ಕೆಸೆಟ್ ಪರೀಕ್ಷೆ – ಅರ್ಹತೆ ಪಡೆದವರಿಗೆ ಆ.17ರಂದು ದಾಖಲೆ ಪರಿಶೀಲನೆ: ಕೆಇಎ

Public TV
1 Min Read
KEA

ಬೆಂಗಳೂರು: ಕೆಸೆಟ್ ಪರೀಕ್ಷೆಯಲ್ಲಿ (KSET) ಅರ್ಹತೆ ಪಡೆದು, ವಿವಿಧ ಕಾರಣಗಳಿಂದ ಮೂಲ ದಾಖಲೆಗಳ ಪರಿಶೀಲನೆಗೆ ಒಳಪಡದವರ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸೋಮವಾರ ಪ್ರಕಟಿಸಿದೆ. ಅಂತಹವರು ಆ.17ರಂದು ಹಾಜರಾಗಿ ಕೆಸೆಟ್ ಪ್ರಮಾಣ ಪತ್ರ ಪಡೆಯಬಹುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.

ಜು.11ರಿಂದ 22 ಹಾಗೂ 31ರಂದು ಅರ್ಹ ಅಭ್ಯರ್ಥಿಗಳ ಮೂಲ ದಾಖಲೆಗಳನ್ನು ಪರಿಶೀಲನೆ ಮಾಡಿ, ಪ್ರಮಾಣ ಪತ್ರ ಕೂಡ ನೀಡಲಾಗಿದೆ. ಕೆಲವರು ಆ ಸಂದರ್ಭದಲ್ಲಿ ಹಾಜರಾಗಿದ್ದರೂ ಪ್ರಮಾಣ ಪತ್ರ ಕೊಟ್ಟಿರಲಿಲ್ಲ. ಅಂತಹವರು ನಂತರ ಮೂಲ ದಾಖಲೆಗಳನ್ನು ಕೊಟ್ಟು ಮನವಿ ಮಾಡಿದ್ದರ ಹಿನ್ನೆಲೆಯಲ್ಲಿ ತಜ್ಞರ ಸಮಿತಿ ಪರಿಶೀಲಿಸಿ, ಯಾರೆಲ್ಲ ಪ್ರಮಾಣ ಪತ್ರ ಪಡೆಯಲು ಅರ್ಹರು ಎಂಬುದನ್ನು ತೀರ್ಮಾನಿಸಿದೆ. ಅಂತಹವರ ಪಟ್ಟಿಯನ್ನು ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಆ.17ರಂದು ಬೆಳಿಗ್ಗೆ 10ಗಂಟೆಗೆ ಮೂಲ ದಾಖಲೆ ಸಮೇತ ಹಾಜರಾಗಿ ಪ್ರಮಾಣ ಪತ್ರ ಪಡೆಯಬಹುದು. ಅನಿವಾರ್ಯ ಕಾರಣಗಳಿಂದ ಪರಿಶೀಲನೆ ಸಂದರ್ಭದಲ್ಲಿ ಗೈರುಹಾಜರಾಗಿದ್ದವರೂ ಅಂದು ಬಂದು ಪ್ರಮಾಣ ಪತ್ರಗಳನ್ನು ಪಡೆಯಬಹುದು ಎಂದು ತಿಳಿಸಿದ್ದಾರೆ.

Share This Article