– ಆಟೋದಲ್ಲಿ ಕರೆದೊಯ್ದು ಅತ್ಯಾಚಾರ ಎಸಗಿರುವ ಶಂಕೆ
ಬೆಂಗಳೂರು: ವೈದ್ಯೆ ಮೇಲಿನ ಅತ್ಯಾಚಾರ, ಕೊಲೆ ಖಂಡಿಸಿ ಇಡೀ ದೇಶವೇ ಬೀದಿಗಿಳಿದು ಹೋರಾಟ ನಡೆಸುತ್ತಿರುವ ಹೊತ್ತಿನಲ್ಲೇ, ಬೆಂಗಳೂರಿನಲ್ಲಿ ಯುವತಿ ಮೇಲೆ ಅತ್ಯಾಚಾರ ಆಗಿರುವ ಘಟನೆ ನಡೆದಿದೆ.
ನಗರದ ಹೆಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯುವತಿ ಮೇಲೆ ಅತ್ಯಾಚಾರ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಆಟೋದಲ್ಲಿ ಕರೆತಂದು ಅತ್ಯಾಚಾರ ಎಸಗಿರಬಹುದು ಎನ್ನಲಾಗಿದೆ. ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಸಾರಿಗೆ ಬಸ್, ಕಾರಿನ ನಡುವೆ ಭೀಕರ ಅಪಘಾತ – ಒಂದೇ ಕುಟುಂಬದ ನಾಲ್ವರು ದುರ್ಮರಣ
ತಡರಾತ್ರಿ 1 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಹೆಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದೆ.
ಘಟನೆ ಬಗ್ಗೆ ಪೊಲೀಸರಿಂದ ಹಿರಿಯ ಅಧಿಕಾರಿಗಳು ಮಾಹಿತಿ ಪಡೆಯುತ್ತಿದ್ದಾರೆ. ಯುವತಿ ಎಲ್ಲಿಂದ ಬರ್ತಾ ಇದ್ರು ಎಂದು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಉದಯ್‌ಪುರದಲ್ಲಿ ಸಹಪಾಠಿಗೆ ಚಾಕು ಇರಿತ – ಅಕ್ರಮವಾಗಿ ನಿರ್ಮಿಸಿದ್ದ ಆರೋಪಿ ಮನೆ ಧ್ವಂಸ
ಘಟನೆ ಏನು?
ನಿನ್ನೆ ಸ್ನೇಹಿತನ ಜೊತೆ ಯುವತಿ ಪಾರ್ಟಿಗೆ ಬಂದಿದ್ದಳು. ಪಾರ್ಟಿ ಮುಗಿಸಿ ಹೋಗುವಾಗ ಸ್ನೇಹಿತನ ಕಾರು, ಆಟೋಗೆ ಟಚ್ ಆಗಿದೆ. ಈ ವೇಳೆ ಆಟೋ ಚಾಲಕರು ಗಲಾಟೆ ಮಾಡಿದ್ದಾರೆ. ಸ್ಥಳಕ್ಕೆ ಹೊಯ್ಸಳ ಕೂಡ ಬಂದಿತ್ತು. ಇಷ್ಟರಲ್ಲಿ ಬೈಕ್ ಒಂದರಲ್ಲಿ ಡ್ರಾಪ್ ತೆಗೆದುಕೊಂಡು ಅಲ್ಲಿಂದ ಯುವತಿ ಹೊರಟಿದ್ದಳು. ಮಾರ್ಗ ಮಧ್ಯೆ ಇಳಿದು ಮತ್ತೊಂದು ಬೈಕ್‌ನಲ್ಲಿ ಡ್ರಾಪ್ ಪಡೆದಿದ್ದಾಳೆ. ಈ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಯುವತಿಯ ಮೇಲೆ ದೌರ್ಜನ್ಯ ಎಸಗಲಾಗಿದೆ.
ಈ ವೇಳೆ ಯುವತಿ ಎಮರ್ಜೆನ್ಸಿ ನಂಬರ್‌ಗಳಾಗಿ ತಂದೆ ಮತ್ತು ಸ್ನೇಹಿತೆಯ ನಂಬರ್ ನೀಡಿದ್ದಳು. ಎಮರ್ಜೆನ್ಸಿ ನಂಬರ್‌ಗೆ ಕರೆ ಹೋದಾಗ ಸಂತ್ರಸ್ತೆಯ ತಂದೆ ಮಗಳ ಗೆಳತಿಗೆ ಕರೆ ಮಾಡಿದ್ದರು. ಸ್ನೇಹಿತರು ಬಂದಾಗ ಸಂತ್ರಸ್ತೆಯ ಸ್ಥಿತಿ ಶೋಚನೀಯವಾಗಿತ್ತು. ಸಂತ್ರಸ್ತೆಯ ಬಟ್ಟೆ ಸಂಪೂರ್ಣವಾಗಿ ಕಿತ್ತುಹೋಗಿತ್ತು. ಕಾರಿನ ಟಾರ್ಪಲ್‌ನಿಂದ ಯುವತಿಯನ್ನ ಮುಚ್ಚಿಕೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ 40 ಜನರ ಟೀಂ ರಚನೆ ಮಾಡಿ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.