ಬೆಂಗಳೂರು: ವಿಜಯಪುರ (Vijayapura) ಜಿಲ್ಲೆಯಲ್ಲಿ ಕೃಷಿ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಕೆನಡಾದ ಕೃಷಿ ಉತ್ಪನ್ನ ತಯಾರಿಕಾ ಪ್ರಮುಖ ಕಂಪನಿಯಾಗಿರುವ ವಿಟೆರಾ (Viterra Canada) 250 ಕೋಟಿ ರೂ. ಮೊತ್ತದ ಬಂಡವಾಳ ಹೂಡಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ (M.B.Patil) ತಿಳಿಸಿದ್ದಾರೆ.
ವಿಟೆರಾ ಕಂಪನಿಯ ಪ್ರತಿನಿಧಿಗಳ ಜತೆ ಸಚಿವರು ಇಲ್ಲಿನ ಖನಿಜ ಭವನದಲ್ಲಿ ನಡೆಸಿದ ಸಭೆಯಲ್ಲಿ ಈ ಬಂಡವಾಳ ಹೂಡಿಕೆ ನಿರ್ಧಾರ ಕೈಗೊಳ್ಳಲಾಗಿದೆ. ಇದನ್ನೂ ಓದಿ: ನಿವೇಶನ ಲೂಟಿ ಮಾಡುತ್ತಿರುವುದು ನಾನಾ ನೀವಾ? – ಎಂ.ಬಿ.ಪಾಟೀಲರ ಸೈಟ್ ಅಕ್ರಮ ಸದ್ಯದಲ್ಲೇ ಬಯಲು: ಛಲವಾದಿ ನಾರಾಯಣಸ್ವಾಮಿ
ವಿಜಯಪುರ ಜಿಲ್ಲೆಯ ಕೃಷಿ ಸಮುದಾಯದ ಬಳಕೆಗೆ ಅತ್ಯಾಧುನಿಕ ಶೈತ್ಯಾಗಾರಗಳನ್ನು ನಿರ್ಮಿಸಿ ರೈತರು ಸುಗ್ಗಿಯ ನಂತರ ಎದುರಿಸುವ ನಷ್ಟ ತಗ್ಗಿಸಲು ಮತ್ತು ಕೃಷಿ ಉತ್ಪನ್ನಗಳ ಉತ್ಪಾದನೆ, ಪೂರೈಕೆ ಹಾಗೂ ಮಾರಾಟ ಪ್ರಕ್ರಿಯೆಯಲ್ಲಿ ದಕ್ಷತೆ ತರಲು ವಿಟೆರಾ ನೆರವಾಗಲಿದೆ. ವಿಟೆರಾ ಕಂಪನಿಯು ಸುಧಾರಿತ ಉತ್ಪಾದನಾ ತಂತ್ರಜ್ಞಾನ ಬಳಸಲಿದೆ. ರಾಜ್ಯದಲ್ಲಿ ಕೆನಡಾದ ಆಧುನಿಕ ಕೃಷಿ ತಂತ್ರಜ್ಞಾನ ಬಳಕೆ ಹಾಗೂ ಈ ಬಂಡವಾಳ ಹೂಡಿಕೆಯಿಂದ ಕೃಷಿ ಕ್ಷೇತ್ರದ ಉತ್ಪಾದನೆ ಹೆಚ್ಚಲಿದ್ದು, ಅದರಿಂದ ರಾಜ್ಯದ ಒಟ್ಟಾರೆ ಆರ್ಥಿಕತೆಗೂ ಉತ್ತೇಜನ ದೊರೆಯಲಿದೆ ಎಂದು ಸಚಿವರು ಹೇಳಿದ್ದಾರೆ.
ಸಭೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಒ ಡಾ.ಮಹೇಶ ಹಾಗೂ ಇತರ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು. ಇದನ್ನೂ ಓದಿ: ಚನ್ನಪಟ್ಟಣದ ಅಭ್ಯರ್ಥಿ ನಾನೇ: ಡಿ.ಕೆ.ಶಿವಕುಮಾರ್