ಶಿವಮೊಗ್ಗ: ನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳ ಬಗ್ಗೆ ಮಾಹಿತಿ ನೀಡಿದ್ದ ವ್ಯಕ್ತಿಯನ್ನು ಹತ್ಯೆಗೈದಿದ್ದ ಆರೋಪಿಗಳಿಗೆ ಶಿವಮೊಗ್ಗ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (Court) ಜೀವಾವಧಿ ಶಿಕ್ಷೆ (Life Imprisonment) ನೀಡಿ ತೀರ್ಪು ನೀಡಿದೆ.
ಶಿಕ್ಷೆಗೆ ಗುರಿಯಾದ ಅಪರಾಧಿಗಳನ್ನು ಲತೀಫ್, ಪರ್ವೇಜ್, ಸೈಯದ್ ಜಿಲಾನ್, ಜಾಫರ್ ಸಾದಿಕ್, ಸೈಯದ್ ರಾಜೀಕ್, ಮಹಮ್ಮದ್ ಶಾಬಾಜ್, ಸಾಬಿರ್ ಮತ್ತು ಮಹಮ್ಮದ್ ಯೂಸುಫ್ ಎಂದು ಗುರುತಿಸಲಾಗಿದೆ. ಅಪರಾಧಿಗಳು 2021ರಲ್ಲಿ, ಗಾಂಜಾ ಮಾರಾಟದ ಬಗ್ಗೆ ಪೊಲೀಸರಿಗೆ ಮಾಹಿತಿ ಕೊಡುತ್ತಾನೆ ಎಂಬ ಕಾರಣಕ್ಕೆ ಇರ್ಫಾನ್ ಎಂಬಾತನನ್ನು ಟಿಪ್ಪು ನಗರದಲ್ಲಿ ಮಾರಕಾಸ್ತ್ರಗಳಿಂದ ಚುಚ್ಚಿ ಹತ್ಯೆಗೈದಿದ್ದರು.
ಪ್ರಕರಣ ಸಂಬಂಧ ತುಂಗಾನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಅಲ್ಲದೇ ಈ ಆರೋಪಿಗಳಿಗೆ ಜಾಮೀನು ನೀಡಬಾರದು. ಜಾಮೀನು ನೀಡಿದರೆ ಮೃತ ಇರ್ಫಾನ್ ಕುಟುಂಬಕ್ಕೆ ತೊಂದರೆ ನೀಡುತ್ತಾರೆ ಎಂದು ಪೊಲೀಸರು ಹಾಗೂ ಸರ್ಕಾರಿ ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದರು.
ವಾದ ಆಲಿಸಿದ ನ್ಯಾಯಾಲಯ ಎಂಟು ಮಂದಿ ಆರೋಪಿಗಳಿಗೆ ತಲಾ 5 ಸಾವಿರ ರೂ. ದಂಡ ಹಾಗೂ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.