2028ರ ವೇಳೆಗೆ 80  ಕೋಟಿ ಪ್ರವಾಸಿಗರನ್ನು ಆಕರ್ಷಿಸುವ ಗುರಿ – ಉತ್ತರ ಪ್ರದೇಶದಲ್ಲಿ ತಯಾರಿ ಹೇಗಿದೆ?

Public TV
4 Min Read
Uttar Pradesh Tourism

ತ್ತರ ಪ್ರದೇಶ ಇತಿಹಾಸ, ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಗೆ ಹೆಸರುವಾಸಿಯಾಗಿದೆ. ತನ್ನ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಐತಿಹಾಸಿಕ ಮಹತ್ವಗಳಿರುವ ಸ್ಥಳಗಳನ್ನು ಹೊಂದಿರುವ ಉತ್ತರ ಪ್ರದೇಶ ಪ್ರವಾಸೋದ್ಯಮ ವಲಯದಲ್ಲಿ ಜಾಗತಿಕ ಗಮನ ಸೆಳೆಯುತ್ತಿದೆ. ಇದೀಗ 2028ರ ವೇಳೆಗೆ 80 ಕೋಟಿ ಪ್ರವಾಸಿಗರನ್ನು ಆಕರ್ಷಿಸುವ ಗುರಿಯೊಂದಿಗೆ ಉತ್ತರ ಪ್ರದೇಶವು ಭಾರತದಲ್ಲಿ ಪ್ರಧಾನ ಪ್ರವಾಸೋದ್ಯಮ ಕೇಂದ್ರವಾಗಲು ಯೋಜನೆಗಳನ್ನು ರೂಪಿಸಿದೆ. ಹಾಗಿದ್ರೆ ಉತ್ತರ ಪ್ರದೇಶದ ಪ್ರವಾಸೋದ್ಯಮ ಹೇಗಿದೆ? ಪ್ರವಾಸೋದ್ಯಮದ ಕೇಂದ್ರ ಬಿಂದುವಾಗಲು ತಯಾರಿ ಹೇಗೆ ನಡೆಯುತ್ತಿದೆ ಎಂಬುದರ ಕುರಿತು ಇಲ್ಲಿ ವಿವರಿಸಲಾಗಿದೆ.

ಆಗ್ರಾದ ತಾಜ್ ಮಹಲ್ ಮತ್ತು ಅಯೋಧ್ಯೆಯ ರಾಮಮಂದಿರ ಸೇರಿದಂತೆ ಸಾಂಪ್ರದಾಯಿಕ ಹೆಗ್ಗುರುತುಗಳಿಗೆ  ಉತ್ತರ ಪ್ರದೇಶ ಹೆಸರುವಾಸಿಯಾಗಿದೆ. ಉತ್ತರ ಪ್ರದೇಶವು ಭಾರತದ ಕೆಲವು ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳು ಮತ್ತು ರಾಷ್ಟ್ರೀಯ ಉದ್ಯಾನವನಗಳನ್ನು ಹೊಂದಿದೆ. ಯುಪಿ ಸರ್ಕಾರವು ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಮತ್ತು ಮುಂಬರುವ ವರ್ಷಗಳಲ್ಲಿ ಕ್ಷೇತ್ರದ ಬೆಳವಣಿಗೆಯನ್ನು ಗಣನೀಯವಾಗಿ ಹೆಚ್ಚಿಸಲು ಹಲವಾರು ಯೋಜನೆಯನ್ನು ರೂಪಿಸಿದೆ.

YOGI ADITHYANATH

ಪ್ರಮುಖ ಪ್ರವಾಸಿ ತಾಣಗಳ ಪುನರುಜ್ಜೀವನ ಮತ್ತು ಸ್ಥಳೀಯ ಸಾರಿಗೆ ಮೂಲಸೌಕರ್ಯಗಳ ವರ್ಧನೆಯು ಈ ಯೋಜನೆಯ ಪ್ರಮುಖ ಗುರಿಯಾಗಿದೆ. ಉತ್ತರ ಪ್ರದೇಶ ಪ್ರವಾಸೋದ್ಯಮದ ಬೆಳವಣಿಗೆ ಈಗಾಗಲೇ ಪ್ರವಾಸಿಗರ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳಕ್ಕೆ ಕಾರಣವಾಗಿವೆ. 2023 ರಲ್ಲಿ, ಉತ್ತರ ಪ್ರದೇಶಕ್ಕೆ 48 ಕೋಟಿ ಪ್ರವಾಸಿಗರು ಆಗಮಿಸಿದ್ದಾರೆ.

2028ರ ವೇಳೆಗೆ ಈ ಸಂಖ್ಯೆಯನ್ನು 80 ಕೋಟಿಗೆ ವಿಸ್ತರಿಸುವುದು ಸರ್ಕಾರದ ಗುರಿಯಾಗಿದೆ. ಈ ಮಹತ್ವಾಕಾಂಕ್ಷೆಯ ಯೋಜನೆಯ ಮೂಲಕ ಪ್ರವಾಸೋದ್ಯಮ ವಲಯದ ಒಟ್ಟು ಮೌಲ್ಯವರ್ಧನೆಯನ್ನು 70,000 ಕೋಟಿ ರೂ.ಗೆ ಹೆಚ್ಚಿಸಬೇಕೆಂದು ಚಿಂತಿಸಿದೆ. 2011 ರಲ್ಲಿ 11,000 ಕೋಟಿ ರೂ.ಮೌಲ್ಯವರ್ಧನೆ ವರದಿಯಾಗಿದೆ.ಇದೀಗ ತನ್ನ ಗುರಿಯನ್ನು ತಲುಪಲು ಉತ್ತರ ಪ್ರದೇಶ ರಾಜ್ಯದಾದ್ಯಂತ 12 ಹೊಸ ಪ್ರವಾಸೋದ್ಯಮ ಸರ್ಕ್ಯೂಟ್‌ಗಳ ಅಭಿವೃದ್ಧಿ ಸೇರಿದಂತೆ ಹಲವಾರು ಕಾರ್ಯತಂತ್ರದ ಕ್ರಮಗಳ ಕುರಿತು ಯೋಜನೆ ರೂಪಿಸಿದೆ. ಈ ಸರ್ಕ್ಯೂಟ್‌ಗಳ ಪ್ರಾಥಮಿಕ ಕಾರ್ಯವು ಈಗಾಗಲೇ ಪ್ರಾರಂಭವಾಗಿದೆ, ಸಮೀಕ್ಷೆಗಳು, ಮತ್ತು ಪ್ರಮುಖ ಸ್ಥಳಗಳನ್ನು ವರ್ಧಿಸಲು ಮತ್ತು ಪ್ರಚಾರದ ಕುರಿತು ಯೋಜನೆ ನಡೆಯುತ್ತಿದೆ.

Mathura

ಇತ್ತೀಚಿನ ವರ್ಷಗಳಲ್ಲಿ, ಉತ್ತರ ಪ್ರದೇಶವು ಪ್ರವಾಸಿಗರ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳವನ್ನು ಕಂಡಿದೆ. 2016-17ರಲ್ಲಿ ಪ್ರವಾಸಿಗರ ಸಂಖ್ಯೆ 23 ಕೋಟಿ ಇತ್ತು. ಬಳಿಕ  2023-24ರಲ್ಲಿ 48 ಕೋಟಿಗೆ ಏರಿತು.  ಇದು ಸರಿಸುಮಾರು 51% ಬೆಳವಣಿಗೆಯನ್ನು ತೋರಿಸುತ್ತದೆ. ಈ ಹೆಚ್ಚಳವು ಸರಿಯಾದ ಕಾರ್ಯತಂತ್ರಗಳು ಮತ್ತು ಸುಧಾರಣೆಗಳೊಂದಿಗೆ ಇನ್ನಷ್ಟು ಪ್ರವಾಸಿಗರನ್ನು ಆಕರ್ಷಿಸುವ ಬಗ್ಗೆ ಒತ್ತಿಹೇಳುತ್ತದೆ.

ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ವಸತಿ ಆಯ್ಕೆಗಳನ್ನು ಹೆಚ್ಚಿಸಲು ರಾಜ್ಯ ಸರ್ಕಾರವು ಕೆಲಸ ಮಾಡುತ್ತಿದೆ. ಪ್ರಮುಖ ನಗರಗಳಲ್ಲಿ ವಸತಿ ಸೌಲಭ್ಯಗಳನ್ನು ವಿಸ್ತರಿಸುವ ಮೂಲಕ, UP ಪ್ರಯಾಣಿಕರಿಗೆ ವೈವಿಧ್ಯಮಯ ಮತ್ತು ಆರಾಮದಾಯಕ ಆಯ್ಕೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. 

Taj Mahal

ರಾಜ್ಯವು ಆಧ್ಯಾತ್ಮಿಕ ಪ್ರವಾಸೋದ್ಯಮದ ಮೇಲೆ ಕೇಂದ್ರೀಕರಿಸಿದೆ. ಅನೇಕ ಭಕ್ತರು ಅಯೋಧ್ಯೆ, ಕಾಶಿ, ಮಥುರಾ, ನೈಮಿಶಾರಣ್ಯ ಮತ್ತು ಪ್ರಯಾಗರಾಜ್‌ನಂತಹ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಕೈಗಾರಿಕಾ ಅಭಿವೃದ್ಧಿಯೊಂದಿಗೆ ಪ್ರವಾಸೋದ್ಯಮವನ್ನು ಉತ್ತೇಜಿಸುವ ಅಗತ್ಯವನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿವರಿಸಿದ್ದಾರೆ. 

ಉತ್ತರ ಪ್ರದೇಶದಲ್ಲಿರುವ ಪ್ರಮುಖ ಪ್ರವಾಸಿ ತಾಣಗಳು:
ಅಯೋಧ್ಯೆ ರಾಮಮಂದಿರ: ಅಯೋಧ್ಯೆ ರಾಮಮಂದಿರವು ಜನವರಿ 22,2024ರಂದು ಲೋಕಾರ್ಪಣೆಗೊಂಡಿತು. ಮಂದಿರವು ಸಾಂಪ್ರದಾಯಿಕ ನಾಗರ ಶೈಲಿಯಲ್ಲಿದೆ. 380 ಅಡಿ ಉದ್ದ (ಪೂರ್ವ-ಪಶ್ಚಿಮ), 250 ಅಡಿ ಅಗಲ ಮತ್ತು 161 ಅಡಿ ಎತ್ತರವನ್ನು ಹೊಂದಿದೆ. ನಾಗರ ವಾಸ್ತುಶಿಲ್ಪವು ಉತ್ತರ ಭಾರತದಲ್ಲಿ ಹುಟ್ಟಿಕೊಂಡ ದೇವಾಲಯದ ವಾಸ್ತುಶಿಲ್ಪದ ಶೈಲಿಯಾಗಿದೆ. ಇದು ಒಟ್ಟು 392 ಕಂಬಗಳು ಮತ್ತು 44 ಬಾಗಿಲುಗಳನ್ನು ಹೊಂದಿದೆ.

Prayagraj

ತಾಜ್‌ ಮಹಲ್:‌ ತಾಜ್‌ ಮಹಲ್‌ ಎಂದರೆ ಅದನ್ನು ಪ್ರೀತಿಯ ಸಂಕೇತ ಎನ್ನಲಾಗುತ್ತದೆ, ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ದೇಶದ ಅತಿ ಹೆಚ್ಚು ಪ್ರವಾಸಿಗರ ಆಕರ್ಷಣೆಗಳಲ್ಲಿ ಒಂದಾಗಿದೆ. ಇಸ್ಲಾಮಿಕ್, ಪರ್ಷಿಯನ್ ಮತ್ತು ಭಾರತೀಯ ವಾಸ್ತುಶಿಲ್ಪದ ಸುಂದರವಾದ ಮಿಶ್ರಣವನ್ನು ಪ್ರದರ್ಶಿಸುವ ಈ ಐತಿಹಾಸಿಕ ಅದ್ಭುತ ಇದಾಗಿದೆ. ತಾಜ್‌ಮಹಲ್‌ ಅನ್ನು ಸುಮಾರು 20,000 ಕಾರ್ಮಿಕರ ಸಹಾಯದಿಂದ 22 ವರ್ಷಗಳಲ್ಲಿ ನಿರ್ಮಿಸಲಾಗಿದೆ. ತಾಜ್ ಮಹಲ್ ನಿರ್ಮಿಸಲು, ಸುಮಾರು 1,000 ಆನೆಗಳನ್ನು ಬಳಸಲಾಗಿತ್ತು. ಯುನೆಸ್ಕೋ ವಿಶ್ವ ಪರಂಪರೆಯ ತಾಣ ಮತ್ತು ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ಈ ಸ್ಮಾರಕವು ವರ್ಷಪೂರ್ತಿ ವಿಶ್ವದಾದ್ಯಂತದ ದೇಶೀಯ ಮತ್ತು ಅಂತರರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಪ್ರಯಾಗ್‌ರಾಜ್:‌ 12 ವರ್ಷಕ್ಕೊಮ್ಮೆ ಸಂಭವಿಸುವ ಮಹಾ ಕುಂಭಮೇಳಕ್ಕೆ ವಿಶ್ವದ ಮೂಲೆ ಮೂಲೆಗಳಿಂದ ಜನರ ದಂಡೇ ಇಲ್ಲಿಗೆ ಆಗಮಿಸುತ್ತದೆ. ಅಲಹಾಬಾದ್‌ನ ತ್ರಿವೇಣಿ ಸಂಗಮ ಹಿಂದೂಗಳಿಗೆ ಪ್ರಮುಖ ಯಾತ್ರಾ ಸ್ಥಳವಾಗಿದೆ. ಹಿಂದೂ ಪುರಾಣದ ಪ್ರಕಾರ, 3 ಪ್ರಮುಖ ನದಿಗಳ ಸಂಗಮವಾಗುವ ಸ್ಥಳವನ್ನು ತ್ರಿವೇಣಿ ಸಂಗಮ ಎಂದು ಕರೆಯಲಾಗುತ್ತದೆ. ಇಲ್ಲಿ ಗಂಗಾ, ಯಮುನಾ ಹಾಗು ಸರಸ್ವತಿ ನದಿಗಳು ಸಂಗಮಿಸುತ್ತದೆ.

Mathura 1

ಮಥುರಾ: ಕೃಷ್ಣನ ಜನ್ಮಸ್ಥಳ ಎಂದು ಕರೆಯಲ್ಪಡುವ, ಯಮುನಾ ನದಿಯ ದಡದಲ್ಲಿರುವ ಮಥುರಾ ಉತ್ತರ ಪ್ರದೇಶದ ಜಿಲ್ಲಾ ಕೇಂದ್ರ. ಇದು ಜನಪ್ರಿಯ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ . ದೆಹಲಿ ಬಳಿ ಭೇಟಿ ನೀಡುವ ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ. ಹಿಂದೂಗಳು ಪವಿತ್ರವೆಂದು ಪರಿಗಣಿಸುವ ಏಳು ನಗರಗಳಲ್ಲಿ (ಸಪ್ತಾ ಪುರಿ) ಮಥುರಾ ಕೂಡ ಒಂದು. 

ಹೀಗೆ ಇನ್ನೂ ಅನೇಕ ಪ್ರವಾಸಿ ತಾಣಗಳನ್ನು ಉತ್ತರ ಪ್ರದೇಶ ಹೊಂದಿದೆ. ಇದನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ಇನ್ನೂ ಹೆಚ್ಚಿನ ಪ್ರವಾಸಿಗರನ್ನು ಸೆಳೆಯುವ ಪ್ರಯತ್ನವನ್ನು ಉತ್ತರ ಪ್ರದೇಶ ಮಾಡುತ್ತಿದೆ. 

Share This Article