Paris Paralympics 2024 | ಭಾರತಕ್ಕೆ ಒಂದೇ ದಿನ 4 ಪದಕ – ಬೆಳ್ಳಿಗೆ ಮನೀಷ್ ನರ್ವಾಲ್‌ ಶೂಟ್‌

Public TV
3 Min Read
Manish Narwal

– ಪ್ರೀತಿ ಪಾಲ್‌ ಕಂಚಿನ ಓಟ

ಪ್ಯಾರಿಸ್‌: ಪ್ರಸ್ತುತ ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ (Paris Paralympics) ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಆರಂಭವಾಗಿದೆ. 2ನೇ ದಿನ ಭಾರತೀಯ (India) ಕ್ರೀಡಾಪಟುಗಳು ಪ್ರಾಬಲ್ಯ ಮೆರೆದಿದ್ದಾರೆ. ಶುಕ್ರವಾರ ಶೂಟಿಂಗ್‌ನಲ್ಲಿ ಮೂರು ಪದಕಗಳು ಹಾಗೂ 100 ಮೀಟರ್‌ ರಿಲೇ ವಿಭಾಗದಲ್ಲಿ 1 ಪದಕ ಭಾರತದ ಪಾಲಾಗಿದೆ.

ಮಹಿಳೆಯರ 10 ಮೀಟರ್ ಏರ್ ರೈಫಲ್ SH1 ವಿಭಾಗದ ಫೈನಲ್‌ನಲ್ಲಿ ಶೂಟರ್ ಅವನಿ ಲೆಖರಾ ಮತ್ತು ಮೋನಾ ಅಹರ್ವಾಲ್ ಕ್ರಮವಾಗಿ ಚಿನ್ನ ಮತ್ತು ಕಂಚಿನ ಪದಕ ಗೆದ್ದು ಬೀಗಿದರು. ಈ ಬೆನ್ನಲ್ಲೇ ಚಟೌರೊಕ್ಸ್‌ನಲ್ಲಿ ನಡೆದ ಪುರುಷರ 10 ಮೀಟರ್ ಏರ್ ಪಿಸ್ತೂಲ್ (SH1) ವಿಭಾಗದಲ್ಲಿ ಶೂಟರ್ ಮನೀಷ್ ನರ್ವಾಲ್ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದಾರೆ. ಕಠಿಣ ಪೈಪೋಟಿ ನೀಡಿದ್ದ ನರ್ವಾಲ್‌ 2+ ಪಾಯಿಂಟ್‌ಗಳ ಅಂತರದಲ್ಲಿ ಚಿನ್ನದ ಪದಕದಿಂದ ವಂಚಿತರಾದರು.

22 ವರ್ಷ ವಯಸ್ಸಿನ ಮನೀಷ್ ನರ್ವಾಲ್ (Manish Narwal) ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ 50 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದರು. ಪ್ರಸಕ್ತ ಸ್ಪರ್ಧೆಯಲ್ಲೂ ಫೈನಲ್‌ ವರೆಗೆ ಕಠಿಣ ಪೈಪೋಟಿ ನೀಡಿದರು. ಆದ್ರೆ ದಕ್ಷಿಣ ಕೊರಿಯಾದ ಅನುಭವಿ ಶೂಟರ್‌ ಜೊ ಜಿಯೊಂಗ್ಡು 237.4 ಅಂಕಗಳನ್ನು ಗಳಿಸುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದರೆ, ನರ್ವಾಲ್‌ 234.9 ಅಂಕಗಳೊಂದಿಗೆ 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ಪ್ರೀತಿ ಪಾಲ್ ಕಂಚಿನ ಓಟ:
ಇನ್ನೂ ಸ್ಟೇಡ್ ಡಿ ಫ್ರಾನ್ಸ್‌ನಲ್ಲಿ ನಡೆದ ಮಹಿಳೆಯರ 100 ಮೀ-ಟಿ 35 ಫೈನಲ್‌ನಲ್ಲಿ ಪ್ರೀತಿ ಪಾಲ್‌ (Preethi Pal) 3ನೇ ಸ್ಥಾನ ಪಡೆದು ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ. 23 ವರ್ಷ ವಯಸ್ಸಿನ ಪ್ರೀತಿ ಪಾಲ್‌ 14.21 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ 3ನೇ ಸ್ಥಾನ ಗಳಿಸಿದರು. ಇದು ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯೂ ಆಗಿದೆ ಎಂದು ತಿಳಿದುಬಂದಿದೆ.

Preethi Pal

ಚೀನಾದ ವಿಶ್ವದಾಖಲೆ ಓಟಗಾರ್ತಿ ಝೌ ಕ್ಸಿಯಾ 13.58 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರೆ, ಗುವೊ ಕಿಯಾನ್ಕಿಯಾನ್ 13.74 ಸೆಕೆಂಡುಗಳಲ್ಲಿ ಗುರಿ ತಲುಪಿ ಬೆಳ್ಳಿ ಪದಕ ಪಡೆದುಕೊಂಡರು.

ಪ್ರೀತಿ ಪಾಲ್‌ ಅವರು 2024ರಲ್ಲಿ ನಡೆದಿದ್ದ ವಿಶ್ವ ಪ್ಯಾರಾ-ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ, ಇಂಡಿಯನ್ ಓಪನ್ ಪ್ಯಾರಾ ಅಥ್ಲೆಟಿಕ್ಸ್ ಇಂಟರ್ನ್ಯಾಷನಲ್ ಚಾಂಪಿಯನ್‌ಶಿಪ್‌ (2024) ಮತ್ತು ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ (2024) ಎರಡರಲ್ಲೂ ಚಿನ್ನದ ಪದಕ ವಿಜೇತರಾಗಿದ್ದಾರೆ. ಆದ್ರೆ ಕಳೆದ ವರ್ಷ ಹ್ಯಾಂಗ್‌ಝೌನಲ್ಲಿ ನಡೆದ 2022ರ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ 4ನೇ ಸ್ಥಾನ ಪಡೆದು ನಿರಾಸೆ ಅನುಭವಿಸಿದ್ದರು.

Share This Article