ಕೃಷಿಗೆ ಡಿಜಿಟಲ್ ಸ್ಪರ್ಶ; ಆಧಾರ್‌ನಂತೆ ರೈತರ ಜಮೀನಿಗೆ ಐಡಿ, ಡಿಜಿಟಲ್ ಮೂಲಕ ಬೆಳೆ ಸಮೀಕ್ಷೆ

Public TV
5 Min Read
Digital Agriculture Mission

– ರೈತರ ಜೀವನ ಪರಿವರ್ತಿಸುವ ತಂತ್ರಜ್ಞಾನ
– ಮಿಷನ್‌ಗಾಗಿ 2,817 ಕೋಟಿ ಮೀಸಲಿಟ್ಟ ಕೇಂದ್ರ

ದು ಡಿಜಿಟಲ್ ಯುಗ. ಎಲ್ಲಾ ಕ್ಷೇತ್ರಗಳನ್ನು ಡಿಜಿಟಲ್ ವ್ಯಾಪ್ತಿಗೆ ತರುವ ಕೆಲಸ ಸರ್ಕಾರದ ಮಟ್ಟದಲ್ಲಾಗುತ್ತಿದೆ. ಭಾರತದ ಬೆನ್ನೆಲುಬಾದ ಕೃಷಿ ವಲಯವನ್ನೂ ಡಿಜಿಟಲ್ ವ್ಯಾಪ್ತಿಗೆ ತಂದು ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಮಹತ್ವದ ಯೋಜನೆ ರೂಪಿಸಿದೆ. 3 ವರ್ಷಗಳ ವಿಳಂಬದ ನಂತರ ಕೊನೆಗೂ ಭಾರತದ ‘ಡಿಜಿಟಲ್ ಕೃಷಿ ಮಿಷನ್’ ಯೋಜನೆ ಅಂತಿಮವಾಗಿ ರೂಪುಗೊಳ್ಳುತ್ತಿದೆ. ಭಾರತೀಯ ಕೃಷಿ ವಲಯವನ್ನು ಸೂಪರ್‌ಚಾರ್ಜ್ ಮಾಡಲು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (ಡಿಪಿಐ) ರಚನೆಗಾಗಿ 2,817 ಕೋಟಿ ಮೊತ್ತದ ಯೋಜನೆಯನ್ನು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ. ಕೃಷಿ ಕ್ಷೇತ್ರದಲ್ಲಿ ಇದೊಂದು ಆಶಾದಾಯಕ ಬೆಳವಣಿಗೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಏನಿದು ಡಿಜಿಟಲ್ ಕೃಷಿ ಮಿಷನ್? ರೈತರು ಮತ್ತು ಕೃಷಿ ವಲಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯೋಣ ಬನ್ನಿ.

ಡಿಜಿಟಲ್ ಕೃಷಿ ಮಿಷನ್ ಅಂದ್ರೇನು?
ಡಿಜಿಟಲ್ ತಂತ್ರಜ್ಞಾನ ಬಳಸಿಕೊಂಡು ಕೃಷಿ ವಲಯ ಆಧುನಿಕಗೊಳಿಸುವುದು. ಡಿಜಿಟಲ್ ಮೂಲಕ ಬೆಳೆ ಸಮೀಕ್ಷೆ, ಆಧಾರ್‌ನಂತೆ ರೈತರ ಜಮೀನಿಗೆ ವಿಶೇಷ ಐಡಿಯನ್ನೂ ಈ ಯೋಜನೆಯಡಿ ನೀಡಲಾಗುತ್ತದೆ.

ಡಿಪಿಐ ಮಿಷನ್
ಕೃಷಿ ವಲಯದಲ್ಲಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ರೂಪಿಸುವ ಉದ್ದೇಶವನ್ನು ಈ ಮಿಷನ್ ಹೊಂದಿದೆ. ಇತರೆ ವಲಯಗಳಲ್ಲಿ ಸರ್ಕಾರದ ಪ್ರಮುಖ ಇ-ಆಡಳಿತ ಉಪಕ್ರಮಗಳಿಗೆ ಸಹಕಾರಿಯಾಗಿದೆ. ಇದು ಆಧಾರ್ ಯುನಿಕ್ ಐಡಿ, ಡಿಜಿಲಾಕರ್ ಡಾಕ್ಯುಮೆಂಟ್ ಫೋಲ್ಡರ್, ಇ-ಸೈನ್ ಎಲೆಕ್ಟ್ರಾನಿಕ್ ಸಿಗ್ನೇಚರ್ ಸರ್ವಿಸ್, ಏಕೀಕೃತ ಪಾವತಿಗಳ ಇಂಟರ್ಫೇಸ್ (ಯುಪಿಐ), ತ್ವರಿತ ಹಣ ವರ್ಗಾವಣೆಯಂತಹ ಡಿಜಿಟಲ್ ಪರಿಹಾರಗಳು ಸಿಗಲಿವೆ.

ಡಿಜಿಟಲ್ ಕೃಷಿ ಮಿಷನ್ ಅಡಿಯಲ್ಲಿ ಡಿಪಿಐನ 3 ಪ್ರಮುಖ ಘಟಕಗಳನ್ನು ಹೆಸರಿಸಲಾಗಿದೆ. 1) ಅಗ್ರಿಸ್ಟಾಕ್, 2) ಡಿಎಸ್‌ಎಸ್ (ಕೃಷಿ ನಿರ್ಧಾರ ಬೆಂಬಲ ವ್ಯವಸ್ಥೆ), 3) ಮಣ್ಣಿನ ಪಾರ್ಶ್ವ ನಕ್ಷೆ. ಈ ಘಟಕಗಳು ರೈತರಿಗೆ ವಿವಿಧ ಸೇವೆಗಳನ್ನು ಪಡೆದುಕೊಳ್ಳಲು ಸಹಕಾರಿಯಾಗಲಿವೆ. ಕೃಷಿ ಉತ್ಪಾದನೆಯ ನಿಖರವಾದ ಅಂದಾಜುಗಳನ್ನು ಒದಗಿಸುವ ಡಿಜಿಟಲ್ ಸಾಮಾನ್ಯ ಬೆಳೆ ಅಂದಾಜು ಸಮೀಕ್ಷೆ  ಎಂಬ ತಂತ್ರಜ್ಞಾನ ಆಧಾರಿತ ಪರಿಸರ ವ್ಯವಸ್ಥೆಯನ್ನು ರಚಿಸುವ ಗುರಿಯನ್ನು ಈ ಮಿಷನ್ ಹೊಂದಿದೆ.

Digital Agriculture Mission 2

ಮಿಷನ್‌ಗೆ ಧನಸಹಾಯವೆಷ್ಟು?
ಯೋಜನೆಗಾಗಿ 2,817 ಕೋಟಿ ರೂಪಾಯಿಗಳ ಬಜೆಟ್ ಹಂಚಿಕೆ ಮಾಡಲಾಗಿದೆ. ಅದರಲ್ಲಿ 1,940 ಕೋಟಿ ರೂ. ಅನ್ನು ಕೇಂದ್ರ ಮತ್ತು ಉಳಿದ ಹಣವನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಭರಿಸಬೇಕು. ಯೋಜನೆ ಮುಂದಿನ ಎರಡು ವರ್ಷಗಳಲ್ಲಿ (2025-26ರವರೆಗೆ ದೇಶಾದ್ಯಂತ ಹೊರಹೊಮ್ಮಲಿದೆ.

2021-22ರ ಆರ್ಥಿಕ ವರ್ಷದಲ್ಲಿ ಮಿಷನ್ ಅನ್ನು ಪ್ರಾರಂಭಿಸಲು ಯೋಜಿಸಲಾಗಿತ್ತು. ಆದರೆ ಕೋವಿಡ್-19 ಸಾಂಕ್ರಾಮಿಕ ರೋಗವು ಯೋಜನೆ ಜಾರಿಗೆ ಅಡ್ಡಿಪಡಿಸಿತ್ತು. ಸರ್ಕಾರವು ತರುವಾಯ 2023-24 ಮತ್ತು 2024-25ರ ಕೇಂದ್ರ ಬಜೆಟ್‌ನಲ್ಲಿ ಕೃಷಿಗಾಗಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ರೂಪಿಸುವುದಾಗಿ ಘೋಷಿಸಿತು.

ಜುಲೈ 23 ರಂದು ತಮ್ಮ ಬಜೆಟ್ ಭಾಷಣದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ನಮ್ಮ ಸರ್ಕಾರವು ರಾಜ್ಯಗಳ ಸಹಭಾಗಿತ್ವದಲ್ಲಿ ಕೃಷಿಯಲ್ಲಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (ಡಿಪಿಐ) ಅನುಷ್ಠಾನಕ್ಕೆ ಅನುಕೂಲ ವಾತಾವರಣ ಕಲ್ಪಿಸಿದೆ. ಈ ವರ್ಷದಲ್ಲಿ, ಖಾರಿಫ್‌ಗಾಗಿ ಡಿಪಿಐ ಬಳಸಿ ಡಿಜಿಟಲ್ ಬೆಳೆ ಸಮೀಕ್ಷೆಯನ್ನು 400 ಜಿಲ್ಲೆಗಳಲ್ಲಿ ತೆಗೆದುಕೊಳ್ಳಲಾಗುವುದು. 6 ಕೋಟಿ ರೈತರು ಮತ್ತು ಅವರ ಜಮೀನುಗಳ ವಿವರಗಳನ್ನು ‘ರೈತರು ಮತ್ತು ಭೂ ದಾಖಲಾತಿ’ ವ್ಯಾಪ್ತಿಗೆ ತರಲಾಗುವುದು ಎಂದು ತಿಳಿಸಿದ್ದರು.

ಯೋಜನೆ ಯಾವ ಹಂತದಲ್ಲಿದೆ?
ಕೃಷಿ ಸಚಿವಾಲಯವು ಕೃಷಿಗಾಗಿ ಡಿಪಿಐ ರಚನೆ ಮತ್ತು ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರಗಳೊಂದಿಗೆ ತಿಳುವಳಿಕೆ ಪತ್ರಗಳಿಗೆ (ಎಂಒಯು) ಸಹಿ ಹಾಕುವ ಪ್ರಕ್ರಿಯೆಯಲ್ಲಿದೆ. 19 ರಾಜ್ಯಗಳು ಇಲ್ಲಿಯವರೆಗೆ ಮಂಡಳಿಗೆ ಬಂದಿವೆ. ಮಿಷನ್ ಅಡಿಯಲ್ಲಿ ರೂಪಿಸಲಾದ ಮೂರು ಡಿಪಿಐಗಳಲ್ಲಿ ಒಂದಾದ ಅಗ್ರಿಸ್ಟಾಕ್ ಅನ್ನು ಕಾರ್ಯಗತಗೊಳಿಸಲು ಐಟಿ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲಾಗಿದ್ದು, ಪ್ರಾಯೋಗಿಕ ಆಧಾರದ ಮೇಲೆ ಪರೀಕ್ಷಿಸಲಾಗಿದೆ.

1.ಅಗ್ನಿಸ್ಟಾಕ್
ರೈತ-ಕೇಂದ್ರಿತ ಅಗ್ರಿಸ್ಟಾಕ್ ಮೂರು ಮೂಲಭೂತ ಕೃಷಿ-ವಲಯ ನೋಂದಣಿಗಳು ಅಥವಾ ಡೇಟಾಬೇಸ್‌ಗಳನ್ನು ಒಳಗೊಂಡಿದೆ. ರೈತರ ನೋಂದಾವಣೆ, ಜಿಯೋ-ಉಲ್ಲೇಖಿತ ಗ್ರಾಮ ನಕ್ಷೆಗಳು ಮತ್ತು ಬೆಳೆ ಬಿತ್ತನೆಯ ನೋಂದಣಿ, ಇವುಗಳನ್ನು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದ ಸರ್ಕಾರಗಳು ನಿರ್ವಹಿಸುತ್ತವೆ.

ರೈತರ ನೋಂದಣಿ: ರೈತರಿಗೆ ಆಧಾರ್‌ಗೆ ಸಮಾನವಾದ ಡಿಜಿಟಲ್ ಗುರುತಿನ ಚೀಟಿ (ಫಾರ್ಮರ್ ಐಡಿ) ನೀಡಲಾಗುವುದು. ಇದಕ್ಕೆ ಭೂಮಿಯ ದಾಖಲೆಗಳು, ಜಾನುವಾರುಗಳ ಮಾಲೀಕತ್ವ, ಬಿತ್ತಿದ ಬೆಳೆಗಳು, ಜನಸಂಖ್ಯಾ ವಿವರಗಳು, ಕುಟುಂಬದ ವಿವರಗಳು, ಯೋಜನೆಗಳು ಮತ್ತು ಪ್ರಯೋಜನಗಳು ಎಲ್ಲವನ್ನೂ ಲಿಂಕ್ ಮಾಡಲಾಗುವುದು. ಫಾರೂಕಾಬಾದ್ (ಉತ್ತರ ಪ್ರದೇಶ), ಗಾಂಧಿನಗರ (ಗುಜರಾತ್), ಬೀಡ್ (ಮಹಾರಾಷ್ಟ್ರ),ಯಮುನಾ ನಗರ (ಹರಿಯಾಣ), ಫತೇಘರ್ ಸಾಹಿಬ್ (ಪಂಜಾಬ್), ಮತ್ತು ವಿರುಧುನಗರ (ತಮಿಳುನಾಡು). ರೈತರ ಐಡಿ ರೂಪಿಸುವ ಪ್ರಾಯೋಗಿಕ ಯೋಜನೆಗಳನ್ನು ಈ ಆರು ಜಿಲ್ಲೆಗಳಲ್ಲಿ ಕೈಗೊಳ್ಳಲಾಗಿದೆ.

ಸರ್ಕಾರವು 11 ಕೋಟಿ ರೈತರಿಗೆ ಡಿಜಿಟಲ್ ಗುರುತಿನ ಚೀಟಿ ನೀಡುವ ಗುರಿಯನ್ನು ಹೊಂದಿದೆ. ಅವರಲ್ಲಿ 6 ಕೋಟಿ ಪ್ರಸಕ್ತ (2024-25) ಹಣಕಾಸು ವರ್ಷದಲ್ಲಿ, ಇನ್ನೂ 3 ಕೋಟಿ 2025-26 ರಲ್ಲಿ ಮತ್ತು ಉಳಿದ 2 ಕೋಟಿ ರೈತರಿಗೆ 2026-27ರಲ್ಲಿ ನೀಡಲಾಗುವುದು. ಕಳೆದ ತಿಂಗಳು, 2024-25ರ ಬಂಡವಾಳ ಹೂಡಿಕೆಗಾಗಿ ರಾಜ್ಯಗಳಿಗೆ ವಿಶೇಷ ನೆರವು ನೀಡುವ ಯೋಜನೆಯಡಿ ರೈತರ ನೋಂದಣಿಗಾಗಿ ರಾಜ್ಯಗಳಿಗೆ 5,000 ಕೋಟಿ ರೂ. ಮೀಸಲಿಡಲಾಗಿದೆ.

ಹಣಕಾಸು ಸಚಿವಾಲಯವು ಆ.9 ರಂದು ಯೋಜನೆಗಾಗಿ ರಾಜ್ಯಗಳಿಗೆ ಮಾರ್ಗಸೂಚಿ ಹೊರಡಿಸಿದೆ. ಒಮ್ಮೆ ರಿಜಿಸ್ಟ್ರಿ ಮಾಡಿದ ನಂತರ ರೈತರು ತಮ್ಮನ್ನು ಡಿಜಿಟಲ್ ಮೂಲಕ ಗುರುತಿಸಲು ಮತ್ತು ದೃಢೀಕರಿಸಲು ಸಾಧ್ಯವಾಗುತ್ತದೆ. ಇದರಿಂದ ಯೋಜನೆಗಳಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆ.

Digital Agriculture Mission 1

ಬಿತ್ತನೆ ಬೆಳೆ ನೋಂದಣಿ:
ಇದು ರೈತರು ಹಾಕಿದ ಬೆಳೆಗಳ ವಿವರಗಳನ್ನು ನೀಡುತ್ತದೆ. ಪ್ರತಿ ಬೆಳೆ ಋತುವಿನಲ್ಲಿ ಡಿಜಿಟಲ್ ಬೆಳೆ ಸಮೀಕ್ಷೆಗಳು, ಮೊಬೈಲ್ ಆಧಾರಿತ ಗ್ರೌಂಡ್ ಸಮೀಕ್ಷೆಗಳ ಮೂಲಕ ಮಾಹಿತಿಯನ್ನು ದಾಖಲಿಸಲಾಗುತ್ತದೆ. ಮುಂದಿನ ಎರಡು ವರ್ಷಗಳಲ್ಲಿ ರಾಷ್ಟ್ರದಾದ್ಯಂತ ಡಿಜಿಟಲ್ ಬೆಳೆ ಸಮೀಕ್ಷೆಯನ್ನು ಪ್ರಾರಂಭಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಪ್ರಸಕ್ತ (2024-25) ಹಾಗೂ 2025-26 ರಲ್ಲಿ 400 ಜಿಲ್ಲೆಗಳನ್ನೊಳಗೊಂಡು ಸಮೀಕ್ಷೆ ನಡೆಸಲಾಗುತ್ತದೆ.

ಭೂ-ದಾಖಲೆಗಳ ಗ್ರಾಮ ನಕ್ಷೆ: ಈ ನಕ್ಷೆಗಳು ಭೂ ದಾಖಲೆಗಳಲ್ಲಿನ ಭೌಗೋಳಿಕ ಮಾಹಿತಿಯನ್ನು ಅವುಗಳ ಭೌತಿಕ ಸ್ಥಳಗಳೊಂದಿಗೆ ಲಿಂಕ್ ಮಾಡುತ್ತದೆ.

2. ಕೃಷಿ ಡಿಎಸ್‌ಎಸ್
ಇತ್ತೀಚೆಗೆ ಅನಾವರಣಗೊಂಡಿರುವ ಕೃಷಿ ನಿರ್ಧಾರ ಬೆಂಬಲ ವ್ಯವಸ್ಥೆಯು ಬೆಳೆಗಳು, ಮಣ್ಣು, ಹವಾಮಾನ ಮತ್ತು ಜಲಸಂಪನ್ಮೂಲ ಇತ್ಯಾದಿಗಳ ಮೇಲಿನ ರಿಮೋಟ್ ಸೆನ್ಸಿಂಗ್-ಆಧಾರಿತ ಮಾಹಿತಿಯನ್ನು ಏಕೀಕರಿಸಲು ಸಮಗ್ರ ಜಿಯೋಸ್ಪೇಷಿಯಲ್ ವ್ಯವಸ್ಥೆಯನ್ನು ಹೊಂದಿರುತ್ತದೆ. ಈ ಮಾಹಿತಿಯು ಬೆಳೆ ಬಿತ್ತಿದ ನಮೂನೆಗಳನ್ನು ಗುರುತಿಸಲು, ಬರ/ಪ್ರವಾಹದ ಮೇಲ್ವಿಚಾರಣೆ ಮತ್ತು ತಂತ್ರಜ್ಞಾನ ಮಾದರಿ ಆಧಾರಿತ ಇಳುವರಿ ಮೌಲ್ಯಮಾಪನಕ್ಕಾಗಿ ರೈತರಿಂದ ಬೆಳೆ ವಿಮೆ ಕ್ಲೈಮ್‌ಗಳನ್ನು ಇತ್ಯರ್ಥಗೊಳಿಸಲು ಪೂರಕವಾಗಿದೆ.

3. ಮಣ್ಣಿನ ಪಾರ್ಶ್ವ ನಕ್ಷೆ
ಮಿಷನ್ ಅಡಿಯಲ್ಲಿ ಸುಮಾರು 142 ಮಿಲಿಯನ್ ಹೆಕ್ಟೇರ್ ಕೃಷಿ ಭೂಮಿಯಲ್ಲಿ ವಿವರವಾದ ಮಣ್ಣಿನ ಪಾರ್ಶ್ವ ನಕ್ಷೆಗಳನ್ನು (1:10,000 ಪ್ರಮಾಣದಲ್ಲಿ) ಸಿದ್ಧಪಡಿಸಲು ಯೋಜಿಸಲಾಗಿದೆ. ಸುಮಾರು 29 ಮಿಲಿಯನ್ ಹೆಕ್ಟೇರ್‌ನಷ್ಟು ಮಣ್ಣಿನ ವಿವರ ದಾಸ್ತಾನು ಈಗಾಗಲೇ ಪೂರ್ಣಗೊಂಡಿದೆ ಎಂದು ತಿಳಿದುಬಂದಿದೆ.

ಡಿಜಿಟಲ್ ಸಾಮಾನ್ಯ ಬೆಳೆ ಅಂದಾಜು ಸಮೀಕ್ಷೆ: ಇದು ಈಗಾಗಲೇ ಚಾಲ್ತಿಯಲ್ಲಿರುವ ಬೆಳೆ ಇಳುವರಿ ಅಂದಾಜಿನ ವ್ಯವಸ್ಥೆಯನ್ನು ಸುಧಾರಿಸಲು ಮತ್ತು ದತ್ತಾಂಶವನ್ನು ಹೆಚ್ಚು ದೃಢವಾಗಿಸಲು, ಭಾರತದ ಕೃಷಿ ಉತ್ಪಾದನೆಯ ಅಂದಾಜಿನ ನಿಖರತೆಯ ಬಗ್ಗೆ ಇರುವ ಗೊಂದಲಗಳನ್ನು ಸರಿಪಡಿಸಲು ಸಹಕಾರಿಯಾಗಲಿದೆ. ಸರ್ಕಾರಿ ಏಜೆನ್ಸಿಗಳಿಗೆ ಕಾಗದರಹಿತ ಕನಿಷ್ಠ ಬೆಂಬಲ ಬೆಲೆ  ಆಧಾರಿತ ಸಂಗ್ರಹಣೆ, ಬೆಳೆ ವಿಮೆ ಮತ್ತು ಕ್ರೆಡಿಟ್ ಕಾರ್ಡ್-ಸಂಯೋಜಿತ ಬೆಳೆ ಸಾಲಗಳಂತಹ ಯೋಜನೆಗಳು ಮತ್ತು ಸೇವೆಗಳನ್ನು ಹೆಚ್ಚು ಪಾರದರ್ಶಕವಾಗಿಸಲು ಇದರ ಡೇಟಾ ಸಹಾಯ ಮಾಡುತ್ತದೆ.

ಡಿಜಿಸಿಇಎಸ್ ಆಧಾರಿತ ಇಳುವರಿ ಮತ್ತು ರಿಮೋಟ್ ಸೆನ್ಸಿಂಗ್ ಡೇಟಾದೊಂದಿಗೆ ಬೆಳೆ-ಬಿತ್ತನೆಯ ಪ್ರದೇಶದ, ಡಿಜಿಟಲ್‌ನಲ್ಲಿ ಸೆರೆಹಿಡಿಯಲಾದ ಡೇಟಾವು ಬೆಳೆ ಉತ್ಪಾದನೆಯ ಅಂದಾಜುಗಳ ನಿಖರತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ದತ್ತಾಂಶವು ಬೆಳೆ ವೈವಿಧ್ಯೀಕರಣವನ್ನು ಸುಲಭಗೊಳಿಸಲು, ಬೆಳೆ ಮತ್ತು ಋತುವಿಗೆ ಅನುಸಾರವಾಗಿ ನೀರಾವರಿ ಅಗತ್ಯಗಳನ್ನು ಮೌಲ್ಯಮಾಪನ ಮಾಡಲು ಸಹಾಯ ಮಾಡುತ್ತದೆ.

Share This Article