: ಡಿಕೆ ಸುರೇಶ್‌

Share This Article