ರಾಮನಗರ: ಪಾರ್ಶ್ವವಾಯು ರೋಗ ನಿವಾರಣೆಗಾಗಿ ಮುದ್ದಾದ ಬಾಲಕಿಯನ್ನು ಕೊಲೆ ಮಾಡಿರುವ ಆರೊಪಿಗಳನ್ನು ಬಂಧಿಸುವಲ್ಲಿ ಮಾಗಡಿ ಪೊಲೀಸರು ಯಶ್ವಸಿಯಾಗಿದ್ದಾರೆ.
10 ವರ್ಷ ವಯಸ್ಸಿನ ಆಯೇಶಾ ವಾಮಾಚಾರಕ್ಕೆ ಬಲಿಯಾದ ಮಗು. ಮಾಗಡಿ ಪಟ್ಟಣದ ಹೊಸ ಮಸೀದಿ ಮೊಹಲ್ಲಾದ ನಿವಾಸಿಯಾದ ಮಹಮದ್ ನೂರುಲ್ಲಾ ಹಾಗು ಜಮೀಲಾ ದಂಪತಿಯ ಪುತ್ರಿ ಆಯೇಶಾ ಮಾರ್ಚ್ 1 ರಂದು ಕಾಣೆಯಾಗಿದ್ದಳು. ಕಾಣೆಯಾದ ಎರಡು ದಿನಗಳ ನಂತರ ಮಾರ್ಚ್ 3, ಶುಕ್ರವಾರದಂದು ಮಾಗಡಿ ಪಟ್ಟಣದ ಕಲ್ಯಾಗೇಟ್ ಸಮೀಪದ ಹೊಸಳ್ಳಿ ರಸ್ತೆಯ ದರ್ಗಾ ಬಳಿ ಆಯೇಶಾಳ ಶವ ಪತ್ತೆಯಾಗಿತ್ತು.
ಪ್ರಕರಣದ ಬೆನ್ನತ್ತಿದ ಮಾಗಡಿ ಪೊಲೀಸರು ಪಟ್ಟಣದ ಮಹಮದ್ ವಾಸೀಲ್, ರಾಶಿದುನ್ನಿಸ್ಸಾ ಹಾಗೂ ನಸೀಂ ತಾಜ್ ಜೊತೆಗೆ ಓರ್ವ ಅಪ್ರಾಪ್ತ ಬಾಲಕನನ್ನು ಬಂಧಿಸಿದ್ದಾರೆ. ಮಹಮದ್ ವಾಸೀಲ್ ಮೃತ ಆಯೇಶಾಳ ಸೋದರ ಸಂಬಂಧಿ. ವಾಸೀಲ್ ಸಹೋದರ ಮಹಮದ್ ರಫೀ ಎಂಬವರು ಪಾರ್ಶ್ವವಾಯುವಿಗೆ ಒಳಗಾಗಿದ್ರು. 40 ದಿನಗಳಲ್ಲಿ ವಾಮಾಚಾರ ನಡೆಸಿದ್ರೆ ಸಹೋದರ ಗುಣಮುಖವಾಗುತ್ತಾರೆಂದು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ.
ವಾಮಾಚಾರಕ್ಕೂ ಮೊದಲು ಬಾಲಕಿಯನ್ನು ವಶೀಕರಣಗೊಳಿಸಿ ಬಾಯಿಗೆ ಬಟ್ಟೆ ತುರುಕಿ ಕೊಲೆ ಮಾಡಲಾಗಿತ್ತು. ನಂತರ ಬಾಲಕಿಯ ದೇಹವನ್ನು ಚೀಲದಲ್ಲಿ ತುಂಬಿ ಕಸದ ರಾಶಿಯಲ್ಲಿ ಎಸೆದು ಹೋಗಿದ್ದರು. ಈ ಸಂಬಂಧ ಪೊಲೀಸರು ಈಗ ನಾಲ್ವರನ್ನು ಬಂಧಿಸಿದ್ದು, ವಿಚಾರಣೆ ಮುಂದುವರೆಸಿದ್ದಾರೆ.