Wayanad landslides – ಕಂಬನಿ… ಖಾಲಿಯಾಗಿದೆ…!

Public TV
3 Min Read
022
Wayanad landslides

ಹಸಿರು ಪ್ರಕೃತಿ ಮಡಿಲಿನಲ್ಲಿದ್ದ ಆ ಊರಿನ ಜನ ರಾತ್ರಿ ಸುಖ ನಿದ್ರೆಗೆ ಜಾರಿದ್ದರು. ಭವಿಷ್ಯದ ನಾಳೆಗಾಗಿ ನೂರಾರು ಕನಸುಗಳನ್ನು ಬುತ್ತಿಯಲ್ಲಿ ಕಟ್ಟಿಕೊಂಡು, ನಾಳೆ ಉದಯಿಸುವ ಸೂರ್ಯ ಹೊಸ ಬೆಳಕು ತರುತ್ತಾನೆಂದು ಇಡೀ ಊರಿಗೆ ಊರೇ ಶಾಂತವಾಗಿ ಮಲಗಿತ್ತು. ಆದ್ರೆ ಆ ಊರಿನ ಅದೆಷ್ಟೋ ಜನರ ಪಾಲಿಗೆ ರಾತ್ರಿ ಮುಳುಗಿದ ಸೂರ್ಯ ಮತ್ತೆ ಉದಯಿಸಲಿಲ್ಲ.

Wayanad Landslide flood chooralmala mundakkai meppadi news 2

ಏಕೆಂದರೆ ರಾತ್ರೋ ರಾತ್ರಿ ಹುಟ್ಟಿದ ಪ್ರಕೃತಿಯ ಮುನಿಸು ನೂರಾರು ಜನರ ಬದುಕಿನ ಭರವಸೆಗಳನ್ನೇ ಮುಳುಗಿಸಿತ್ತು. ಭೋರ್ಗರೆಯುತ್ತಾ ನುಗ್ಗಿ ಬಂದ ನೀರು ಊರಿಗೂರನ್ನೇ ನಾಮಾವಶೇಷಗೊಳಿಸಿತು. ರಕ್ಕಸರಂತೆ ಒಂದೊಂದಾಗಿ ಧುಮ್ಮಿಕ್ಕುತ್ತಾ ಬಂದ ಬಂಡೆಗಳು ಮನೆ ಮಠಗಳನ್ನೂ ನೋಡಲಿಲ್ಲ, ಜೀವಗಳ ಬಗ್ಗೆ ಕರುಣೆ ತೋರಲಿಲ್ಲ. ಧ್ವಂಸ ಮಾಡಿ, ಇಲ್ಲೊಂದು ಊರು ಇತ್ತು ಎಂಬುದನ್ನೇ ಕಲ್ಪನೆ ಎನ್ನುವಂತೆ ಮಾಡಿದ್ದವು. ಸುಃಖ ನಿದ್ರೆಯಲ್ಲಿ ಮಲಗಿದ್ದವರು ಚಿರ ನಿದ್ರೆ ಜಾರಿದ್ದರು. ಅರೆ ನಿದ್ರೆಯಲ್ಲಿದ್ದವರು ಬೆಳಕರೆಯುವ ಹೊತ್ತಿಗೆ ಕನಸುಗಳನ್ನು ಕೈಚೆಲ್ಲಿ ದುರಂತ ಭೂಮಿಯಲ್ಲಿ ಕಣ್ಣೀರಿಡುತ್ತಿದ್ದರು. ಸದ್ಯ ವಯನಾಡು (Wayanad) ಜಿಲ್ಲೆಯ ಮೆಪ್ಪಾಡಿ ಪಟ್ಟಣ ವ್ಯಾಪ್ತಿಯ ಮುಂಡಕ್ಕೈ, ಚೂರಲ್‌ಮಲ, ಅಟ್ಟಮಲ ಹಾಗೂ ನೂಲ್ಪುಳ ಗ್ರಾಮಗಳ ನೈಜ ಸ್ಥಿತಿ ಇದು.

Wayanad Landslide flood chooralmala mundakkai meppadi news 1

ಬದುಕುಳಿದವರು ಮರು ದಿನ ಎದು ನೋಡಿದರೆ ಉಂಟಾದ ಭೂಕುಸಿತಕ್ಕೆ ಅದೆಷ್ಟೋ ಕಿಲೋ ಮೀಟರ್‌ಗಟ್ಟಲೇ ಶವಗಳು ಕೊಚ್ಚಿಹೋಗಿದ್ದವು. ಇನ್ನೂ ಕೆಲ ಮಕ್ಕಳ ಮೃತ ದೇಹಗಳು ಮರಕ್ಕೆ, ಬೇಲಿಗಳಿಗೆ ಸಿಕ್ಕಿಕೊಂಡಿದ್ದವು, ಕೆಲವರ ದೇಹಗಳಂತು ಬಂಡೆ ಬಡೆದು ಛಿದ್ರ ಛಿದ್ರವಾಗಿತ್ತು. ಇನ್ನೂ ಕೆಲವರದ್ದು ಕೈ ಸಿಕ್ಕರೆ ಕಾಲು ಇಲ್ಲ, ಕಾಲಿದ್ದರೆ ಅರ್ಧ ದೇಹವೇ ಇಲ್ಲ. ಭೂಮಿ ಬಗೆದು ಕೆಸರು ಮೆತ್ತಿಕೊಂಡ ದೇಹಗಳನ್ನು ಸೈನಿಕರು ಒಂದೊಂದಾಗಿ ಮೇಲೆತ್ತಿಕೊಂಡು ಹೋಗುತ್ತಿದ್ದ ದೃಶ್ಯಗಳು ದುರಂತದ ತೀವ್ರತೆಗೆ ಸಾಕ್ಷಿಯಾಗಿದ್ದವು.

01

ಈ ಘೋರ ದುರಂತದಲ್ಲಿ ಜೀವ ಕಳೆದುಕೊಂಡವರ ಕುಟುಂಬಸ್ಥರು ಕರುಳು ಹಿಂಡುವಷ್ಟು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಪೈಕಿ ಕನ್ನಡಿಗರನ್ನು ಕಳೆದುಕೊಂಡ ಕುಟುಂಬದವರನ್ನು ʻಪಬ್ಲಿಕ್‌ ಟಿವಿʼ ಸಂಪರ್ಕಿಸಿದಾಗ ಒಡಲಲ್ಲಿದ್ದ ಬೆಂಕಿಯನ್ನೆಲ್ಲಾ ಉಗುಳಿದ್ದಾರೆ. ಈ ಪೈಕಿ ಮಂಡ್ಯ ಜಿಲ್ಲೆ ಕೆ.ಆರ್‌ ಪೇಟೆ ಸಂಬಂಧಿಕರೊಬ್ಬರು ಮಾತನಾಡಿದ್ದಾರೆ. ಅದೇನೆಂಬುದನ್ನು ಅವರ ಮಾತುಗಳಲ್ಲೇ ಕೇಳುವುದಾದರೇ ಮುಂದೆ ಓದಿ….

Wayanad Landslide flood chooralmala mundakkai meppadi news 4

ಆ ದಿನ ರಾತ್ರಿ 8 ಗಂಟೆಗೆ ಅಮ್ಮನಿಗೆ ಫೋನ್‌ ಮಾಡಿ, ಅಲ್ಲೆಲ್ಲ ಮಳೆ ಜಾಸ್ತಿಯಾಗಿದೆ ಅಂತ ಟಿವಿಯಲ್ಲಿ ತೋರಿಸ್ತಿದ್ದಾರೆ ಬಂದುಬಿಡಿ ಅಂದೆ. ಇಲ್ಲಿ ಅಷ್ಟು ಮಳೆ ಇಲ್ಲ. ನಾಳೆ ಬರುತ್ತೇವೆ, ಅದಕ್ಕೋಸ್ಕರ ಬ್ಯಾಗ್‌ಗಳನ್ನೆಲ್ಲ ಪ್ಯಾಕ್‌ ಮಾಡಿದ್ದೇವೆ ನೋಡಿಲ್ಲಿ, ಅಂತ ವೀಡಿಯೋ ಕಾಲ್‌ ಮಾಡಿ ತೋರಿಸಿದ್ರು. ಆದ್ರೆ ಬೆಳಗಾಗುವ ಮುನ್ನವೇ ನೀರಲ್ಲಿ ಕೊಚ್ಚಿ ಹೋಗಿದ್ರು.

ನಾವು ಹೊಸದಾಗಿ ಮನೆ ಕಟ್ಟಿದ್ದೇವೆ. ಮುಂದಿನ ತಿಂಗಳು ಗೃಹಪ್ರವೇಶ ಇತ್ತು. ಅಷ್ಟರಲ್ಲಿ ನನ್ನ ಅಮ್ಮನಿಗೆ (ಲೀಲಾವತಿ) ಬಂಡೆ ಹೊಡೆದು ಕೊಚ್ಚಿ ಹೋಗಿದ್ದಾರೆ. ಪಾಪು ನಿಹಾಲ್‌ನ ಹಿಡಿದುಕೊಳ್ಳೋಣ ಅನ್ನುವಷ್ಟರಲ್ಲಿ ಅವನ ಮೇಲೆಯೇ ಗೋಡೆ ರಪ್ಪನೆ ಬಿದ್ದಿದೆ. ನನ್ನ ತಂದೆ ಪಾಪುಗಾಗಿ ಹುಡುಕಿದ್ದಾರೆ. ಎಲ್ಲೂ ಸಿಕ್ತಿಲ್ಲ. ನನ್ನ ಅನಿಲ್ ಹೇಗೋ ಬಚಾವ್ ಆಗಿದ್ದಾನೆ. ಅವನಿಗೆ ಕಣ್ಣು, ಮೂಗು, ಶ್ವಾಸಕೋಶಕ್ಕೆ ಮಣ್ಣು ತುಂಬಿಕೊಂಡಿದೆ. ಅದೆಷ್ಟೋ ದೂರ ಕೊಚ್ಚಿ ಹೋಗಿ ಮಣ್ಣಲ್ಲಿ ಹೂತುಕೊಂಡಿದ್ದ ತಮ್ಮನಿಗೆ ಬೆನ್ನು ಮೂಳೆ ತುಂಡಾಗಿದೆ.

FotoJet 87

ನೀವು ಬರಲಿಲ್ಲ ಅಂದ್ರೆ ಅಲ್ಲೇ ಸಾಯಿರಿ, ಮಗುನಾದ್ರೂ ಕಳಿಸಿಕೊಡಿ ಅಂದೆ. ಅವರು ಸಾಯುತ್ತಾರೆ ಅಂತ ಗೊತ್ತಿರಲಿಲ್ಲ. ಒಂದೇ ಒಂದು ಸಾರಿ ಅವರನ್ನ ನೋಡಬೇಕು ಅನಿಸ್ತಿದೆ. ಪಾಪುವಿಗಾಗಿ ಸೈಕಲ್, ಬುಕ್ಸ್ ಎಲ್ಲಾ ತೆಗೆದಿಟ್ಟಿದ್ದೆ. ಪ್ರತಿದಿನ ವೀಡಿಯೋ ಕಾಲ್‌ ಮಾಡಿ ಮಾತನಾಡುತ್ತಿದ್ದ ಈಗ ಯಾರೊಟ್ಟಿಗೆ ಮಾತನಾಡಲಿ ಅಯ್ಯೋ ದುರ್ವಿಧಿಯೇ ಆ ದೇವರಿಗೆ ಕರುಣಿಯೇ ಇಲ್ಲ. ಹೇಗಾದ್ರೂ ಮಾಡಿ ಒಮ್ಮೆ ಅವರ ಮೃತದೇಹ ತೋರಿಸಿ, ಕೊನೇ ಸಲ ಮುಖ ನೋಡಿಕೊಳ್ತೀನಿ ಅಂತಾ ಮಂಜುಳಾ ಕಣ್ಣೀರಿಟ್ಟಿದ್ದಾರೆ.

FotoJet 1 62

ಅಂದಹಾಗೆ, ಕತ್ತರಘಟ್ಟ ಗ್ರಾಮದ ದೇವರಾಜು, ಲೀಲಾವತಿ, ಅನೀಲ್, ಝಾನ್ಸಿ ಹಾಗೂ ಎರಡೂವರೆ ವರ್ಷದ ನಿಹಾಲ್ ಅಲ್ಲಿ ನೆಲೆಸಿದ್ದರು. ಗುಡ್ಡ ಕುಸಿತವಾದ ವೇಳೆ, ಇವರು ವಾಸವಿದ್ದ ಮನೆ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ. ಈ ವೇಳೆ 55 ವರ್ಷದ ಲೀಲಾವತಿ ಗುಡ್ಡದ ಮಣ್ಣಿನ ಕೆಳಭಾಗದಲ್ಲಿ ಸೇರಿಕೊಂಡು ಸಾವನ್ನಪ್ಪಿದ್ದಾರೆ. ಇನ್ನೂ ಎರಡುವರೆ ವರ್ಷದ ನಿಹಾಲ್ ಮಣ್ಣು ಹಾಗೂ ನೀರಿನಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದ್ದಾನೆ. ಇದಲ್ಲದೇ ದೇವರಾಜು, ಅನೀಲ್, ಝಾನ್ಸಿ ಗುಡ್ಡ ಕುಸಿತದಲ್ಲಿ ಕಣ್ಮರೆಯಾಗಿದ್ರು. ಬಳಿಕ ಗಾಯಳುಗಳ ಸ್ಥಿತಿಯಲ್ಲಿ ಸಿಕ್ಕಿದ್ದಾರೆ. ಈ ಮೂವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Share This Article