ಈ ಹಿಂದೆ ಮುಕ್ತಿ, ಆರ್ಟಿಕಲ್ 370 ಚಿತ್ರ ನಿರ್ದೇಶಿಸಿದ ಕೆ.ಶಂಕರ್ (Shankar) ಇದೀಗ ಮತ್ತೊಂದು ಚಿತ್ರ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಆ ಚಿತ್ರದ ಹೆಸರು ‘ಹಲೋ ಸರ್’ (Hello Sir). ಗಾಳಿ ಆಂಜನೇಯಸ್ವಾಮಿ ದೇವಸ್ಥಾನದ ಹತ್ತಿರ ಬರುವ ಶ್ರೀ ಬೀರೇಶ್ವರಸ್ವಾಮಿ ದೇವಸ್ಥಾನದಲ್ಲಿ ಈ ಚಿತ್ರದ ಮುಹೂರ್ತ ಸಮಾರಂಭ ನೆರವೇರಿತು. ಮೊದಲ ದೃಶ್ಯಕ್ಕೆ ಭಾ.ಮ. ಗಿರೀಶ್ ಕ್ಯಾಮೆರಾ ಸ್ವಿಚಾನ್ ಮಾಡಿದರೆ, ನಿರ್ಮಾಪಕ ರಮೇಶ್ ಕ್ಲಾಪ್ ಮಾಡಿದರು. ನಾಯಕ, ನಾಯಕಿ ದೇವರನ್ನು ಪ್ರಾರ್ಥಿಸುವ ಪ್ರಥಮ ದೃಶ್ಯವನ್ನು ನಿರ್ದೇಶಕ ಶಂಕರ್ ಚಿತ್ರಿಸಿಕೊಂಡರು.
ತಮ್ಮ ಹಣ, ಅಂತಸ್ತಿನ ಪ್ರಭಾವ ಬಳಸಿಕೊಂಡು ಕಾನೂನು ಉಲ್ಲಂಘಿಸಿ, ಸಮಾಜದ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತಿರುವವರ ವಿರುದ್ದ ಹೋರಾಡುವ ಯುವಕನ ಕಥೆಯಿದು. ಇಂದಿನಿಂದಲೇ ಚಿತ್ರೀಕರಣ ಆರಂಭಿಸಿ 45 ದಿನಗಳ ಕಾಲ ಮಂಗಳೂರು, ಜೋಗಫಾಲ್ಸ್, ತಲಕಾಡು, ಮಹದೇವಪುರದ ಸುತ್ತಮುತ್ತ 45 ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ನಡೆಸುವ ಯೋಜನೆ ಚಿತ್ರತಂಡಕ್ಕಿದೆ.
ಶ್ರೀ ಅಂಕುರ ಕ್ರಿಯೆಷನ್ ಬ್ಯಾನರ್ ಅಡಿ ಎಲ್. ಮಂಜುನಾಥ್ ಮತ್ತು ಗೆಳೆಯರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕೆ ಶಂಕರ್ ಕಥೆ, ಚಿತ್ರಕಥೆ ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಎಂ.ಎನ್.ಕೃಪಾಕರ್ ಅವರ ಸಂಗೀತ, ಚಂದ್ರು ಸೊಂಡೇಕೊಪ್ಪ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಮನ್ವಿತ್, ಸಮನ್ವಿತಾ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದು ಉಳಿದ ಕಲಾವಿದರ ಆಯ್ಕೆ ನಡೆಯುತ್ತಿದೆ.