ಕರ್ನಾಟಕದ ಇಬ್ಬರು ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯೋತ್ಸವಕ್ಕೆ ಮೋದಿಯಿಂದ ಆಹ್ವಾನ!

Public TV
2 Min Read
Gadag 2 students invited for Red Fort Independence Day event

– 50 ಗಿಡ ನೆಟ್ಟು ಪೋಷಿಸಿದ ಸಾಧಕರನ್ನು ಕೊಂಡಾಡಿದ ಮೋದಿ

ಗದಗ: ಇಲ್ಲಿನ (Gadag) ಸರ್ಕಾರಿ ಪದವಿಪೂರ್ವ ಕಾಲೇಜಿನ ಎನ್‍ಎಸ್‍ಎಸ್ (NSS) ಘಟಕದ ಇಬ್ಬರು ವಿದ್ಯಾರ್ಥಿಗಳಿಗೆ ದೆಹಲಿ ಕೆಂಪುಕೋಟೆಯಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವ (Independence Day) ಕಾಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಆಹ್ವಾನಿಸಿದ್ದಾರೆ.

ಕೇಂದ್ರ ಸರ್ಕಾರದ `ಮೇರಿ ಮಾಟಿ, ಮೇರಾ ದೇಶ’ ಎನ್ನುವ ಕಾರ್ಯಕ್ರಮವನ್ನು ಕಾಲೇಜಿನ ಎನ್‍ಎಸ್‍ಎಸ್ ಘಟಕ ಯಶಸ್ವಿ ಮಾಡುತ್ತ ಬಂದಿದೆ. ಅಮೃತ ವಾಟಿಕಾ ಕಾರ್ಯಕ್ರಮದಡಿ, 50 ಗಿಡಗಳನ್ನು ನೆಟ್ಟು ಸತೀಶ್ ಕನ್ನೇರ್ ಹಾಗೂ ಆದಿತ್ಯ ಕೊರವರ ಎಂಬ ವಿದ್ಯಾರ್ಥಿಗಳು ಪೋಷಿಸಿದ್ದಾರೆ. ಇದನ್ನು ಗಮನಿಸಿ ಪ್ರಧಾನಿ ಕಚೇರಿಯಿಂದ ವಿಶೇಷ ಅತಿಥಿಗಳಾಗಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಇಬ್ಬರು ವಿದ್ಯಾರ್ಥಿಗಳಿಗೆ ಆಹ್ವಾನ ನೀಡಲಾಗಿದೆ.

ಕಾಲೇಜಿನ ವತಿಯಿಂದ ಒಂದು ವರ್ಷದಿಂದ ಅಮೃತ ವಾಟಿಕಾ ಕಾರ್ಯಕ್ರಮವನ್ನು ಅಚ್ಚು ಕಟ್ಟಾಗಿ ಮಾಡಿಕೊಂಡು ಬಂದಿದೆ. ಎನ್‍ಎಸ್‍ಎಸ್ ಘಟಕದಿಂದ ಕಾಲೇಜಿನ ಮುಂದೆ 50 ಗಿಡಗಳನ್ನು ನೆಟ್ಟು ಪಾಲನೆ ಪೋಷಣೆ ಮಾಡಲಾಗಿದೆ. ಆ ಗಿಡಗಳನ್ನು ಪೋಷಣೆ ಮಾಡುವುದನ್ನು ಕಾಲೇಜಿನ ವೆಬ್‍ಸೈಟ್‍ನಲ್ಲಿ ಅಪ್ಲೋಡ್ ಮಾಡಲಾಗಿದೆ. 100 ವಿದ್ಯಾರ್ಥಿಗಳ ಪೈಕಿ ಸತೀಶ್ ಹಾಗೂ ಆದಿತ್ಯ ಎಂಬ ವಿದ್ಯಾರ್ಥಿಗಳು ಬಹಳಷ್ಟು ಅಚ್ಚುಕಟ್ಟಾಗಿ ಗಿಡಗಳನ್ನು ಬೆಳೆಸಿದ್ದರು. ಇದನ್ನು ಗಮನಿಸಿ ಅವರಿಗೆ ಪ್ರಧಾನಿ ಕಚೇರಿಯಿಂದ ವಿಶೇಷ ಅತಿಥಿಗಳಾಗಿ ಅಹ್ವಾನ ನೀಡಲಾಗಿದೆ.‌

ಈ ಬಗ್ಗೆ ಮಾತನಾಡಿರುವ ಎನ್‍ಎಸ್‍ಎಸ್ ಘಟಕದ ಶಿಕ್ಷಕರು, ಸ್ವಾತಂತ್ರ್ಯೋವದ ಅಮೃತ ಮಹೋತ್ಸವ ಸಮಯದಲ್ಲಿ ವಿದ್ಯಾರ್ಥಿಗಳು ಮಹಾಗನಿ ಹಾಗೂ ತಬೀಬ್ ರೋಜಾ ಜಾತಿಯ ಗಿಡಗಳನ್ನು ನೆಟ್ಟು ಪಾಲನೆ ಪೋಷಣೆ ಮಾಡಿದ್ದಾರೆ. ಇಡೀ ರಾಜ್ಯದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 24 ಜನರಿಗೆ ಪ್ರಧಾನಿ ಕಚೇರಿಯಿಂದ ಆಹ್ವಾನ ಬಂದಿದೆ. ಆ ಪೈಕಿ ಗದಗ ಜಿಲ್ಲೆಯ ಸತೀಶ್ ಮತ್ತು ಆದಿತ್ಯ ಎಂಬ ಇಬ್ಬರು ವಿದ್ಯಾರ್ಥಿಗಳಿಗೆ ವಿಶೇಷ ಅತಿಥಿಗಳಾಗಿ ಆಹ್ವಾನ ಬಂದಿದೆ. ಪ್ರಧಾನಿ ನರೇಂದ್ರ ಮೋದಿಯವರ ಜೊತೆಗೆ ಸಂವಾದ ಹಾಗೂ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅಹ್ವಾನ ಬಂದಿರುವುದು ಬಹಳ ಖುಷಿ ತಂದಿದೆ. ಇದು ನಮ್ಮ ಕಾಲೇಜಿಗೆ ಅಷ್ಟೇ ಅಲ್ಲ, ನಮ್ಮ ಜಿಲ್ಲೆಗೆ ಹೆಮ್ಮೆ ಎಂದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಎನ್‍ಎಸ್‍ಎಸ್ ಘಟಕದ ನೋಡಲ್ ಅಧಿಕಾರಿ ಶ್ರೀನಿವಾಸ ಬಡಿಗೇರ ಅವರು, ಅಧಿಕಾರಿಗಳನ್ನು, ಜನಪ್ರತಿನಿಧಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವುದು ಸಾಮಾನ್ಯ. ಆದರೆ ವಿದ್ಯಾರ್ಥಿಗಳ ಕೆಲಸ ಕಾರ್ಯವನ್ನು ಪ್ರಧಾನಿಗಳು ಮೆಚ್ಚಿ, ಅವರ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು ಸಂತಸ ತಂದಿದೆ. ಅದಕ್ಕೆ ಹೇಳೋದು ಒಂದು ಕೆಲಸವನ್ನು ನಿಷ್ಠೆಯಿಂದ ಮಾಡಿದರೆ ತಕ್ಕ ಪ್ರತಿಫಲ ಸಿಗುತ್ತದೆ ಎನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆ ಎಂದಿದ್ದಾರೆ.

Share This Article