PSI ಪರಶುರಾಮ್‌ ಸಾವು ಪ್ರಕರಣ: ಸರ್ಕಾರ ತನಿಖೆಗೆ ವಹಿಸಿದ ಮರುದಿನವೇ ಯಾದಗಿರಿಗೆ ಸಿಐಡಿ ತಂಡ ಎಂಟ್ರಿ

Public TV
2 Min Read
Yadgir PSI Parashuram

– ಕೇಸ್‌ ದಾಖಲಾಗ್ತಿದ್ದಂತೆ ಶಾಸಕ ಚನ್ನಾರೆಡ್ಡಿ, ಪುತ್ರ ನಾಪತ್ತೆ

ಯಾದಗಿರಿ: ಇಲ್ಲಿನ ನಗರ ಠಾಣೆ ಪಿಎಸ್‌ಐ ಪರಶುರಾಮ್‌ ಅವರ ನಿಗೂಢ ಸಾವಿನ ಪ್ರಕರಣದ ತನಿಖೆ ಹೊಣೆ ಹೊತ್ತಿರುವ ಸಿಐಡಿ ತನಿಖಾ ತಂಡ (CID Investigation Team) ಯಾದಗಿರಿಗೆ ಭಾನುವಾರ ಭೇಟಿ ನೀಡಿದೆ.

ಪರಶುರಾಮ್‌ ಸಾವು ಪ್ರರಕರಣ ಸಂಬಂಧ ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು (Channa Reddy Patel) ಮತ್ತು ಅವರ ಪುತ್ರ ಪಂಪಣ್ಣಗೌಡ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬೆನ್ನಲ್ಲೇ ಸಿಐಡಿ ತನಿಖೆಗೆ ವಹಿಸಿ ರಾಜ್ಯ ಸರ್ಕಾರ ಶನಿವಾರ (ಆ.3) ಆದೇಶ ಹೊರಡಿಸಿತ್ತು. ಸರ್ಕಾರ ಆದೇಶಿಸಿದ ಮರುದಿನವೇ ಡಿವೈಎಸ್‌ಪಿ (DYSP) ಪುನೀತ ನೇತೃತ್ವದ ಸಿಐಡಿ ತನಿಖಾ ತಂಡ ಯಾದಗಿರಿಗೆ (Yadagiri) ಭೇಟಿ ಕೊಟ್ಟಿದೆ.

Yadgiri PSI Parashuram Death Case 5

ಯಾದಗಿರಿ ನಗರ ಪೊಲೀಸ್‌ ಠಾಣೆಗೆ (Yadagiri City Police Station) ಭೇಟಿ ನೀಡಿದ್ದ ಸಿಐಡಿ ತಂಡ ಈಗಾಗಲೇ ಡಿವೈಎಸ್ಪಿ ಕಚೇರಿಯಲ್ಲಿ ಕೇಸ್‌ಗೆ ಸಂಬಂಧಿಸಿದ ಮಾಹಿತಿ ಪಡೆದುಕೊಂಡಿದೆ. ಇಂದೇ ಪೊಲೀಸರಿಂದ ಕೇಸ್ ಫೈಲ್ ಪಡೆದು, ತನಿಖೆ ಚುರುಕುಗೊಳಿಸುವ ಸಾಧ್ಯತೆ ಇದೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ.

ಶಾಸಕ ಚನ್ನಾರೆಡ್ಡಿ, ಪಂಪಣ್ಣಗೌಡಗೆ ಬಂಧನ ನಾಪತ್ತೆ:
ಇನ್ನೂ ಪರಶುರಾಮ್‌ ನಿಗೂಢ ಸಾವು ಪ್ರಕರಣದಲ್ಲಿ ಶಾಸಕ ಚೆನ್ನಾರೆಡ್ಡಿ ಹಾಗು ಪುತ್ರ ಪಂಪನಗೌಡ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಕೇಸ್‌ ದಾಖಲಾಗುತ್ತಿದ್ದಂತೆ ಬಂಧನದ ಭೀತಿಗೆ ಒಳಗಾಗಿರುವ ಶಾಸಕ ಹಾಗೂ ಪುತ್ರ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ. ಕೇಸ್ ದಾಖಲಾಗುತ್ತಿದ್ದಂತೆ ಚೆನ್ನಾರೆಡ್ಡಿ ಹಾಗು ಪುತ್ರ ಪಂಪನಗೌಡ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಯಾರ ಸಂಪರ್ಕದಲ್ಲಿಯೂ ಇಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ.

Yadgiri PSI Parashuram Death Case 1

ಪರಶುರಾಮ್ ತಂದೆ ಹೇಳಿದ್ದೇನು?
ಮಗನ ಸಾವಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪರಶುರಾಮ್ ತಂದೆ ಜನಕಮುನಿ, ಶುಕ್ರವಾರ ಮಧ್ಯಾಹ್ನ ಇಬ್ಬರೂ ಸೇರಿ ಮನೆಯಲ್ಲಿ ಅಡುಗೆ ಮಾಡಿದ್ದೆವು. ಚಿತ್ರಾನ್ನ ಮಾಡಿ ಊಟ ಮಾಡಿಕೊಂಡಿದ್ದೆವು. ಆನಂತರ ಅವನು ಹೋಗಿ ಅವನ ಕೋಣೆಯಲ್ಲಿ ಮಲಗಿದ್ದ. ರಾತ್ರಿ 8 ಗಂಟೆ ಹೊತ್ತಿಗೆ ಎಬ್ಬಿಸಲು ಹೋದಾಗ ಅವನು ಎದ್ದೇಳಲಿಲ್ಲ. ಬೆಡ್ ಬಳಿ ಸ್ವಲ್ಪ ರಕ್ತ ಬಿದ್ದಿತ್ತು. ಕೂಡಲೇ ಆಸ್ಪತ್ರೆಗೆ ಸೇರಿಸಿದ್ರು ಅವನು ಬದುಕಲಿಲ್ಲ. ನಮ್ಮದು ತೀರಾ ಬಡತನದ ಕುಟುಂಬ. ಬಡತನದಲ್ಲೇ ಕಷ್ಟಪಟ್ಟು ಓದಿ ನೌಕರಿ ಪಡೆದಿದ್ದ. ಏನೇ ನೋವಾದರೂ ಅವನ ಹೆಂಡತಿ, ತಾಯಿ ಜೊತೆ ಹಂಚಿಕೊಳ್ತಿದ್ದ. ಶುಕ್ರವಾರ ಬೆಳಗ್ಗೆ ಯಾಕೋ ಬೇಜಾರಾಗಿದ್ದ. ಅವನ ಸಾವಿನಿಂದ ನಮಗೆಲ್ಲ ತುಂಬಾ ಆಘಾತವಾಗಿದೆ. ನನ್ನ ಮಗನ ಸಾವಿಗೆ ಕಾರಣರಾದವರನ್ನು ಬಂಧಿಸಬೇಕು. ನನ್ನ ಸೊಸೆಗೆ ಬದುಕಲು ದಾರಿ ಮಾಡಿಕೊಡಬೇಕು ಅಂತ ಆಗ್ರಹಿಸಿದ್ದಾರೆ.

ಏನಿದು ಪ್ರಕರಣ?
ಒಂದು ವರ್ಷದ ಹಿಂದೆ ಯಾದಗಿರಿ ನಗರದ ಪಿಎಸ್‌ಐ ಆಗಿ ಪರಶುರಾಮ್ (35) ಅಧಿಕಾರ ಸ್ವೀಕರಿಸಿದ್ದರು. ಅವರನ್ನ ಯಾದಗಿರಿಯ ಸೈಬರ್ ಕ್ರೈಮ್ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ವರ್ಗಾವಣೆಯಾದ ಕಾರಣ ಕಳೆದ ಗುರುವಾರ ಅವರನ್ನು ಪೊಲೀಸ್‌ ಸಿಬ್ಬಂದಿ ಬೀಳ್ಕೊಟ್ಟಿದ್ದರು. ಶುಕ್ರವಾರ (ಆ.2) ರಾತ್ರಿ 8 ಗಂಟೆಯ ವೇಳೆಗೆ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇದರಿಂದ ಅನುಮಾನ ವ್ಯಕ್ತಪಡಿಸಿದ ಕುಟುಂಬಸ್ಥರು ನಗರ ಠಾಣೆಗೆ ದೂರು ನೀಡಿದೆ. ಪ್ರಕರಣದ ತೀವ್ರತೆ ಹೆಚ್ಚಾಗುತ್ತಿದ್ದಂತೆ ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಆದೇಶಿಸಿದೆ.

Share This Article