ಬೆಂಗಳೂರು: ಈ ಹಿಂದೆ ಜಿಂದಾಲ್‌ಗೆ (Jindal) ಭೂಮಿ ಕೊಡಲು ಕಾಂಗ್ರೆಸ್ಸಿಗರು ವಿರೋಧಿಸಿದ್ದರು. ಈಗ ಕೊಡುತ್ತಿದ್ದಾರೆ ಅಂದ್ರೆ ಕಾಂಗ್ರೆಸ್ಸಿಗರಿಗೂ, ಅವರ ಹೈಕಮಾಂಡಿಗೂ ದೊಡ್ಡ ಪ್ರಮಾಣದ ಮೊತ್ತ ಸಂದಾಯ ಆಗಿರಬಹುದು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ (C T Ravi) ಸಂಶಯ ವ್ಯಕ್ತಪಡಿಸಿದ್ದಾರೆ.
ನಗರದ ಮಲ್ಲೇಶ್ವರ ಬಿಜೆಪಿ (BJP) ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಂದಾಲ್ ಕಂಪನಿಗೆ ಸುಮಾರು 3,677 ಎಕರೆ ಭೂಮಿ ಕೊಡುವ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಆಗ್ರಹಿಸಿದ್ದಾರೆ.ಇದನ್ನೂ ಓದಿ: ಐಸಿಸಿ ಮುಖ್ಯಸ್ಥರಾಗಿ ಜಯ್ ಶಾ ಅವಿರೋಧ ಆಯ್ಕೆ
ಬಿಜೆಪಿ ಆಡಳಿತದಲ್ಲಿ ಇದ್ದಾಗ ಈ ಪ್ರಸ್ತಾವನೆ ಬಂದಿತ್ತು. ನಾವೆಲ್ಲರೂ ಒಳಗಡೆಯೂ ವಿರೋಧ ಮಾಡಿದ್ದೆವು. ಕಾಂಗ್ರೆಸ್‌ನವರು (Congress) ಬಹಿರಂಗವಾಗಿ ಭೂ ಮಾರಾಟವನ್ನು ವಿರೋಧಿಸಿದ್ದರು. ಇದು ದೊಡ್ಡ ಪ್ರಮಾಣದ ಕಿಕ್‌ಬ್ಯಾಕ್ ಎಂದು ನಮ್ಮ ಮೇಲೆ ಕಾಂಗ್ರೆಸ್‌ನವರು ಆರೋಪಿಸಿದ್ದರು. ಒಂದು ಎಕರೆಗೆ 1.22 ಲಕ್ಷ ರೂ. ಕೊಡುವುದು ಎಂದರೇನು? ಎಂಬ ಮಾತನ್ನು ನಮ್ಮ ಮೇಲೆ ಆರೋಪಿಸಿದ್ದರು. ಆಗ ಆರೋಪಿಸಿದವರೇ ಭೂಮಿ ಕೊಟ್ಟಿದ್ದಾರೆ. ಹಾಗಿದ್ದರೆ ನೀವು ಎಷ್ಟು ಕಿಕ್‌ಬ್ಯಾಕ್ ಪಡೆದಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ಕೈಗಾರಿಕೆ ಖಾತೆ ಸಚಿವರು ಈ ಕುರಿತು ಬಿಜೆಪಿ (BJP) ಆಡಳಿತದಲ್ಲಿರುವಾಗಲೇ ನಿರ್ಧಾರ ಆಗಿತ್ತು ಎಂದಿದ್ದರು. ಮಾನ್ಯ ಎಂ.ಬಿ.ಪಾಟೀಲರೇ, (M B Patil) ನಮ್ಮ ಅವಧಿಯಲ್ಲಿ ಪ್ರಸ್ತಾಪ ಬಂದಿದ್ದು ನಿಜ. ನಮ್ಮಂಥ ಹಲವರು ವಿರೋಧಿಸಿದ್ದ ಕಾರಣಕ್ಕೆ ಪ್ರಸ್ತಾಪವನ್ನು ಅಲ್ಲಿಗೇ ಕೈಬಿಟ್ಟಿದ್ದೆವು. ನೀವ್ಯಾಕೆ ಅದನ್ನು ಮಾಡುತ್ತೀರಿ? ಬಿಜೆಪಿ ಕಂಡರೆ ಆಗದವರು ಬಿಜೆಪಿ ನಿರ್ಧಾರವನ್ನು ಯಾಕೆ ಮುಂದುವರೆಸಬೇಕು ಎಂದು ಕೆಣಕಿದ್ದಾರೆ.ಇದನ್ನೂ ಓದಿ: ತುಮಕೂರು ಜಿಲ್ಲೆಗೆ ಮೂರು ರೈಲ್ವೆ ಸೇತುವೆ ಮಂಜೂರು
ಹೂಡಿಕೆದಾರರು ಜನರಿಗೆ ಸೇವೆ ಮಾಡಲು ಬರುತ್ತಿಲ್ಲ..
ಹೆಚ್.ಕೆ.ಪಾಟೀಲರೇ (H K Patil) ಅವತ್ತು ಉದ್ದದ ಪತ್ರ ಬರೆದಿದ್ದಿರಿ. ಪತ್ರಿಕಾಗೋಷ್ಠಿ ಮಾಡಿದ್ದೀರಿ. ಈಗ ಕ್ಯಾಬಿನೆಟ್ ನಿರ್ಣಯವನ್ನು ಹೊರಗಡೆ ಬಂದು ಪತ್ರಿಕಾಗೋಷ್ಠಿ ಮಾಡಿ ನಿಮ್ಮ ಬಾಯಿಂದಲೇ ಹೇಳಿದ್ದೀರಿ ಎಂದಿರಿ. 90 ಸಾವಿರ ಕೋಟಿ ರೂ.ಗೂ ಹೆಚ್ಚು ಹೂಡಿಕೆ ಮಾಡಿ, 50 ಸಾವಿರ ಜನರಿಗೆ ಉದ್ಯೋಗ ಕೊಡಲಾಗಿದೆ ಎಂದು ಹೇಳಿದ್ದಾರೆ. ಜಿಂದಾಲ್ ಏನೂ ನಾನ್ ಪ್ರಾಫಿಟ್ ಆರ್ಗನೈಸೇಶನ್ ಅಲ್ಲ. ಅವರು ಕಂಪನಿ ನಡೆಸುತ್ತಿದ್ದಾರೆ. ಲಾಭದ ಲೆಕ್ಕಾಚಾರ ಹಾಕಿ ಹೂಡಿಕೆ ಮಾಡುತ್ತಾರೆ. ಜಿಂದಾಲ್ ಅಥವಾ ಇತರ ಕಂಪನಿಗಳು, ಹೂಡಿಕೆದಾರರು ಕರ್ನಾಟಕದ 7 ಕೋಟಿ ಜನರಿಗೆ ಸೇವೆ ಮಾಡಲು ಬರುತ್ತಿಲ್ಲ. ಅವರು ಲಾಭದ ಉದ್ದೇಶ ಇಟ್ಟುಕೊಂಡೇ ಹೂಡಿಕೆ ಮಾಡುತ್ತಾರೆ ಎಂದು ವಿಶ್ಲೇಷಿಸಿದ್ದಾರೆ.
ಜಿಂದಾಲ್ ಮತ್ತು ಕರ್ನಾಟಕ ಸರ್ಕಾರದ ನಡುವೆ ಯಾವ ಒಪ್ಪಂದ ಪತ್ರ ಆಗಿತ್ತು? ನಾವು ಕಡಿಮೆ ಬೆಲೆಗೆ ಜಮೀನು ಕೊಟ್ಟಿದ್ದೇವೆ. ಅಣೆಕಟ್ಟಿನಿಂದ ನೀರು ಕೊಡುತ್ತೇವೆ. ಪ್ರಾಕೃತಿಕ ಸಂಪನ್ಮೂಲ ತೆಗೆಯಲು ಅವಕಾಶ ನೀಡಿದ್ದೇವೆ. ಅವರು ಎಷ್ಟು ಉದ್ಯೋಗ ಸಿಗಲಿದೆ ಎಂದು ತೋರಿಸಿದ್ದರು? ಯಾವ ಭರವಸೆ ಕೊಟ್ಟಿದ್ದರು? ಈಗ ಎಷ್ಟು ಉದ್ಯೋಗ ಸೃಷ್ಟಿ ಆಗಿದೆ? ಉದ್ಯೋಗಿಗಳಲ್ಲಿ ಕರ್ನಾಟಕದವರು, ಕನ್ನಡಿಗರು ಎಷ್ಟು ಜನ ಎಂಬ ಬಗ್ಗೆ ಜಾಬ್ ಆಡಿಟ್ ಆಗಬೇಕು ಎಂದು ಒತ್ತಾಯಿಸಿದ್ದಾರೆ.
ಕೊಡುವ ಉದ್ದೇಶ ಇದ್ದರೆ ಇವತ್ತಿನ ಮಾರುಕಟ್ಟೆ ದರ ವಿಧಿಸಿ..
ಆವತ್ತು ಕಿಕ್‌ಬ್ಯಾಕ್ ಆರೋಪ ಮಾಡಿ, ಈಗ ನೀವು ಅನುಮತಿ ಕೊಟ್ಟ ಕಾರಣ ನೀವೆಷ್ಟು ಕಿಕ್‌ಬ್ಯಾಕ್ ಪಡೆದಿದ್ದೀರಿ ಎಂಬ ಸಂಶಯ ಬಂದೇ ಬರುತ್ತದೆ. ಇದರ ಜೊತೆಜೊತೆಗೇ ಯಾವತ್ತಿನದೋ ಮಾರುಕಟ್ಟೆ ದರ ಅಳವಡಿಸಿ, ಇವತ್ತು 1.22 ಲಕ್ಷ ರೂ. ನಿಗದಿ ಮಾಡಿದ್ದಾರೆ. ನಮ್ಮ ರಾಜ್ಯದಲ್ಲಿ ಯಾವ ಮೂಲೆಯಲ್ಲೂ ಈ ದರಕ್ಕೆ ಭೂಮಿ ಸಿಗುವುದಿಲ್ಲ. ಪ್ರತಿ ಎಕರೆ ಜಮೀನಿಗೆ ಕಡಿಮೆ ಎಂದರೂ 20-25 ಲಕ್ಷ ರೂ. ಬೆಲೆ ಇದೆ. ಹಾಗಿರುವಾಗ 1.22 ಲಕ್ಷ ರೂ. ನಿಗದಿ ಮಾಡಿದ್ದು ಸಮರ್ಥನೀಯವಲ್ಲ ಎಂದು ಆಕ್ಷೇಪಿಸಿದ್ದಾರೆ.ಇದನ್ನೂ ಓದಿ: ಹೆಚ್‌ಡಿಕೆ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿಗೆ ಆಗ್ರಹ: ಆ.31 ರಂದು ರಾಜಭವನಕ್ಕೆ ಕಾಂಗ್ರೆಸ್ ಶಾಸಕರ ಪರೇಡ್
ಕೊಡುವ ಉದ್ದೇಶ ಇದ್ದರೆ ಇವತ್ತಿನ ಮಾರುಕಟ್ಟೆ ದರದಲ್ಲಿ ಕೊಡಬೇಕು. ಅಲ್ಲಿರುವ ಅದಿರು ನಿಕ್ಷೇಪಗಳ ಮೇಲೆ ಸರ್ಕಾರದ ಹಕ್ಕು ಎಂದು ಷರತ್ತಿನೊಂದಿಗೆ ಕೊಡಬೇಕು. ಹಾಗಾಗಿ ನಿರ್ಧಾರವನ್ನು ಪುನರ್ ಪರಿಶೀಲನೆ ಮಾಡಬೇಕೆಂದು ತಿಳಿಸಿದ್ದಾರೆ.