138ಕ್ಕೆ ಆಲೌಟ್‌ – 27 ವರ್ಷಗಳಲ್ಲಿ ಭಾರತಕ್ಕೆ ಮೊದಲ ಸರಣಿ ಸೋಲು; 110 ರನ್‌ ಗೆಲುವಿನೊಂದಿಗೆ ಸರಣಿ ಗೆದ್ದ ಲಂಕಾ

Public TV
3 Min Read
Team India

ಕೊಲಂಬೊ: ಅವಿಷ್ಕಾ ಫರ್ನಾಂಡೋ, ಕುಸಲ್‌ ಮೆಂಡಿಸ್‌ ಅಮೋಘ ಬ್ಯಾಟಿಂಗ್‌ ಹಾಗೂ ದುನಿತ್ ವೆಲ್ಲಲಾಗೆ ಮ್ಯಾಜಿಕ್‌ ಬೌಲಿಂಗ್‌ ನೆರವಿನೊಂದಿಗೆ ಶ್ರೀಲಂಕಾ ತಂಡವು ಭಾರತದ ವಿರುದ್ಧ 110 ರನ್‌ಗಳಿಂದ ಗೆಲುವು ಸಾಧಿಸಿದೆ. ಈ ಮೂಲಕ ತವರಿನಲ್ಲೇ ಭಾರತದ ವಿರುದ್ಧ ಏಕದಿನ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಅಲ್ಲದೇ ಕಳೆದ 27 ವರ್ಷಗಳಲ್ಲಿ ಲಂಕಾ ವಿರುದ್ಧ ಭಾರತಕ್ಕೆ ಮೊದಲ ಸರಣಿ ಸೋಲು ಇದಾಗಿದೆ.

Sri Lanka

2023ರ ವರ್ಷಾರಂಭದಲ್ಲೇ ಭಾರತ, ಶ್ರೀಲಂಕಾ ವಿರುದ್ಧ ಹಾರ್ದಿಕ್‌ ಪಾಂಡ್ಯ ನಾಯಕತ್ವದಲ್ಲಿ ಟಿ20 ಸರಣಿ ಹಾಗೂ ರೋಹಿತ್‌ ಶರ್ಮಾ ನಾಯಕತ್ವದಲ್ಲಿ ಏಕದಿನ ಸರಣಿಯನ್ನು ತವರಿನಲ್ಲೇ ಗೆದ್ದುಕೊಂಡಿತ್ತು. ಆದ್ರೆ ಈ ಬಾರಿ ತನ್ನ ತವರಿನಲ್ಲಿ ಬಲಿಷ್ಠ ಭಾರತದ ವಿರುದ್ಧ ಸರಣಿ ಗೆದ್ದು ಸೇಡು ಲಂಕಾ ತೀರಿಸಿಕೊಂಡಿತು. ಕೊಲೊಂಬೊದ ಆರ್‌. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ರೋಹಿತ್‌ ಶರ್ಮಾ ಬಳಗವನ್ನು 110 ರನ್‌ಗಳಿಂದ ಮಣಿಸುವ ಮೂಲಕ ಶ್ರೀಲಂಕಾ 27 ವರ್ಷಗಳ ಬಳಿಕ ಭಾರತದ ವಿರುದ್ಧ ಏಕದಿನ ಸರಣಿ ಗೆದ್ದ ದಾಖಲೆ ಬರೆಯಿತು.

Team India 1

ಶ್ರೀಲಂಕಾ ನೀಡಿದ 249 ರನ್‌ಗಳ ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ ಭಾರತ ತಂಡವು 26.1 ಓವರ್‌ಗಳಲ್ಲಿ 138 ರನ್‌ಗಳಿಸಿ ಆಲೌಟ್‌ ಆಗುವ ಮೂಲಕ 110 ರನ್‌ಗಳಿಂದ ಸೋಲು ಕಂಡಿತು. ಚೇಸಿಂಗ್‌ ಆರಂಭಿಸಿದ ಭಾರತ ಆರಂಭದಿಂದಲೇ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಳ್ಳಲು ಆರಂಭಿಸಿತು. ಭಾರತದ ಪರ ರೋಹಿತ್‌ ಶರ್ಮಾ 35 ರನ್‌ (20 ಎಸೆತ, 6 ಬೌಂಡರಿ, 1 ಸಿಕ್ಸರ್)‌, ವಾಷಿಂಗ್ಟನ್‌ ಸುಂದರ್‌ ಕೊನೆಯಲ್ಲಿ 30 ರನ್‌ ಗಳಿಸಿದ್ದು ಬಿಟ್ಟರೆ, ಉಳಿದ ಯಾರೊಬ್ಬರೂ ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರದ ಕಾರಣ ಭಾರತ ತಂಡ ಹೀನಾಯ ಸೋಲಿಗೆ ತುತ್ತಾಯಿತು. ಇದನ್ನೂ ಓದಿ: ತಲೆಗೂದಲು ಕಟ್‌, ರಕ್ತ ಹೊರತೆಗೆತ, ಕಠಿಣ ವ್ಯಾಯಾಮ, ಆಹಾರದಿಂದ ದೂರ – ತೂಕ ಇಳಿಸಲು ಏನೆಲ್ಲಾ ಮಾಡಿದ್ರು ವಿನೇಶ್‌?

Sri Lanka 1

ವಿರಾಟ್‌ ಕೊಹ್ಲಿ ಸಹ ಕೇವಲ 20 ರನ್‌ ಗಳಿಸಿ ಮತ್ತೊಮ್ಮೆ ನಿರಾಸೆ ಮೂಡಿಸಿದರು. ಶುಭಮನ್‌ ಗಿಲ್‌, ರಿಷಭ್‌ ಪಂತ್‌, ಶ್ರೇಯಸ್‌ ಅಯ್ಯರ್‌, ಶಿವಂ ದುಬೆ, ರಿಯಾನ್‌ ಪರಾಗ್‌ ಸಹ ಭಾರತ ತಂಡವನ್ನು ಗೆಲುವಿನ ದಡಕ್ಕೆ ಸೇರಿಸುವಲ್ಲಿ ವಿಫಲರಾದರು. ಇದರಿಂದಾಗಿ ಭಾರತ 3ನೇ ಪಂದ್ಯವನ್ನು ಸೋತು, ಸರಣಿ ಬಿಟ್ಟುಕೊಡಬೇಕಾಯಿತು. ಇದನ್ನೂ ಓದಿ: ಪದಕ ಗೆದ್ದು ತಾಯ್ನಾಡಿಗೆ ಮರಳಿದ ಮನು ಭಾಕರ್‌ಗೆ ಹೂಮಳೆಯ ಸ್ವಾಗತ

Rohit Sharma 1

ಫರ್ನಾಂಡೋ ಭರ್ಜರಿ ಬ್ಯಾಟಿಂಗ್:
ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಶ್ರೀಲಂಕಾ, ಉತ್ತಮ ಆರಂಭ ಪಡೆಯಿತು. ಪಥುಮ್‌ ನಿಸ್ಸಾಂಕ, ಆವಿಷ್ಕ ಫರ್ನಾಂಡೋ ಹಾಗೂ ಕುಶಾಲ್‌ ಮೆಂಡಿಸ್‌ ಅವರ ಜವಾಬ್ದಾರಿಯುತ ಬ್ಯಾಟಿಂಗ್‌ ನೆರವಿನಿಂದ ಲಂಕಾ 3 ವಿಕೆಟ್‌ಗೆ 183 ರನ್‌ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. ಬೃಹತ್‌ ಮೊತ್ತ ಪೇರಿಸುವ ಸಾಧ್ಯತೆಯೂ ಇತ್ತು. ಆದರೆ, ನಂತರ ಬಂದ ಬ್ಯಾಟರ್‌ಗಳು ಭಾರತೀಯ ಬೌಲರ್‌ಗಳ ದಾಳಿಗೆ ಸಿಲುಕಿ ವಿಕೆಟ್‌ ಒಪ್ಪಿಸಿದ ಕಾರಣ ಶ್ರೀಲಂಕಾ 50 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 248 ರನ್‌ ಗಳಿಸಲಷ್ಟೇ ಶಕ್ತವಾಯಿತು.

Team India 2

ಲಂಕಾ ಪರ ಪಾತುಂ ನಿಸ್ಸಾಂಕ 45 ರನ್‌, ಅವಿಷ್ಕಾ ಫರ್ನಾಂಡೋ 96 ರನ್‌ (102, 9 ಬೌಂಡರಿ, 2 ಸಿಕ್ಸರ್), ಕುಸಲ್ ಮೆಂಡಿಸ್ 59 ರನ್‌, ಚರಿತ್ ಅಸಲಂಕಾ 10 ರನ್‌, ಜನಿತ್ ಲಿಯಾನಗೆ 8 ರನ್‌, ದುನಿತ್ ವೆಲ್ಲಲಾಗೆ 2 ರನ್‌, ಕಮಿಂಡು ಮೆಂಡಿಸ್ 23 ರನ್‌, ಮಹೀಶ್‌ ತೀಕ್ಷಣ 3 ರನ್‌ ಗಳಿಸಿ ಅಜೇಯರಾಗುಳಿದರು. ಇದನ್ನೂ ಓದಿ: Paris Olympics 2024 | ಅನರ್ಹಗೊಂಡ ಕೆಲವೇ ನಿಮಿಷಗಳಲ್ಲಿ ವಿನೇಶ್‌ ಆಸ್ಪತ್ರೆಗೆ ದಾಖಲು

ಭಾರತದ ಪರ ರಿಯಾನ್‌ ಪರಾಗ್‌ 3 ವಿಕೆಟ್‌ ಕಬಳಿಸಿದರೆ, ಅಕ್ಷರ್‌ ಪಟೇಲ್‌, ಮೊಹಮ್ಮದ್‌ ಸಿರಾಜ್‌, ವಾಷಿಂಗ್ಟನ್‌ ಸುಂದರ್‌ ಹಾಗೂ ಕುಲ್ದೀಪ್‌ ಯಾದವ್‌ ಅವರು ತಲಾ ಒಂದು ವಿಕೆಟ್‌ ಪಡೆದರು. ಮೊದಲ ಪಂದ್ಯ ರೋಚಕ ಟೈ ಆದರೆ, 2ನೇ ಪಂದ್ಯದಲ್ಲಿ ಭಾರತವು 32 ರನ್‌ಗಳಿಂದ ಸೋಲನುಭವಿಸಿತ್ತು.  ಇದನ್ನೂ ಓದಿ: ನೀವು ಚಾಂಪಿಯನ್‌ಗಳಲ್ಲಿ ಚಾಂಪಿಯನ್: ವಿನೇಶ್‌ಗೆ ಸಮಾಧಾನ ಹೇಳಿದ ಮೋದಿ

Share This Article