ವಿಜಯಪುರ: ನಗರದ ಜಲನಗರ ಎಂಬಲ್ಲಿ ಮಾಜಿ ಸೈನಿಕರೊಬ್ಬರು ಕುಡಿದ ಅಮಲಿನಲ್ಲಿ ಪಿಸ್ತೂಲ್ ಹಿಡಿದು ಗುರುವಾರ ರಾತ್ರಿ ನಗರದ ತುಂಬಾ ಓಡಾಡಿದ್ದಾರೆ.
ರಾಜು ಹಡಗಲಿ ಗನ್ ಹಿಡಿದು ಓಡಾಡಿದ ಮಾಜಿ ಸೈನಿಕ. ರಾಜು ಗನ್ ಹಿಡಿದು ತಿರುಗಾಡಿದ್ದರಿಂದ ನಗರದಲ್ಲಿ ಕೆಲಕಾಲ ಭಯದ ವಾತಾವರಣ ಸೃಷ್ಟಿಯಾಗಿತ್ತು. ಗುರುವಾರ ರಾತ್ರಿ ಸುಮಾರು 10 ಗಂಟೆ ವೇಳೆಗೆ ಕೈಯಲ್ಲಿ ಪಿಸ್ತೂಲ್ ಹಿಡಿದು ಎಲ್ಲರನ್ನು ಹೆದರಿಸುತ್ತಾ ತಿರುಗಾಡಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ರಾಜು ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಇದರಿಂದ ಭಯಭೀತರಾದ ರಸ್ತೆ ಬದಿ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಸ್ಥಳದಿಂದ ಓಡಿ ಹೋಗಿದ್ದಾರೆ.
ರಾಜು ಸುಮಾರು 1 ಗಂಟೆಗೂ ಹೆಚ್ಚು ಕಾಲ ಗನ್ ಹಿಡಿದು ರಸ್ತೆಯುದ್ದಕ್ಕೂ ಕೂಗಾಡುತ್ತಾ ರಸ್ತೆಯಲ್ಲಿ ಸಿಕ್ಕವರಿಗೆಲ್ಲಾ ಗನ್ ತೋರಿಸುತ್ತಾ ಓಡಾಡಿ ಬಳಿಕ ಮನೆಗೆ ತೆರಳಿದ್ದಾರೆ. ವಿಷಯ ತಿಳಿದ ಜಲನಗರ ಪೊಲೀಸರು ರಾಜು ಮನೆಗೆ ತೆರಳಿ ಅವರನ್ನು ವಶಕ್ಕೆ ಪಡದು ವಿಚಾರಣೆ ನಡೆಸಿದ್ದಾರೆ.