ದೋಸ್ತಿಗಳಿಂದ ರಾಜಭವನ ದುರುಪಯೋಗ ಹೈಕಮಾಂಡ್‍ಗೆ ಅರ್ಥವಾಗಿದೆ: ಹೆಚ್.ಸಿ.ಮಹಾದೇವಪ್ಪ

Public TV
2 Min Read
HC MAHADEVAPPA

-ಅಪರೇಷನ್ ಕಮಲ ಬಿಜೆಪಿಗೆ ಹೊಸತಲ್ಲ
-ಉದ್ಯೋಗ ಸೃಷ್ಟಿಗಾಗಿ ಜಿಂದಾಲ್‍ಗೆ ಭೂಮಿ

ಬೆಂಗಳೂರು: ರಾಜಭವನ ದುರ್ಬಳಕೆ ಮಾಡಿಕೊಳ್ಳುವ ಜೆಡಿಎಸ್ (JDS), ಬಿಜೆಪಿ (BJP) ಹುನ್ನಾರ ಹೈಕಮಾಂಡ್‍ಗೆ ಅರ್ಥವಾಗಿದೆ. ನಮ್ಮ ಸಿಎಂ, ಕೆಪಿಸಿಸಿ ಅಧ್ಯಕರು ಪ್ರತ್ಯೇಕವಾಗಿ ಹೈಕಮಾಂಡ್ ಭೇಟಿಯಾಗಿ ಈ ಬಗ್ಗೆ ವಿವರಿಸಿದ್ದಾರೆ ಎಂದು ಸಚಿವ ಹೆಚ್.ಸಿ.ಮಹಾದೇವಪ್ಪ (H.C Mahadevappa) ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ. ಎಲ್ಲಾ ಶಾಸಕರು, ಮಂತ್ರಿಮಂಡಲ ಮತ್ತು ಹೈಕಮಾಂಡ್ ಸಿಎಂ ಬೆಂಬಲಕ್ಕೆ ಇದ್ದಾರೆ. ಸಿಎಂ ಆರೋಗ್ಯಕರವಾಗಿದ್ದಾರೆ. ನಿತ್ಯ ಕೆಲಸ ಮಾಡುತ್ತಿರುವ ಅವರಿಗೆ ಆಯಾಸವಾಗುವುದಿಲ್ಲ. ಖರ್ಗೆ, ರಾಹುಲ್ ಗಾಂಧಿ, ವೇಣುಗೋಪಾಲ್ ಮತ್ತು ಸುರ್ಜೇವಾಲ ಸಮ್ಮುಖದಲ್ಲೇ ನಾಯಕತ್ವದ ಬದಲಾವಣೆ ಇಲ್ಲ ಎಂದಿದ್ದಾರೆ. ಸಿದ್ದರಾಮಯ್ಯ ಹಾಗೂ ನನ್ನ ಸಿದ್ಧಾಂತ ಒಂದೇ. ಇವತ್ತೋ ನಿನ್ನೆಯೋ ನಾನು ಅವರ ಪರವಾಗಿ ನಿಂತಿಲ್ಲ. ಬಹಳ ವರ್ಷಗಳಿಂದ ಅವರ ಪರವಾಗಿದ್ದೇನೆ. ಜೆಡಿಎಸ್, ಬಿಜೆಪಿ ಷಡ್ಯಂತ್ರ ಭಗ್ನಗೊಳಿಸಲು ಒಗ್ಗಟ್ಟಾಗಿ ನಿಂತಿದ್ದೇವೆ ಎಂದು ದೋಸ್ತಿಗಳಿಗೆ ತಿರುಗೇಟು ಕೊಟ್ಟಿದ್ದಾರೆ.

ರಾಜ್ಯಪಾಲರ ಮುಂದೆ ಹಲವರ ಕೇಸ್ ಬಾಕಿ
ಮುಡಾ ಕೇಸ್‍ನಲ್ಲಿ ಯಾವುದೇ ಹುರುಳಿಲ್ಲ ಎಂದು ಸಾಕಷ್ಟು ಕಾನೂನು ತಜ್ಞರು ಹೇಳಿದ್ದಾರೆ. ಕುಮಾರಸ್ವಾಮಿ, ಜೊಲ್ಲೆ, ರೆಡ್ಡಿ, ನಿರಾಣಿ ಕೇಸ್‍ಗಳು ರಾಜ್ಯಪಾಲರ ಮುಂದೆ ಇದೆ. ಅವುಗಳನ್ನು ಬಿಟ್ಟು ಸಿದ್ದರಾಮಯ್ಯ ಕೇಸ್ ಮಾತ್ರ ಪ್ರಾಸಿಕ್ಯೂಷನ್‍ಗೆ ಅನುಮತಿ ಯಾಕೆ? ರಾಜ್ಯಪಾಲರು ರಾಷ್ಟ್ರಪತಿಗಳ ಪ್ರತಿನಿಧಿ. ಸಂವಿಧಾನದ ಮೇಲೆ ಕೆಲಸ ಮಾಡುವವರು. ಬೆಳಗ್ಗೆ ದೂರು ಕೊಟ್ಟರೆ ಸಂಜೆ ನೋಟಿಸ್ ಕೊಟ್ಟಿದ್ದಾರೆ. ಇದನ್ನು ನೋಡಿದರೆ ಏನು ಗೊತ್ತಾಗುತ್ತಾದೆ ಎಂದು ಕಿಡಿಕಾರಿದ್ದಾರೆ.

11 ವಿಧೇಯಕಗಳು ವಾಪಸ್ ವಿಚಾರ ಹಲವು ಮಹತ್ವದ ಬಿಲ್‍ಗಳು ವಾಪಸ್ ಬಂದಿವೆ. ಇಷ್ಟು ಬಿಲ್ ವಾಪಸ್ ಬಂದ್ರೆ ಹೇಗೆ? ಯಾವ ರಾಜ್ಯಪಾಲರು ಕೂಡ ಇಷ್ಟು ಬಿಲ್ ಕಳುಹಿಸಿರಲಿಲ್ಲ ಎಂದಿದ್ದಾರೆ.

ದಲಿತ ಸಿಎಂ ಚರ್ಚೆ ವಿಚಾರವಾಗಿ ಪ್ರತಿಯೊಂದು ಸಮುದಾಯಕ್ಕೆ ಅವಕಾಶ ಸಿಗಬೇಕು. ಆದರೆ ಅದಕ್ಕೆ ಕಾಲ ಬರಬೇಕು. ಈಗ ಸಿಎಂ ಇದ್ದಾರೆ, ಇನ್ನೊಬ್ಬ ಸಿಎಂ ಅವಶ್ಯಕತೆ ಇಲ್ಲ ಎಂದಿದ್ದಾರೆ.

ಆಪರೇಷನ್ ಕಮಲಕ್ಕಾಗಿ ಕಾಂಗ್ರೆಸ್ ಶಾಸಕರಿಗೆ ಆಮಿಷ, ಇದು ಹೊಸ ವಿಚಾರ ಅಲ್ಲ. ಈಗ ಸರ್ಕಾರವನ್ನು ಅತಂತ್ರ ಮಾಡಲು ಹೊರಟಿದ್ದಾರೆ. ಹಿಂದೆ ಬಿಜೆಪಿ ಆಪರೇಷನ್ ಮಾಡಿ ಸರ್ಕಾರ ಮಾಡಿತ್ತು. ಹಿಂದೆ ಬೊಮ್ಮಾಯಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೀರ್ಪು ಕೊಟ್ಟಿದೆ. ಹಿಂದೆ ಬಿಜೆಪಿ ಸರ್ಕಾರ ಸಕ್ಸಸ್ ಆಗಿಲ್ಲ. ಹಗರಣದಲ್ಲಿ ಬಿಜೆಪಿ ಸರ್ಕಾರ ಸಿಲುಕಿತ್ತು. ಮತ್ತೆ ಹಳೆ ಚಾಳಿ ಬಿಜೆಪಿಗರು ಮುಂದುವರೆಸಿದ್ದಾರೆ ಎಂದು ಕಿಡಿಕಾರಿದ್ದಾರೆ.

ಉದ್ಯೋಗ ಸೃಷ್ಟಿಗಾಗಿ ಜಿಂದಾಲ್‍ಗೆ ಭೂಮಿ
ಜಿಂದಾಲ್‍ಗೆ ಭೂಮಿ ಮಾರಟದಲ್ಲಿ ಕಿಕ್ ಬ್ಯಾಕ್ ಪಡೆದ ಆರೋಪ ವಿಚಾರವಾಗಿ, ಬಿಜೆಪಿಯದ್ದು ನಿರಾದಾರ ಆರೋಪ, ನಾವು ಉದ್ಯೋಗ ಸೃಷ್ಟಿ ಮಾಡಬೇಕಿದೆ. ಭೂಮಿ ಕೊಡದೇ ಹೊದರೆ ಬೇರೆ ರಾಜ್ಯದವರು ಕೊಡ್ತಾರೆ. ಅದಕ್ಕಾಗಿ ಒಮ್ಮತದ ನಿರ್ಧಾರ ಕ್ಯಾಬಿನೆಟ್‍ನಲ್ಲಿ ಮಾಡಿದ್ದು ಎಂದಿದ್ದಾರೆ.

ದಸರಾ ಉದ್ಘಾಟನೆ ವಿಚಾರವಾಗಿ, ಈ ಬಗ್ಗೆ ಯಾವುದೇ ತೀರ್ಮಾನ ಆಗಿಲ್ಲ. ಯಾರು ಉದ್ಘಾಟನೆ ಮಾಡಬೇಕು ಎಂದು ಸಿಎಂ ನಿರ್ಧಾರ ಮಾಡುತ್ತಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

Share This Article