– KRIDL ವಿರುದ್ಧ ಕೇಸ್ ದಾಖಲಿಸದಂತೆ ಸೂಚನೆ
– ಸಾಮಾಜಿಕ ಜಾಲತಾಣದಲ್ಲಿ ಸರ್ಕಾರದ ವಿರುದ್ಧ ಕಿಡಿಕಾರಿದ್ದ ನೆಟ್ಟಿಗರು
ಕೊಪ್ಪಳ: ಪಬ್ಲಿಕ್ ಟಿವಿ ವರದಿ ಬೆನ್ನಲ್ಲೇ ಗಂಗಾವತಿ (Gangavathi) ನಗರದ ಜುಲೈನಗರದಿಂದ ರಾಣಾ ಪ್ರತಾಪ್ ವೃತ್ತದವರೆಗೆ ಅಭಿವೃದ್ಧಿಪಡಿಸಿದ ರಸ್ತೆ ಮಧ್ಯೆ ಹಾಕಿರುವ ವಿದ್ಯುತ್ ಕಂಬಗಳ (Electric Pole) ತೆರವುಗೊಳಿಸಲು ಹೊರಡಿಸಿದ್ದ ಆದೇಶವನ್ನು ಗಂಗಾವತಿ ತಹಶೀಲ್ದಾರ್ ಹಿಂದಕ್ಕೆ ಪಡೆದಿದ್ದಾರೆ. ಇದರ ಜೊತೆ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ಸಂಸ್ಥೆ (KRIDL) ವಿರುದ್ಧವೇ ಪ್ರಕರಣ ದಾಖಲಿಸದಂತೆ ಸೂಚಿಸಿದ್ದಾರೆ.
ಅಗಸ್ಟ್ 28ರ ಸಂಜೆ ಹೊರಡಿಸಿದ್ದ ಆದೇಶವನ್ನು ಹಿಂಪಡೆದಿರುವ ತಹಸೀಲ್ದಾರ್ ನಾಗರಾಜ್ ಅವರು ಈ ಬಗ್ಗೆ ಸಂಬಂಧಿತ ಸಂಕ್ಷಮ ಪ್ರಾಧಿಕಾರದಲ್ಲಿ ಜನಾಭಿಪ್ರಾಯ ಪಡೆದು ಮುಂದುವರೆಯಲಾಗುವುದು. ಧಾರ್ಮಿಕ, ಮತೀಯ ಭಾವನೆಯಂತ ಸೂಕ್ಷ್ಮ ವಿಚಾರ ಉಂಟಾದಲ್ಲಿ ಕಾನೂನನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ತಮ್ಮ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಾಗರಾಜ್, ಈ ವಿಷಯ ನಗರಸಭೆಯ ವ್ಯಾಪ್ತಿಗೆ ಬರುವ ಕಾರಣ ಸಾಮಾನ್ಯಸಭೆಯಲ್ಲಿ ಇದೇ ವಿಚಾರದ ಅಂಗವಾಗಿ ಪ್ರಸ್ತಾಪ ಮಾಡಿ ವಿಷಯ ಮಂಡನೆ ಮಾಡಿ ಅನುಮೋದನೆ ಪಡೆದುಕೊಂಡಿರುವುದು ನನ್ನ ಗಮನಕ್ಕೆ ಬಾರದ ಹಿನ್ನೆಲೆ ಆದೇಶ ಮಾಡಲಾಗಿತ್ತು ಎಂದು ತಿಳಿಸಿದ್ದಾರೆ.
ಪಬ್ಲಿಕ್ ಟಿವಿ ಡಿಜಿಟಲ್ ಇಂದು ಬೆಳಗ್ಗೆ ವರದಿ ಪ್ರಕಟಿಸುತ್ತಿದ್ದಂತೆ ಸರ್ಕಾರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಭಾರೀ ಟೀಕೆ ವ್ಯಕ್ತಪಡಿಸಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಏನಿದು ವಿವಾದ?
ಅಯೋಧ್ಯೆ, ತಿರುಪತಿಯ ಮಾದರಿಯಲ್ಲಿ ಗಂಗಾವತಿ ಅಂಜನಾದ್ರಿ (Anjanadri Betta) ಅಭಿವೃದ್ಧಿಯಾಗಬೇಕೆಂಬ ನಿಟ್ಟಿನಲ್ಲಿ ಮಹಾರಾಣಾ ಪ್ರತಾಪ್ ಸರ್ಕಲ್‌ನಿಂದ ಜುಲೈ ನಗರದವರೆಗೂ ತಿರುಪತಿ, ಅಯೋಧ್ಯೆಯಲ್ಲಿರುವಂತೆ (Ayodhya) ವಿದ್ಯುತ್ ಕಂಬಗಳನ್ನು ಹಾಕಿದ್ದಕ್ಕೆ ಎಸ್‌ಡಿಪಿಐ (SDPI) ಆಕ್ಷೇಪ ವ್ಯಕ್ತಪಡಿಸಿತ್ತು.
ಇದು ಕೇವಲ ಒಂದು ಧರ್ಮದ (Religion) ಸಂಕೇತವಾಗಿದೆ. ಇದರಿಂದ ಗಂಗಾವತಿ ನಗರದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ಆಗುತ್ತದೆ ಎಂದು ಆರೋಪಿಸಿ ಇದನ್ನು ತೆರವುಗೊಳಿಸುವಂತೆ ಗಂಗಾವತಿ ನಗರಸಭೆ ಕಮಿಷನರ್‌ಗೆ SDPI ಮನವಿ ಮಾಡಿತ್ತು. ಇದನ್ನೂ ಓದಿ: ಮೈಕ್ ಹಾಕಿ ಊರಿಗೆಲ್ಲ ಕೇಳುವ ಹಾಗೆ ಕೂಗಿದ್ರೆ ಧಾರ್ಮಿಕ ಭಾವನೆಗೆ ಧಕ್ಕೆಯಾಗಲ್ವಾ? – ತ್ರಿಶೂಲ, ತಿಲಕದ ವಿದ್ಯುತ್ ಕಂಬ ತೆರವು ಆದೇಶಕ್ಕೆ ಸಿ.ಟಿ ರವಿ ಕೆಂಡ
ಈ ಮನವಿಯ ಬೆನ್ನಲ್ಲೇ ಗಂಗಾವತಿ ನಗರದ ಜುಲೈನಗರದಿಂದ ರಾಣಾ ಪ್ರತಾಪ್ ವೃತ್ತದವರೆಗೆ ಅಭಿವೃದ್ಧಿಪಡಿಸಿದ ರಸ್ತೆ ಮಧ್ಯೆ ಹಾಕಿರುವ ವಿದ್ಯುತ್ ಕಂಬಗಳ ತೆರವಿಗೆ ತಹಶೀಲ್ದಾರ್ ಆದೇಶಿಸಿದ್ದರು. ಅಷ್ಟೇ ಅಲ್ಲದೇ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ಸಂಸ್ಥೆ (KRIDL) ವಿರುದ್ಧವೇ ಪ್ರಕರಣ ದಾಖಲಿಸಲು ಸೂಚಿಸಿದ್ದರು. ಇದನ್ನೂ ಓದಿ: ಐಪಿಎಲ್ ಅಖಾಡದಲ್ಲಿ ʻಇಂಪ್ಯಾಕ್ಟ್ʼ ವಾರ್, ಪರ-ವಿರೋಧ ಚರ್ಚೆ; ಏನಿದು ನಿಯಮ?
ಆಗಸ್ಟ್ 28 ರಂದು ಜಿಲ್ಲಾಧಿಕಾರಿಗಳ ಮೌಖಿಕ ಆದೇಶದಂತೆ ತಹಶೀಲ್ದಾರ್ ಅವರು ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷರಿಗೆ ನೀಡಿರುವ ಆದೇಶದ ಪ್ರತಿ ಪಬ್ಲಿಕ್ ಟಿವಿಗೆ ಲಭ್ಯವಾಗಿತ್ತು.
ಹನುಮನ ಜನ್ಮಸ್ಥಳವಾಗಿರುವ ಅಂಜನಾದ್ರಿ ಭಾಗವನ್ನು ಅಯೋಧ್ಯೆ, ತಿರುಪತಿ ಮಾದರಿಯಲ್ಲಿ ಅಭಿವೃದ್ಧಿ ಮಾಡಬೇಕು ಎಂಬ ಒತ್ತಾಯ ಹಲವು ಬಾರಿ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಶಾಸಕ ಜನಾರ್ದನ ರೆಡ್ಡಿ ಚುನಾವಣಾ ಪ್ರಚಾರದಲ್ಲೂ ಭರವಸೆ ನೀಡಿದ್ದರು. ಅದರಂತೆ ಈಗ ವಿದ್ಯುತ್ ಕಂಬಗಳಲ್ಲಿ ಬಿಲ್ಲು, ಬಾಣಗಳು ಇರುವ ಚಿತ್ರಗಳನ್ನು ಅಳವಡಿಸಲಾಗಿತ್ತು.
ವಿದ್ಯುತ್ ಕಂಬಗಳಲ್ಲಿ ಅಳವಡಿಸಿರುವ ಚಿತ್ರಗಳು ಐತಿಹಾಸಿಕ ಅಂಜನಾದ್ರಿ ಪರ್ವತದ ಮಾರ್ಗಸೂಚಿಗೆ ಅನುಕೂಲವಾಗಿವೆ. ಅಂಜನಾದ್ರಿಗೆ ಬರುವ ಭಕ್ತರಲ್ಲಿ ಧಾರ್ಮಿಕ ಭಕ್ತಿ ಉಂಟಾಗುವುದರಿಂದ ಇವುಗಳನ್ನು ಅಳವಡಿಸಲಾಗಿದೆ. ಇದರಿಂದ ಯಾರ ಭಾವನೆಗೂ ಧಕ್ಕೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಅಷ್ಟೇ ಅಲ್ಲದೇ ನಗರಸಭೆಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲೂ ಜನಾರ್ದನ ರೆಡ್ಡಿ ಅವರು ವಿಷಯ ಪ್ರಸ್ತಾಪಿಸಿ ಈ ವಿಷಯದಲ್ಲಿ ಅನಾವಶ್ಯಕ ಗೊಂದಲ ಸೃಷ್ಟಿಸದೇ ಎಲ್ಲರೂ ಸಹಕಾರ ನೀಡುವಂತೆ ಸದಸ್ಯರಲ್ಲಿ ಮನವಿ ಮಾಡಿದ್ದರು.