ಗುಣಮುಖರಾಗಿ ಆಸ್ಪತ್ರೆಯಿಂದ ಎಸ್.ಎಂ.ಕೃಷ್ಣ ಡಿಸ್ಚಾರ್ಜ್; ವಿಶ್ರಾಂತಿ ಪಡೆಯುವಂತೆ ವೈದ್ಯರ ಸಲಹೆ

Public TV
1 Min Read
SM Krishna

ಬೆಂಗಳೂರು: ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಎಸ್.ಎಂ ಕೃಷ್ಣ (S M Krishna) ಅವರು ಏ.29 ರಂದು ಮಣಿಪಾಲ್ ಆಸ್ಪತ್ರೆಗೆ (Manipal Hospital) ದಾಖಲಾಗಿದ್ದರು. 4 ತಿಂಗಳ ಸುದೀರ್ಘ ಚಿಕಿತ್ಸೆಯ ನಂತರ ಇಂದು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಶ್ವಾಸಕೋಶ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಮುಖ್ಯಮಂತ್ರಿಗಳು ಹಾಗೂ ಕೇಂದ್ರದ ಮಾಜಿ ಸಚಿವರಾದ ಎಸ್.ಎಂ.ಕೃಷ್ಣ ಅವರ ಆರೋಗ್ಯ ಸುಧಾರಿಸಿದ್ದು, ವೈದ್ಯರ ಸಲಹೆಯಂತೆ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮರಳಿ ಮನೆಗೆ ಆಗಮಿಸಿದ್ದಾರೆ ಎಂದು ಶಾಸಕ ದಿನೇಶ್ ಗೂಳಿಗೌಡ (Dinesh Guligowda) ತಿಳಿಸಿದ್ದಾರೆ.ಇದನ್ನೂ ಓದಿ: ಐವನ್ ಡಿಸೋಜಾ ಮನೆಗೆ ಕಲ್ಲು ತೂರಾಟ ಪ್ರಕರಣ – ಇಬ್ಬರು ಹಿಂದೂ ಸಂಘಟನೆ ಕಾರ್ಯಕರ್ತರ ಬಂಧನ

ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ. ಶ್ವಾಸಕೋಶದ ಸೋಂಕು ನಿವಾರಣೆ ಆದ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿರುವುದಾಗಿ ಮಣಿಪಾಲ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಭಗವಂತನ ಕೃಪೆ ಮತ್ತು ವೈದ್ಯರ ಪರಿಶ್ರಮದಿಂದ ಎಸ್.ಎಂ.ಕೃಷ್ಣ ಅವರು ಗುಣಮುಖರಾಗಿದ್ದಾರೆ. ಆದರೆ ಎರಡು ವಾರಗಳ ಕಾಲ ಮನೆಯಲ್ಲಿ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಯಾವುದೇ ಸಾರ್ವಜನಿಕ ಭೇಟಿ ಮತ್ತು ಕಾರ್ಯಕ್ರಮಗಳಿಗೆ ಪಾಲ್ಗೊಳ್ಳದಂತೆ ವೈದ್ಯರು ಸೂಚನೆ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಅವರ ಹಿತೈಷಿಗಳು, ಅಭಿಮಾನಿಗಳು ಕೆಲವು ದಿನಗಳ ಕಾಲ ಅವರನ್ನು ಭೇಟಿ ಮಾಡದಂತೆ ನೋಡಿಕೊಳ್ಳುವಂತೆ ಕುಟುಂಬದವರಿಗೆ ವೈದ್ಯರು ತಿಳಿಸಿದ್ದಾರೆ. ಹೀಗಾಗಿ ಯಾರೂ ಸಹ ಅನ್ಯತ ಭಾವಿಸದೇ ಹಿರಿಯ ಮುತ್ಸುದ್ದಿ ಎಸ್.ಎಂ.ಕೃಷ್ಣ ಅವರು ವಿಶ್ರಾಂತಿ ಪಡೆಯಲು ಸಹಕರಿಸಬೇಕಾಗಿದೆ ಹಾಗೂ ಸಂಪೂರ್ಣವಾಗಿ ಗುಣಮುಖರಾದ ಬಳಿಕ ಎಸ್.ಎಂ.ಕೃಷ್ಣ ಅವರೇ ಎಲ್ಲರನ್ನೂ ಭೇಟಿ ಮಾಡಲಿದ್ದಾರೆ.ಇದನ್ನೂ ಓದಿ: ಗೂಡ್ಸ್ ವಾಹನದಲ್ಲಿ ಜನರ ಪ್ರಯಾಣ ಕಾನೂನು ಬಾಹಿರ: ಎಡಿಜಿಪಿ ಅಲೋಕ್ ಕುಮಾರ್

ಚಿಕಿತ್ಸೆ ನೀಡಿದ ಮಣಿಪಾಲ ವೈದ್ಯರ ತಂಡ ಹಾಗೂ ಸಿಬ್ಬಂದಿಗೆ ಎಸ್.ಎಂ.ಕೃಷ್ಣ ಅವರು ಧನ್ಯವಾದ ತಿಳಿಸುವಂತೆ ಹೇಳಿದ್ದಾರೆ.

Share This Article