ಕೋಲ್ಕತ್ತಾ ರೇಪ್ & ಮರ್ಡರ್ ಕೇಸ್: ಪ್ರಮುಖ ಆರೋಪಿ ಸೇರಿ 7 ಮಂದಿಯ ಸುಳ್ಳು ಪತ್ತೆ ಪರೀಕ್ಷೆ

Public TV
2 Min Read
Hang Him Or Do. Mother In Law Of Kolkata Rape Murder Case Accused

ಕೋಲ್ಕತ್ತಾ: ಇಲ್ಲಿನ ಆರ್‍ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖಾ ದಳ (ಸಿಬಿಐ), 7 ಜನರ ಸುಳ್ಳು ಪತ್ತೆ ಪರೀಕ್ಷೆ ನಡೆಸಿದೆ.

ಒಂದೆಡೆ ಜೈಲಿನಲ್ಲಿ ಸಂಜಯ್ ರಾಯ್ ಪಾಲಿಗ್ರಾಫ್ ಪರೀಕ್ಷೆ ನಡೆದಿದೆ. ಉಳಿದ ಆರು ಮಂದಿಗೆ ಸಿಬಿಐ ಕಚೇರಿಯಲ್ಲಿ ಪರೀಕ್ಷೆ ನಡೆಯುತ್ತಿದೆ. ಇದರೊಂದಿಗೆ ವೈದ್ಯಕೀಯ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್‍ಗೂ ಪರೀಕ್ಷೆ ನಡೆಸಲಾಗಿದೆ.

ಪಾಲಿಗ್ರಾಫ್ ಪರೀಕ್ಷೆ ನಡೆಸಲು ಸಿಬಿಐ ಅಧಿಕಾರಿಗಳ ವಿಶೇಷ ತಂಡ ಶನಿವಾರ (ಇಂದು) ಕೋಲ್ಕತ್ತಾಗೆ ಆಗಮಿಸಿತು. ಆರೋಪಿ ಸಂಜಯ್ ನೀಡಿದ ಹೇಳಿಕೆಗಳಲ್ಲಿ ಹಲವು ಅಸ್ಪಷ್ಟತೆ ಇದೆ. ಇದರಿಂದಾಗಿ ಆತನಿಗೆ ಸುಳ್ಳು ಪತ್ತೆ ಪರೀಕ್ಷೆ ನಡೆಸುವ ಅಗತ್ಯತೆ ಇದೆ ಎಂದು ಅಧಿಕಾರಿಗಳು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಅದರಂತೆ ಸುಪ್ರೀಂ ಕೋರ್ಟ್ 7 ಜನರ ಪಾಲಿಗ್ರಾಫ್ ಪರೀಕ್ಷೆ ನಡೆಸಲು ಸಿಬಿಐಗೆ ಒಪ್ಪಿಗೆ ನೀಡಿತ್ತು.

ಪಾಲಿಗ್ರಾಫ್ ಪರೀಕ್ಷೆಯು ರಕ್ತದೊತ್ತಡ, ನಾಡಿ, ಉಸಿರಾಟ ಮತ್ತು ಚರ್ಮದ ವಾಹಕತೆಯಂತಹ ಹಲವಾರು ಶಾರೀರಿಕ ಸೂಚಕಗಳನ್ನು ಅಳೆಯುವ ಮತ್ತು ದಾಖಲಿಸುವ ಒಂದು ವಿಧಾನವಾಗಿದೆ. ವ್ಯಕ್ತಿಗೆ ಪ್ರಶ್ನೆಗಳ ಸರಣಿಯನ್ನು ಕೇಳಲಾಗುತ್ತದೆ. ಪರೀಕ್ಷೆಯ ಪ್ರಕಾರ, ಸುಳ್ಳು ಉತ್ತರಗಳು ಶಾರೀರಿಕ ಪ್ರತಿಕ್ರಿಯೆಗಳನ್ನು ಉಂಟುಮಾಡುತ್ತವೆ. ಈ ಮೂಲಕ ವಿಚಾರಣೆ ವೇಳೆ ಸುಳ್ಳು ಹೇಳುವುದನ್ನು ಪತ್ತೆ ಮಾಡಲಾಗುತ್ತದೆ.

ಪಾಲಿಗ್ರಾಫ್ ಪರೀಕ್ಷೆಯು ಸಂಪೂರ್ಣ ಸರಿ ಎಂದು ವೈಜ್ಞಾನಿಕವಾಗಿ ಸಾಬೀತಾಗಿಲ್ಲ. ಅಲ್ಲದೇ ಪರೀಕ್ಷೆಯ ಫಲಿತಾಂಶವನ್ನು ತಪೆÇ್ಪಪ್ಪಿಗೆ ಎಂದು ಪರಿಗಣಿಸಲಾಗುವುದಿಲ್ಲ. ಇದರೊಂದಿಗೆ ನ್ಯಾಯಾಲಯದಲ್ಲಿ ಸ್ವೀಕಾರಾರ್ಹವಲ್ಲ. ತನಿಖಾಧಿಕಾರಿಗಳಿಗೆ ಅವರ ತನಿಖೆಯಲ್ಲಿ ಸಹಾಯ ಮಾಡಲು ಮತ್ತು ಶಂಕಿತರಿಂದ ಸುಳಿವುಗಳನ್ನು ಪಡೆಯಲು ಮಾತ್ರ ಪರೀಕ್ಷೆಯನ್ನು ಮಾಡಲಾಗುತ್ತದೆ.

ಏನಿದು ಕೇಸ್?‌
ಕಳೆದ ಶುಕ್ರವಾರ ಬೆಳಗ್ಗೆ ಕೋಲ್ಕತ್ತಾದ ಸರ್ಕಾರಿ ಆರ್‌ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಮಹಿಳಾ ಸ್ನಾತಕೋತ್ತರ ತರಬೇತಿ (ಪಿಜಿಟಿ) ವೈದ್ಯೆಯ ಶವ ಅರೆನಗ್ನ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆಕೆಯನ್ನು ಅತ್ಯಾಚಾರ ಎಸಗಿ, ಬಳಿಕ ಕೊಲೆ ಮಾಡಿರುವುದು ಗೊತ್ತಾಗಿತ್ತು. ವೈದ್ಯಕೀಯ ವಿದ್ಯಾರ್ಥಿನಿಯ ಮೃತದೇಹವು ರಕ್ತದ ಕಲೆಗಳ ಸಹಿತ ಹಾಸಿಗೆಯ ಮೇಲೆ ಬಿದ್ದಿರುವುದು ಪತ್ತೆಯಾಗಿತ್ತು. ಜೊತೆಗೆ ಆಕೆಯ ಕಣ್ಣು ಮತ್ತು ಬಾಯಿಯಿಂದ ರಕ್ತ ಹರಿಯುತ್ತಿತ್ತು. ಘಟನೆ ಬೆಳಕಿಗೆ ಬಂದ ಬಳಿಕ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮರಣೋತ್ತರ ಪರೀಕ್ಷೆ ನಡೆಸಿದಾಗ ಮಹಿಳಾ ವೈದ್ಯೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ವರದಿಯಲ್ಲಿ ಬಹಿರಂಗವಾಯಿತು.

Share This Article