ಕಾಂಗ್ರೆಸ್ಸಿನವರದ್ದು ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆಯೇ: ಸಿ.ಟಿ.ರವಿ ಪ್ರಶ್ನೆ

Public TV
2 Min Read
c.t.ravi 1

ಬೆಂಗಳೂರು: ಕಾಂಗ್ರೆಸ್ಸಿನವರದ್ದು ಸರ್ಕಾರ ಪ್ರಾಯೋಜಿತ ಭಯೋತ್ಪಾದನೆಯೇ ಅಥವಾ ಸರ್ಕಾರಿ ಪ್ರಾಯೋಜಿತ ಬೆದರಿಕೆಯೇ ಎಂದು ರಾಜ್ಯ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ (C.T.Ravi) ಪ್ರಶ್ನಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಪ್ರಾಸಿಕ್ಯೂಷನ್‍ಗೆ ರಾಜ್ಯಪಾಲರು ಅನುಮತಿ ಕೊಟ್ಟದ್ದನ್ನೇ ಅಪರಾಧ ಎಂದು ಬಿಂಬಿಸಿ ಸರ್ಕಾರವೇ ನೇತೃತ್ವ ವಹಿಸಿ ದಂಗೆ ಎಬ್ಬಿಸುವ ಮಾತು ದುರುದೃಷ್ಟಕರ ಮತ್ತು ಸಂವಿಧಾನ ವಿರೋಧಿ ಎಂದು ಆಕ್ಷೇಪಿಸಿದರು. ಇದನ್ನೂ ಓದಿ: ರಾಜ್ಯಪಾಲರಿಗೆ ನಿಂದನೆ; ಕಾಂಗ್ರೆಸ್ ನಾಯಕರ ವಿರುದ್ಧ ಡಿಜಿಪಿಗೆ ಬಿಜೆಪಿ ದೂರು

Siddaramaiah 14

ಒಬ್ಬ ಎಂಎಲ್‍ಸಿ ಐವಾನ್ ಡಿಸೋಜ ಅವರು ಬಾಂಗ್ಲಾ ಮಾದರಿ ದಾಳಿ ಮಾಡಬೇಕಾಗುತ್ತದೆ ಎನ್ನುತ್ತಾರೆ. ಇದರರ್ಥ ಏನು? ಇನ್ನೊಬ್ಬರು ರಾಜ್ಯಪಾಲರು ಹಾಸಿಗೆ ದಿಂಬು ಕಟ್ಟಿಕೊಂಡು ಓಡಬೇಕಾಗುತ್ತದೆ ಎನ್ನುತ್ತಾರೆ. ರಾಜ್ಯಪಾಲರ ತೀರ್ಮಾನ ಸರಿಯೇ ತಪ್ಪೇ ಎಂದು ಪ್ರಶ್ನಿಸಲು ಸಂವಿಧಾನ ಅವಕಾಶ ಮಾಡಿಕೊಟ್ಟಿದೆ. ಪ್ರಶ್ನಿಸಲು ಅವಕಾಶವಿದೆ. ನ್ಯಾಯಾಲಯಕ್ಕೆ ಹೋದಾಗ ಅಲ್ಲಿ 29ರವರೆಗೆ ಅಂದರೆ 10 ದಿನ ತಡೆಯಾಜ್ಞೆ ನೀಡಿದ್ದಾರೆ. ಹಾಗಿದ್ದರೆ ಈ ದೂರುದಾರರು ನ್ಯಾಯಾಧೀಶರ ಮೇಲೆ ಸ್ಟ್ರೈಕ್ ಮಾಡಿದರೆ ಹೇಗಿದ್ದೀತು ಎಂದು ಕೇಳಿದರು. ಕಾಂಗ್ರೆಸ್ ಪಕ್ಷ ತನಿಖೆಯನ್ನೇ ಯಾಕೆ ವಿರೋಧಿಸುತ್ತಿದೆ?
ಒಂದು ವೇಳೆ ನ್ಯಾಯಾಧೀಶರು ಸಿದ್ದರಾಮಯ್ಯನವರ ವಿರುದ್ಧ ತೀರ್ಪು ಕೊಟ್ಟರೆ ನ್ಯಾಯಾಧೀಶರ ವಿರುದ್ಧ ಇವರು ದಂಗೆ ಏಳಿಸ್ತಾರಾ? ಅವರ ಪ್ರತಿಕೃತಿ ದಹನ ಮಾಡುವರೇ? ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರಾ ಎಂದು ಸಿ.ಟಿ.ರವಿ ಅವರು ಪ್ರಶ್ನೆಗಳನ್ನು ಮುಂದಿಟ್ಟರು.

ರಾಜ್ಯಪಾಲರದು ಸಾಂವಿಧಾನಿಕ ಹುದ್ದೆ. ಸಂವಿಧಾನದತ್ತ ಅಧಿಕಾರ ಬಳಸಿ ಅವರು ಪ್ರಾಸಿಕ್ಯೂಷನ್‍ಗೆ ಅನುಮತಿ ಕೊಟ್ಟಿದ್ದಾರೆ. ಕಾಂಗ್ರೆಸ್ ಪಕ್ಷ ತನಿಖೆಯನ್ನೇ ಯಾಕೆ ವಿರೋಧಿಸುತ್ತಿದೆ ಎಂದು ಕೇಳಿದರು. ರಾಜ್ಯಪಾಲರು ಸಿದ್ದರಾಮಯ್ಯನವರು ಅಪರಾಧಿ ಎಂದು ಹೇಳಿಲ್ಲ ಎಂದರು. ಪ್ರತಿಭಟನೆ ವೇಳೆ ಕಲ್ಲು ತೂರಾಟ ಮಾಡಿದ್ದಾರೆ. ಟೈರ್‌ಗಳನ್ನು ಸುಟ್ಟಿದ್ದಾರೆ. ಇವರು ಕರ್ನಾಟಕವನ್ನು ಏನು ಮಾಡಲು ಹೊರಟಿದ್ದಾರೆ ಎಂದು ಕೇಳಿದರು. ಈ ದೇಶದಲ್ಲಿ ಎರಡು ಬಾರಿ ಸಿಎಂ ಆದ, ಅಗಾಧ ಅನುಭವವುಳ್ಳ ಸಿದ್ದರಾಮಯ್ಯನವರು ಸೇರಿ ಯಾರು ಕೂಡ ಸಂವಿಧಾನಕ್ಕಿಂತ ಮೇಲಲ್ಲ ಎಂದು ಸಿ.ಟಿ.ರವಿ ನೆನಪಿಸಿಕೊಟ್ಟರು. ಇದನ್ನೂ ಓದಿ: ಚಾರ್ಜ್‌ಶೀಟ್‌ನಲ್ಲಿ ಹೆಸರಿರುವ ಕುಮಾರಸ್ವಾಮಿ ಕೇಂದ್ರ ಸಚಿವರಾಗಬಹುದಾ: ಪೊನ್ನಣ್ಣ ಪ್ರಶ್ನೆ

ಸಿದ್ದರಾಮಯ್ಯನವರು ಸಂವಿಧಾನಕ್ಕಿಂತ ಮೇಲೆ ಎಂದು ತಿಳಿದುಕೊಳ್ಳುವುದು ಅಹಂಕಾರದ ಭಾವನೆ. ಐವಾನ್ ಡಿಸೋಜ ಸೇರಿದಂತೆ ಯಾರ‍್ಯಾರು ರಾಜ್ಯಪಾಲರಿಗೆ ಬೆದರಿಕೆ ಹಾಕಿದ್ದರೋ, ಯಾರ‍್ಯಾರು ದಾಳಿ ಮಾಡುವುದಾಗಿ ಬೆದರಿಸಿದ್ದಾರೋ, ಭಯೋತ್ಪಾದಕರ ಥರ ಮಾತನಾಡಿದ್ದಾರೋ ಅವರ ವಿರುದ್ಧ ಪೊಲೀಸ್ ಮಹಾ ನಿರ್ದೇಶಕರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಬೇಕಿತ್ತು. ಎಷ್ಟೋ ಪ್ರಕರಣಗಳಲ್ಲಿ ದೂರುದಾರರೇ ಇಲ್ಲದೆ, ನೀವು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದೀರಿ. ಆದರೆ, ಇಲ್ಲಿ ಇನ್ನೂ ಯಾಕೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಲ್ಲ ಎಂದು ಕಿಡಿಕಾರಿದರು.

Share This Article