ಅನಿವಾಸಿ ಕನ್ನಡಿಗರ ‘ಹನಿ ಹನಿ’ ಆಲ್ಬಂ ಸಾಂಗ್

Public TV
2 Min Read
Honey Honey 1

ಪಾಯಿಂಟ್ ಬ್ಲಾಂಕ್ ಕ್ರಿಯೇಷನ್ಸ್ ಜರ್ಮನಿ ಪ್ರಸ್ತುತ ಪಡಿಸಿರುವ, ರಾಘವ ರೆಡ್ಡಿ ನಿರ್ದೇಶನದ, ವಿಶಾಲ್ ನೈದೃವ್ ಸಂಗೀತ ನಿರ್ದೇಶನದ ಹಾಗೂ ರಕ್ಕಿ ಸುರೇಶ್ ಅಭಿನಯದ ‘ಹನಿ ಹನಿ’ (Honey Honey) ಮ್ಯೂಸಿಕಲ್ ವಿಡಿಯೋ ಆಲ್ಬಂ (Album Song) ಇತ್ತೀಚೆಗೆ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಂದ ಅನಾವರಣವಾಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್ ಎಂ ಸುರೇಶ್, ಗೌರವ ಕಾರ್ಯದರ್ಶಿ ಭಾ.ಮ.ಗಿರೀಶ್ ಹಾಗೂ ಹಿರಿಯ ನಿರ್ಮಾಪಕರಾದ ಎಸ್ ಎ ಚಿನ್ನೇಗೌಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ಹಾಡಿನಲ್ಲಿ ಅಭಿನಯಿಸಿರುವ ರಕ್ಕಿ ಸುರೇಶ್ ನಮ್ಮ ಕುಟುಂಬಕ್ಕೆ ಆಪ್ತರು. ಈ ಹಾಡಿನಲ್ಲಿ ರಕ್ಕಿ ಅವರು ಚೆನ್ನಾಗಿ ಅಭಿನಯಿಸಿದ್ದಾರೆ. ಹಾಡು ಚೆನ್ನಾಗಿದೆ. ಯಶಸ್ವಿಯಾಗಲಿ ಎಂದು ಅಶ್ವಿನಿ ಪುನೀತ್ ರಾಜಕುಮಾರ್ ಹಾರೈಸಿದರು.

Honey Honey 2

ನಾನು ಹುಟ್ಟಿದ್ದು ಇಲ್ಲಿ. ಆದರೆ ಬೆಳೆದದ್ದು ಜರ್ಮನ್ ನಲ್ಲಿ. ಮೈಸೂರಿನ ಬಳಿಯ ಸಾಲಿಗ್ರಾಮ ನಮ್ಮ ಊರು. ರಾಜಕುಮಾರ್ ಅವರ “ಹೊಸಬೆಳಕು” ಚಿತ್ರ ನಿರ್ಮಿಸಿದ್ದ ರಾಜಶೇಖರ್ ಅವರು ನನ್ನ ತಾತಾ ಎಂದು ತಮ್ಮ ಹಾಗೂ ಕುಟುಂಬದ ಬಗ್ಗೆ ಮಾಹಿತಿ ನೀಡಿದ ನಟ ರಕ್ಕಿ ಸುರೇಶ್,  ಜರ್ಮನ್ ನಲ್ಲಿ ಎಂಜಿನಿಯರಿಂಗ್ ಹಾಗೂ ಮಾಸ್ಟರ್ಸ್ ಮುಗಿಸಿ ಐಟಿ ಉದ್ಯೋಗದಲ್ಲಿದ್ದೇನೆ. ನಟನೆ ನನ್ನ ಹವ್ಯಾಸ. ಅದರ ಮೊದಲ ಹೆಜ್ಜೆಯಾಗಿ “ಹನಿ ಹನಿ” ಆಲ್ಬಂ ಸಾಂಗ್ ನಲ್ಲಿ ಅಭಿನಯಿಸಿದ್ದೇನೆ‌. ಹಾಡು ಬಿಡುಗಡೆ ಮಾಡಿಕೊಟ್ಟ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಹಾಗೂ ಗಣ್ಯರಿಗೆ ಧನ್ಯವಾದ ಎಂದರು.

Honey Honey 3

ನಾನು ಐದು ವರ್ಷಗಳಿಂದ ಜರ್ಮನ್ ನಲ್ಲಿ ವಾಸಿಸುತ್ತಿದ್ದೇನೆ. ಅನಿವಾಸಿ ಕನ್ನಡಿಗರು ಸೇರಿ ಈ ಹಾಡನ್ನು ನಿರ್ಮಿಸಿದ್ದೇವೆ. ನಾನೇ ನಿರ್ದೇಶನವನ್ನು ಮಾಡಿದ್ದೇನೆ. ಭಾರತದ ರೂಪಾಯಿ ಪ್ರಕಾರ ಹದಿನೈದು ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಹಾಡು ಯೂರೋಪ್ ನಲ್ಲಿ ಚಿತ್ರೀಕರಣಗೊಂಡಿದೆ. ರಕ್ಕಿ ಸುರೇಶ್, ಅನಾಮಿಕ ಸ್ಟಾರ್ಕ್ ದತ್ತ‌ ಹಾಗೂ ಅಮೃತ ಮಂಡಲ್ ಈ ಹಾಡಿನಲ್ಲಿ ಅಭಿನಯಿಸಿದ್ದಾರೆ. ವಿಶಾಲ್ ನೈದೃವ್ ಸಂಗೀತ ನೀಡುವುದರ ಜೊತೆಗೆ ಹಾಡಿದ್ದಾರೆ. ಆಲ್ಬರ್ಟ್ ಜೊಸ್ ಹಾಗೂ ತೇಜಸ್ ಅಹೋಬಲ ಅವರ ಛಾಯಾಗ್ರಹಣ ಈ ಹಾಡಿಗಿದೆ. ನಮ್ಮ ಪಾಯಿಂಟ್ ಬ್ಲಾಂಕ್ ಕ್ರಿಯೇಷನ್ಸ್ ಯೂಟ್ಯೂಬ್ ಚಾನಲ್ ನಲ್ಲಿ ಈ ಹಾಡನ್ನು ನೋಡಬಹುದು ಎಂದರು ನಿರ್ದೇಶಕ ರಾಘವ ರೆಡ್ಡಿ.

ನಾನು ೨೩ ವರ್ಷಗಳಿಂದ ಕೀ ಬೋರ್ಡ್ ಪ್ಲೇಯರ್ ಆಗಿ ಕಾರ್ಯ ನಿರ್ವಹಿಸಿದ್ದೇನೆ. ಖ್ಯಾತ ಸಂಗೀತ ನಿರ್ದೇಶಕರ ಜೊತೆಗೆ ನೂರಕ್ಕೂ ಅಧಿಕ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದೇನೆ. “ಹನಿ ಹನಿ” ಆಲ್ಬಂ ಸಾಂಗ್ ಗೂ ಸಂಗೀತ ನೀಡಿದ್ದೇನೆ ಎಂದು ಸಂಗೀತ ನಿರ್ದೇಶಕ ವಿಶಾಲ್ ನೈದೃವ್ ಹೇಳಿದರು. ನಿರ್ದೇಶಕ ವೆಂಕಟ್ ಹಾಗೂ ಗಿರೀಶ್ ಕುಮಾರ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿದ್ದರು.

Share This Article