J&K Poll Manifesto | ಪಿಡಿಪಿ ಅಧಿಕಾರಕ್ಕೆ ಬಂದ್ರೆ 200 ಯೂನಿಟ್ ವಿದ್ಯುತ್‌ ಉಚಿತ – ಮೆಹಬೂಬಾ ಮುಫ್ತಿ

Public TV
1 Min Read
Mehbooba Mufti

– ಜಮ್ಮು-ಕಾಶ್ಮೀರ ಚುನಾವಣೆಗೆ ಪ್ರಣಾಳಿಕೆ ಬಿಡುಗಡೆ ಮಾಡಿದ ಪಿಡಿಪಿ ಮುಖ್ಯಸ್ಥೆ
– ನ್ಯಾಷನಲ್ ಕಾನ್ಫರೆನ್ಸ್-ಕಾಂಗ್ರೆಸ್ ಮೈತ್ರಿಗೆ ಕಿಡಿ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ಹತ್ತಿರವಾಗುತ್ತಿದ್ದು, ಈ ನಡುವೆ ಮಾಜಿ ಸಿಎಂ ಮೆಹಬೂಬಾ ಮುಫ್ತಿ (Mehbooba Mufti) ನೇತೃತ್ವದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (PDP) ಶನಿವಾರ ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಪಕ್ಷ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಕರ್ನಾಟಕ ಕಾಂಗ್ರೆಸ್‌ ಸರ್ಕಾರದ ಮಾಡೆಲ್‌ ಅನ್ನೇ ಅನುಸರಿಸಿದಂತಿದೆ.

ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದ್ರೆ 200 ಯೂನಿಟ್ ವಿದ್ಯುತ್ ಉಚಿತವಾಗಿ (Free Electricity) ನೀಡುವುದಾಗಿ ಮತ್ತು ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸುವುದಾಗಿ ಘೋಷಿಸಿದ್ದಾರೆ.

ಮುಂದುವರಿದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೆಹಬೂಬಾ ಮುಫ್ತಿ, ದೇವಸ್ಥಾನಗಳು, ಮಸೀದಿಗಳು ಮತ್ತು ಗುರುದ್ವಾರಗಳಿಗೆ ತಮ್ಮ ಪಕ್ಷವು ಉಚಿತ ವಿದ್ಯುತ್ ಕಲ್ಪಿಸಲಿದೆ. ತಮ್ಮ ಪಕ್ಷವು ಗುತ್ತಿಗೆ ಶಿಕ್ಷಕರ ಗೌರವಧನ ಹೆಚ್ಚಿಸಲಿದೆ. ಜೈಲಿನಲ್ಲಿರುವವರಿಗೆ ಉಚಿತ ಸೌಲಭ್ಯ ಒದಗಿಸುವುದಾಗಿಯೂ ಭರವಸೆ ನೀಡಿದ್ದಾರೆ.

ಪಿಡಿಪಿ ಏಕಾಂಗಿ ಸ್ಪರ್ಧೆ:
ಹೊರತುಪಡಿಸಿ, ಮುಂಬರುವ ವಿಧಾನಸಭೆ ಚುನಾವಣೆಗೆ ನ್ಯಾಷನಲ್ ಕಾನ್ಫರೆನ್ಸ್ (NC) ಮತ್ತು ಕಾಂಗ್ರೆಸ್ (Congress) ನಡುವಿನ ಮೈತ್ರಿ ಬಗ್ಗೆ ಪ್ರತಿಕ್ರಿಯಿಸಿದರು. ಆ ಎರಡೂ ಪಕ್ಷಗಳು ಯಾವುದೇ ಅಜೆಂಡಾ ಹೊಂದಿಲ್ಲ ಮತ್ತು ಕೇವಲ ಸೀಟು ಹಂಚಿಕೊಂಡು ಅಧಿಕಾರಕ್ಕೆ ಬರುವುದಷ್ಟೇ ಅವರ ಮೈತ್ರಿ ಉದ್ದೇಶ. ತಮ್ಮ ಪಕ್ಷವು ಯಾವುದೇ ಅಜೆಂಡಾ ಇಲ್ಲದೇ ಕೇವಲ ಸೀಟು ಹಂಚಿಕೆಯ ಮಾತುಕತೆಯಿಂದಾಗಿ ಯಾವುದೇ ಮೈತ್ರಿ ಅಡಿಯಲ್ಲಿ ಸ್ಪರ್ಧಿಸುವುದಿಲ್ಲ. ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಹೇಳಿದ್ದಾರೆ.

ನಮ್ಮ ಅಜೆಂಡಾವನ್ನು ಎನ್‌ಸಿ ಮತ್ತು ಕಾಂಗ್ರೆಸ್‌ ಒಪ್ಪಿದರೆ ಅವರು ಎಲ್ಲಾ ಸ್ಥಾನಗಳಲ್ಲಿ ಸ್ಪರ್ಧಿಸಲಿ. ನಾವೂ ಅವರನ್ನು ಬೆಂಬಲಿಸುತ್ತೇವೆ. ನನಗೆ ಕಾಶ್ಮೀರದ ಸಮಸ್ಯೆಯನ್ನು ಪರಿಹರಿಸುವುದು ಎಲ್ಲಕ್ಕಿಂತ ಮುಖ್ಯವಾಗಿದೆ ಎಂದರು.

ಅಲ್ಲದೇ 2014 ರಿಂದ 2018ರ ವರೆಗೆ ಬಿಜೆಪಿಯೊಂದಿಗೆ ತಮ್ಮ ಪಕ್ಷದ ಮೈತ್ರಿ ಕುರಿತು ಮಾತನಾಡಿ, ನಾವು ಈ ಹಿಂದೆ ಮೈತ್ರಿ ಮಾಡಿಕೊಂಡಾಗ ನಮಗೆ ಒಂದು ಅಜೆಂಡಾ ಇತ್ತು. ನಾವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಾಗ, ಅವರು ನಮ್ಮ ಅಜೆಂಡಾವನ್ನು ಒಪ್ಪಿದ ಬಳಿಕವಷ್ಟೇ ಮೈತ್ರಿ ಮಾಡಿಕೊಂಡಿದ್ದೆವು ಎಂದು ತಿಳಿಸಿದರು.

Share This Article