ಗುಡಿ ಗೋಪುರವಿಲ್ಲದ ʼಸೌತಡ್ಕ ಮಹಾಗಣಪತಿʼಗೆ ಬಯಲೇ ಆಲಯ!

Public TV
3 Min Read
Sowthadka Mahaganapathi Temple 3

ಸಾಮಾನ್ಯವಾಗಿ ದೇವಾಲಯ ಎಂದರೆ ಗರ್ಭಗುಡಿ, ನವರಂಗ, ಮುಖಮಂಟಪ, ಮರದ ಕೆತ್ತನೆಗಳು ಹಾಗೂ ರಾಜಗೋಪುರ ಸೇರಿದಂತೆ ನಾನಾ ರೀತಿಯ ವಿನ್ಯಾಸಗಳನ್ನು ಒಳಗೊಂಡಿರುತ್ತದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಸೌತಡ್ಕದಲ್ಲಿ ನೆಲೆನಿಂತಿರುವ ಶ್ರೀ ಮಹಾಗಣಪತಿಗೆ ಬಯಲೇ ಆಲಯ. ಈ ದೇವಾಲಯಕ್ಕೆ ಸುಮಾರು 800 ವರ್ಷಗಳ ಇತಿಹಾಸವಿದೆ. ಇಲ್ಲಿ ನೆಲೆಯೂರಿರುವ ಗಣೇಶನಿಗೆ ಯಾವುದೇ ರೀತಿಯ ಗುಡಿಯಿಲ್ಲ. ಹಚ್ಚ ಹಸಿರು ಕಾನನದ ಮಧ್ಯೆ ತೆರೆದ ಬಯಲಿನಲ್ಲಿ ಮಹಾಗಣಪತಿ ನೆಲೆಸಿದ್ದಾನೆ. ಇಷ್ಟಾರ್ಥಗಳನ್ನು ಸಿದ್ಧಿಗೊಳಿಸುವ ಮಹಾಗಣಪತಿ ದೇವರಿಗೆ ಗುಡಿ ಯಾಕಿಲ್ಲ ಎಂಬ ಪ್ರಶ್ನೆ ಸಾಮಾನ್ಯವಾಗಿ ಎಲ್ಲರನ್ನೂ ಕಾಡುತ್ತದೆ. ಇದಕ್ಕೆ ಉತ್ತರ ಇಲ್ಲಿದೆ ನೋಡಿ. 

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿಗೆ ಸೇರಿರುವ ಸೌತಡ್ಕದ ಶ್ರೀ ಮಹಾ ಗಣಪತಿ ಕ್ಷೇತ್ರ ಜಿಲ್ಲೆಯ ಅನೇಕ ಸಿದ್ಧಿ ಕ್ಷೇತ್ರಗಳಲ್ಲಿ ಒಂದಾಗಿದೆ. ಪ್ರಶಾಂತವಾದ ಹಚ್ಚ ಹಸಿರಿನ ನಿತ್ಯಹರಿದ್ವರ್ಣ ಕಾನನದ ಮಧ್ಯೆ, ತೆರೆದ ಮೈದಾನದಲ್ಲಿ ಶ್ರೀ ಮಹಾ ಗಣಪತಿ ಪ್ರತಿಷ್ಠಾಪನೆಗೊಂಡಿದ್ದು, ದಿನದ 24 ಗಂಟೆಗಳು ಭಕ್ತರಿಗೆ ದರ್ಶನವನ್ನು ನೀಡುತ್ತಿದೆ. ಈ ದೇವಾಲಯಕ್ಕೆ ಬಂದು ಗಣಪತಿ ಪೂಜೆ ಮಾಡಿಸಿ, ಹರಕೆಯನ್ನು ಕಟ್ಟಿಕೊಂಡರೆ ಅಂದುಕೊಂಡ ಕೆಲಸ ಸಲೀಸಾಗಿ ಆಗುತ್ತದೆ ಎಂಬ ನಂಬಿಕೆಯಿದೆ. ಹರಕೆ ಈಡೇರಿದ ಬಳಿಕ ಇಲ್ಲಿಗೆ ಬಂದು ಗಂಟೆಯನ್ನು ಕಟ್ಟುವ ಸಂಪ್ರದಾಯವಿದೆ.

Sowthadka Mahaganapathi Temple 4

ಪುರಾಣದ ಪ್ರಕಾರ, ರಾಜಮನೆತನದಿಂದ ಪೂಜಿಸಲ್ಪಟ್ಟ 800 ವರ್ಷಗಳಷ್ಟು ಹಳೆಯದಾದ ಗಣಪತಿ ದೇವಾಲಯವು ಒಮ್ಮೆ ಶತ್ರುಗಳಿಂದ ನಾಶವಾಯಿತು. ದೇಗುಲದಲ್ಲಿದ್ದ ಗಣಪತಿಯ ಸುಂದರ ಮೂರ್ತಿಯನ್ನು ಶತ್ರುಗಳು ಧ್ವಂಸ ಮಾಡಬಾರದೆಂಬ ಉದ್ದೇಶದಿಂದ ಸ್ಥಳೀಯ ದನ ಕಾಯುವವರು ಅದನ್ನು ಕೊಂಡೊಯ್ದು ಸೌತೆಕಾಯಿಯನ್ನು ಹೇರಳವಾಗಿ ಬೆಳೆಯುತ್ತಿದ್ದ ಜಾಗದಲ್ಲಿ ಪ್ರತಿಷ್ಠಾಪಿಸಿದರು. ತುಳುವಿನಲ್ಲಿ ʼಸೌತೆʼ ಎಂದರೆ ಸೌತೆಕಾಯಿ ಮತ್ತು ʼಅಡ್ಕʼ ಎಂದರೆ ವಿಶಾಲವಾದ ಬಯಲು. ಹೀಗಾಗಿ ಈ ಸ್ಥಳವನ್ನು ʼಸೌತಡ್ಕʼ ಎಂದು ಕರೆಯಲಾಯಿತು.

Sowthadka Mahaganapathi Temple

ಸ್ಥಳೀಯ ರೈತರು ಸೌತೆಕಾಯಿಯ ದೊಡ್ಡ ಬೆಳೆಗಳನ್ನು ಕೊಯ್ಲು ಮಾಡಿದರು. ಇದು ಗಣಪತಿಯ ಆಶೀರ್ವಾದವೆಂದು ನಂಬಿದ ಅಲ್ಲಿನ ರೈತರು ತಮ್ಮ ಮೊದಲ ಸೌತೆಕಾಯಿ ಕೊಯ್ಲನ್ನು ಗಣಪತಿಗೆ ಅರ್ಪಿಸಿದರು. ಇಂದಿಗೂ ಇಲ್ಲಿ ಗಣೇಶನ ಪೂಜೆಯಲ್ಲಿ ಸೌತೆಕಾಯಿಯನ್ನು ಅರ್ಪಿಸಲಾಗುತ್ತದೆ. ಕೆಲ ವರ್ಷಗಳ ಹಿಂದೆ ಭಕ್ತಾದಿಗಳು ಮಹಾಗಣಪತಿಗೆ ಭವ್ಯವಾದ ಮಂದಿರವನ್ನು ಕಟ್ಟುವ ಸಲುವಾಗಿ ಜ್ಯೋತಿಷಿಗಳನ್ನು ಕರೆಸಿ ಅಷ್ಟಮಂಗಲ ಪ್ರಶ್ನೆಯನ್ನು ಕೇಳಿದಾಗ ಗಣಪತಿಗೆ ಇಲ್ಲಿ ಯಾವುದೇ ದೇವಾಲಯದಲ್ಲಿ ಕೂರಲು ಇಷ್ಟವಿಲ್ಲ. ಅವನಿಗೆ ಈ ವಿಶಾಲವಾದ ಬಯಲಿನಲ್ಲಿ, ನೀಲಿ ಆಕಾಶದ ಕೆಳಗೆ ಕುಳಿತೇ ಭಕ್ತರನ್ನು ಹರಸುವುದು ಇಷ್ಟವೆಂಬುದು ತಿಳಯುತ್ತದೆ. ಅಂದಿನಿಂದ ಇಲ್ಲಿ ಗಣೇಶನಿಗೆ ಗೋಪುರ ಅಥವಾ ದೇವಾಲಯವನ್ನು ನಿರ್ಮಿಸುವ ಆಸೆ ಕೈಬಿಡಲಾಯಿತು. ಇಂದಿಗೂ ಸೌತಡ್ಕದ ಹಸಿರು ಪರಿಸರದಲ್ಲಿ ಭಗವಂತ ಭವ್ಯವಾಗಿ ಕುಳಿತು ತನ್ನ ಭಕ್ತರನ್ನು ವಾರದ 7 ದಿನವೂ, ದಿನದ 24 ಗಂಟೆಯೂ ಅನುಗ್ರಹಿಸುತ್ತಾನೆ. ಯಾವುದೇ ರೀತಿಯ ಧರ್ಮ, ಜಾತಿಯ ತಾರತಮ್ಯವಿಲ್ಲದೇ ಭಗವಂತನ ಸೇವೆಯನ್ನು ಇಲ್ಲಿ ನೀವು ಮಾಡಬಹುದು. 

Sowthadka Mahaganapathi Temple 1

ಮೂಡಪ್ಪ ಸೇವೆ:
ಮೂಡಪ್ಪ ಸೇವೆ ಮಹಾಗಣಪತಿಗೆ ಸಲ್ಲುವ ವಿಶೇಷ ಸೇವೆ. ಪ್ರತೀ ವರ್ಷ ಮಾಘ ಶುದ್ಧ ಚೌತಿಯಂದು ಶ್ರೀ ದೇವರಿಗೆ ಊರ, ಪರವೂರ ಭಕ್ತ ಮಹಾಜನರ ಸಹಕಾರದೊಂದಿಗೆ ರಾತ್ರಿ ಈ ವಿಶೇಷ ಸೇವೆ ನಡೆಯುತ್ತದೆ. ಶ್ರೀ ದೇವರ ಕಟ್ಟೆಯ ವಿಗ್ರಹದ ಸುತ್ತ ಗಣೇಶನಿಗೆ ಬಲು ಇಷ್ಟವಾದ ಕಬ್ಬುಗಳಿಂದ ಆವರಣವನ್ನು ಕಟ್ಟಿ ಅದರೊಳಗೆ ಅಕ್ಕಿ ತುಪ್ಪದಿಂದ ಮಾಡಿದ ಅಪ್ಪ ಕಜ್ಜಾಯವನ್ನು ಸುರಿದು ಮಹಾಗಣಪತಿಗೆ ಅಭಿಷೇಕ ಮಾಡಲಾಗುತ್ತದೆ. ವಿವಿಧ ಹೂವುಗಳಿಂದ ದೇವರನ್ನು ವಿಶೇಷವಾಗಿ ಅಲಂಕರಿಸಲಾಗುತ್ತದೆ. ಶ್ರೀ ದೇವರ ಕಟ್ಟೆ ಹಾಗೂ ಸುತ್ತಮುತ್ತಲ ಪರಿಸರವನ್ನು ಫಲ-ಪುಷ್ಪಗಳಿಂದ ಹಾಗೂ ವರ್ಣರಂಜಿತ ದೀಪಗಳಿಂದ ಅಲಂಕರಿಸಲಾಗುತ್ತದೆ. ನಾನಾ ಭಕ್ಷ್ಯಗಳ ನೈವೇದ್ಯದೊಂದಿಗೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಇಲ್ಲಿಯ ಇನ್ನೊಂದು ವಿಶೇಷ ಸೇವೆ ಎಂದರೆ ಅವಲಕ್ಕಿ ಪ್ರಸಾದ. ಇದು ಕೂಡ ದೇವರಿಗೆ ತುಂಬಾ ಇಷ್ಟದ ಹರಕೆಯಾಗಿದ್ದು, ಭಕ್ತರು ತನ್ನ ಕಷ್ಟ ನಿವಾರಣೆಗಾಗಿ ಈ ಹರಕೆಯನ್ನೂ ಸಲ್ಲಿಸುತ್ತಾರೆ. ಇದರ ಜೊತೆ ರಂಗಪೂಜೆ ನಿರಂತರವಾಗಿ ನಡೆಯುತ್ತದೆ.

Sowthadka Mahaganapathi Temple 2

ಘಂಟೆ ಹರಕೆ:
ಈ ದೇವಾಲಯದಲ್ಲಿ ಅನೇಕ ಭಕ್ತರು ಹರಕೆಯನ್ನು ಕಟ್ಟಿಕೊಳ್ಳುತ್ತಾರೆ. ಒಂದು ಇಲ್ಲಿ ಏನೇ ಹರಕೆ ಕಟ್ಟಿಕೊಂಡರೂ ಅದು ಈಡೇರುತ್ತದೆ ಎನ್ನುವ ನಂಬಿಕೆ. ಇನ್ನೊಂದು ಇಲ್ಲಿನ ಹರಕೆ ತೀರಿಸುವ ವಿಧಾನ ಅತ್ಯಂತ ಸುಲಭದ್ದಾಗಿದೆ. ಹರಕೆಯನ್ನು ನೆರವೇರಿಸುವಂತೆ ಇಲ್ಲಿನ ಮಹಾಗಣಪತಿಯಲ್ಲಿ ಪ್ರಾರ್ಥಿಸಿಕೊಂಡರೆ ನಿಮ್ಮ ಹರಕೆಯು ಕೇವಲ 2 ತಿಂಗಳಲ್ಲಿ ಪೂರ್ಣಗೊಳ್ಳುತ್ತದೆ. ನಂತರ ಇಲ್ಲಿಗೆ ಬಂದು ನೀವು ಕೇವಲ ಒಂದು ಗಂಟೆಯನ್ನು ಕಟ್ಟಿಹೋದರೆ ಮಹಾಗಣಪತಿಯ ಅನುಗ್ರಹ ಪ್ರಾಪ್ತವಾಗುತ್ತದೆ.

ಇನ್ನು ಚೌತಿ ಸಂದರ್ಭ ಈ ದೇವಾಲಯದಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ಗಣಪತಿಗೆ ಸಲ್ಲಿಕೆಯಾಗುತ್ತೆ. ಸಾವಿರಾರು ಭಕ್ತರು ಆಗಮಿಸಿ ಗಣಪನ ದರ್ಶನ ಪಡೆಯುತ್ತಾರೆ. ಸಕಲ ಭಕ್ತರನ್ನು ಹರಸುವ, ಸಕಲ ಭಕ್ತರ ಇಷ್ಟಾರ್ಥ ನೆರವೇರಿಸುವ ಸೌತಡ್ಕ ಮಹಾಗಣಪತಿ ಕ್ಷೇತ್ರ ಅತ್ಯಂತ ಪವಿತ್ರ, ಶ್ರಧ್ದಾ ಭಕ್ತಿಯ ಕೇಂದ್ರವಾಗಿ ಗುರುತಿಸಿಕೊಂಡಿದೆ.

  

Share This Article