ಭಾರತಕ್ಕೆ ಬಂದ ಶೇಖ್ ಹಸೀನಾ – ಗಡಿಯಲ್ಲಿ ಭದ್ರತೆ ಕುರಿತು ಮೋದಿ ನಿವಾಸದಲ್ಲಿ ಹೈವೋಲ್ಟೇಜ್ ಸಭೆ

Public TV
2 Min Read
PM Modi Chairs Key Meet Over Bangladesh Unrest

ನವದೆಹಲಿ: ನೆರೆಯ ಬಾಂಗ್ಲಾದೇಶದ (Bangladesh) ಪ್ರಕ್ಷುಬ್ಧತೆಯ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಅಧಿಕೃತ ನಿವಾಸದಲ್ಲಿ ಕ್ಯಾಬಿನೆಟ್ ಸಮಿತಿಯು ಭದ್ರತೆಗೆ ಸಂಬಂಧಿಸಿದಂತೆ ಉನ್ನತಮಟ್ಟದ ಸಭೆ ನಡೆಸಲಾಗಿದೆ. ಸಭೆಯಲ್ಲಿ ವಿದೇಶಾಂಗ ಸಚಿವ ಎಸ್.ಜೈಶಂಕರ್, ಅಮಿತ್ ಶಾ, ನಿರ್ಮಲಾ ಸೀತಾರಾಮನ್, ರಾಜನಾಥ್ ಸಿಂಗ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಸಭೆಯಲ್ಲಿ ವಿದೇಶಾಂಗ ಸಚಿವ ಎಸ್.ಜೈಶಂಕರ್ (S Jaishankar) ಅವರು ಬಾಂಗ್ಲಾದೇಶದ ಪರಿಸ್ಥಿತಿಯ ಬಗ್ಗೆ ಪ್ರಧಾನಿ ಮೋದಿಯವರಿಗೆ ವಿವರಿಸಿದರು. ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕೂಡ ಜೈಶಂಕರ್ ಅವರೊಂದಿಗೆ ಈ ವಿಚಾರವಾಗಿ ಮಾತನಾಡಿದ್ದಾರೆ.

ಬಾಂಗ್ಲಾದ ಮಾಜಿ ಪ್ರಧಾನಿ ಶೇಖ್ ಹಸೀನಾ (Sheikh Hasina) ಅವರು ಬಾಂಗ್ಲಾದೇಶದ ಸೇನಾ ಹೆಲಿಕಾಪ್ಟರ್ ಮೂಲಕ ದೆಹಲಿ ಬಳಿಯ ವಾಯುನೆಲೆಗೆ ಬಂದಿಳಿದರು. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಶೇಖ್ ಹಸೀನಾ ಅವರನ್ನು ಭೇಟಿ ಮಾಡಿದರು. ನಂತರ ಅವರು ಲಂಡನ್‍ಗೆ ತೆರಳುವ ನಿರೀಕ್ಷೆಯಿದೆ. ಅಲ್ಲಿ ಅವರು ಆಶ್ರಯ ಪಡೆಯಬಹುದು ಎಂದು ಮೂಲಗಳು ತಿಳಿಸಿವೆ.

Sheikh Hasina

ಇದರ ಬೆನ್ನಲ್ಲೇ ಬಾಂಗ್ಲಾದೇಶದ ಸೇನಾ ಮುಖ್ಯಸ್ಥ ಜನರಲ್ ವೇಕರ್-ಉಜ್-ಝಮಾನ್ ಅವರು ರಾಜ್ಯ ದೂರದರ್ಶನದಲ್ಲಿ ಹಸೀನಾ ಅವರು ರಾಜೀನಾಮೆ ನೀಡಿದ್ದಾರೆ. ಸೇನೆಯು ಸರ್ಕಾರವನ್ನು ರಚಿಸಲಿದೆ ಎಂದು ಮಾಹಿತಿ ನೀಡಿದ್ದಾರೆ.

ಶೇಖ್ ಹಸೀನಾ ಅವರು ಜುಲೈ ಆರಂಭದಿಂದ ತನ್ನ ಸರ್ಕಾರದ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗಳನ್ನು ಹತ್ತಿಕ್ಕಲು ಪ್ರಯತ್ನಿಸಿದರು ಆದರೆ ಭಾನುವಾರ ಪ್ರತಿಭಟನೆ ತೀವ್ರ ಸ್ವರೂಪ ಪಡೆದ ನಂತರ ಸುಮಾರು 100 ಜನರು ಸಾವನ್ನಪ್ಪಿದರು. ಇದಾದ ಬಳಿಕ ಪ್ರತಿಭಟನೆ ತೀವ್ರಗೊಂಡು ಅವರ ನಿವಾಸದ ಮೇಲೂ ದಾಳಿ ನಡೆಯಿತು. ಇದಕ್ಕೂ ಮುನ್ನವೇ ಅವರು ಅಲ್ಲಿಂದ ಪಲಾಯನ ಮಾಡಿದ್ದರು.

ಬಾಂಗ್ಲಾ ಕ್ಷಿಪ್ರ ರಾಜಕೀಯ ಬೆಳವಣಿಗೆ ಬೆನ್ನಲ್ಲೇ, ಭಾರತ-ಬಾಂಗ್ಲಾ ಗಡಿಭಾಗದಲ್ಲಿ ಬಿಗಿ ಭದ್ರತೆ ನಿಯೋಜಿಸಲಾಗಿದೆ. ಬಿಎಸ್‍ಎಫ್ ಭದ್ರತಾ ಪಡೆಗಳನ್ನು ರವಾನಿಸಿ ಭದ್ರತೆ ಹೆಚ್ಚಿಸಲಾಗಿದೆ. ಬಿಎಸ್‍ಎಫ್ ಸಿಬ್ಬಂದಿಯ ರಜೆ ರದ್ದು ಮಾಡಲಾಗಿದೆ. ಬಾಂಗ್ಲಾದಲ್ಲಿನ ಬೆಳವಣಿಗೆಗಳ ಮೇಲೆ ನಿಗಾ ವಹಿಸಿದ್ದು, ಭಾರತ-ಬಾಂಗ್ಲಾ ರೈಲು ಸಂಚಾರ ಸಹ ಸ್ಥಗಿತಗೊಳಿಸಿದೆ.

ಬಾಂಗ್ಲಾದಲ್ಲಿ ಹಿಂಸಾಚಾರಕ್ಕೆ ಕಾರಣ ಏನು?
ಬಾಂಗ್ಲಾದೇಶದಲ್ಲಿ ಪ್ರಸ್ತುತ ಸರ್ಕಾರಿ ಉದ್ಯೋಗಗಳಲ್ಲಿ 56% ಕೋಟಾ ವ್ಯವಸ್ಥೆ ಕಾಯ್ದಿರಿಸಲಾಗಿದೆ. ಇದರಲ್ಲಿ 1971ರ ವಿಮೋಚನಾ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದವರಿಗೆ 30% ಹಿಂದುಳಿದ ಜಿಲ್ಲೆಗಳ ಜನಕ್ಕೆ, 10% ಮಹಿಳೆಯರಿಗೆ 10% ಜನಾಂಗೀಯ ಅಲ್ಪಸಂಖ್ಯಾತರಿಗೆ 5% ಹಾಗೂ ಅಂಗವಿಕಲರಿಗೆ 1% ಮೀಸಲಾತಿ ಕಲ್ಪಿಸಲಾಗಿದೆ. ವಿಮೋಚನಾ ಹೋರಾಟದ ಕುಟುಂಬಸ್ಥರಿಗೆ ಕಲ್ಪಿಸಿರುವ ±30% ಮೀಸಲಾತಿ ರದ್ದು ಪಡಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರು. ಈ ಬೇಡಿಕೆಯನ್ನು ನಿರ್ಗಮಿತ ಪ್ರಧಾನಿ ಶೇಕ್ ಹಸೀನಾ ತಿರಸ್ಕರಿಸಿದ್ದರಿಂದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ವಿದ್ಯಾರ್ಥಿಗಳ ಪ್ರತಿಭಟನೆಗೆ ಸೇನೆ, ವಿಪಕ್ಷಗಳಿಂದ ಸಂಪೂರ್ಣ ಬೆಂಬಲ ವ್ಯಕ್ತವಾಗಿದ್ದರಿಂದ ಆಕ್ರೋಶ ಕಟ್ಟೆಯೊಡಿದಿದೆ. ಇದರ ಬೆನ್ನಲ್ಲೇ ಶೇಖ್ ಹಸೀನಾ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಭಾರತಕ್ಕೆ ಬಂದಿದ್ದಾರೆ.

Share This Article