Wayanad Landslide | ದಯವಿಟ್ಟು ಅಳಿಯನ ಮೃತ ದೇಹ ಹುಡುಕಿ, ಕೊನೆ ಬಾರಿ ನೋಡ್ತಿವಿ!

Public TV
2 Min Read
Wayanad Landslide Please find dead bodies Victims Family Members Crying chooralmala mundakkai meppadi news 2

ವಯನಾಡು: ಪ್ರಕೃತಿ ಮಾತೆಯ ಅರ್ಧ ಸೆಕೆಂಡ್ ಮುನಿಸಿಗೆ (Wayanad Landslide) ನೂರು ಜನರ ಬದುಕು ಮುಗಿದಿದೆ. ನೂರಾರು ಮನೆಗಳಲ್ಲಿ ಕಣ್ಣೀರ ಕೋಡಿ ಹರಿದಿದೆ. ಕೊಚ್ಚಿ ಹೋದ ವ್ಯಕ್ತಿ ಸಂಬಂಧಿಕರು ದಯವಿಟ್ಟು ಮೃತದೇಹ ತೋರಿಸಿ ಕೊನೆಯ ಬಾರಿ ನೋಡುತ್ತೇನೆ ಎಂದು ಸಿಕ್ಕ ಸಿಕ್ಕವರಿಗೆ ಕೈ ಮುಗಿದು ಬೇಡಿಕೊಂಡರೆ ಇನ್ನು ಕೆಲವರು ನದಿ ತೀರದಲ್ಲಿರುವ ಕುಟುಂಬ ಸದಸ್ಯರನ್ನು ಹುಡುಕುತ್ತಿದ್ದಾರೆ.

ಮಾವನ ಅರಣ್ಯರೋಧನ
ನನ್ನ ಎರಡು ವರ್ಷದ ಅಳಿಯನ ಮೃತ ದೇಹವನ್ನು ದಯವಿಟ್ಟು ಕೊಡಿಸಿ ಅಂತಾ ಮಾವನ ಕಣ್ಣೀರು ಸುರಿಸುತ್ತಿದ್ದಾರೆ. ಇದು ಮಂಡ್ಯ (Mandya) ಜಿಲ್ಲೆಯ ಕೆ.ಆರ್. ಪೇಟೆಯ ಸಿದ್ದೇಶ್ ಅವರ ಅರಣ್ಯರೋದನ.  ಇದನ್ನೂ ಓದಿ: Wayanad Landslide: 6 ತಿಂಗಳ ಹಿಂದೆ ಗೃಹಪ್ರವೇಶ, ಈಗ ಆ ಮನೆ ಸಮೇತ ಜಲ ಸಮಾಧಿ!

Wayanad Landslide Please find dead bodies Victims Family Members Crying chooralmala mundakkai meppadi news 1

ನನ್ನ ಅಳಿಯನನ್ನು ಹುಡುಕಿಕೊಡಿ. ಕೊನೆ ಪಕ್ಷ ಅವನ ಮೃತ ದೇಹವಾದರೂ ಕೊಡಿ. ಕಣ್ಣು ತುಂಬಿಕೊಂಡು ಮಣ್ಣು ಮಾಡುತ್ತೇವೆ ಎಂದು ಮೆಪ್ಪಾಡಿಯಲ್ಲಿ ಸಿಕ್ಕ ಸಿಕ್ಕವರ ಕೈ ಮುಗಿಯುತ್ತಿದ್ದಾರೆ. ಸಿದ್ದೇಶ್‌ ತಮ್ಮ ತಂಗಿಯನ್ನು ಮಂಡಕೈ ಗ್ರಾಮದ ಅನಿಲ್‌ ಅವರಿಗೆ ಮದುವೆ ಮಾಡಿಕೊಟ್ಟಿದ್ದರು.

ಅನಿಲ್ ಯುರೋಪ್‌ನಲ್ಲಿ ಕೆಲಸ ಮಾಡುತ್ತಿದ್ದು ರಜೆ ಮೇಲೆ ಊರಿಗೆ ಬಂದಿದ್ದರು. ಜಲಪ್ರಳಯದಲ್ಲಿ ಅನಿಲ್ ಅವರಿಗೆ ಗಂಭೀರ ಗಾಯವಾಗಿದ್ದು ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದಾರೆ. ಇವರ ತಾಯಿ ಹಾಗೂ ಎರಡು ವರ್ಷದ ಮಗ ನೀರು ಪಾಲಾಗಿದ್ದಾರೆ. ತನ್ನ ತಾಯಿಯ ಕೈಹಿಡಿದು ಮಲಗಿದ್ದ ಮಗು ಯಾವ ಕ್ಷಣದಲ್ಲಿ ಕೈ ಜಾರಿತೋ ಗೊತ್ತೇ ಆಗಿಲ್ಲ. ಮಗು ಕೆಸರಲ್ಲಿ ಮುಳುಗಿದೆ. ಇದನ್ನೂ ಓದಿ: Wayanad Landslide| ಆರು ಕೈ, ಮೂರು ತಲೆ, ಎಂಟು ಕಾಲು, ಐದು ತಲೆ ಇರದ ದೇಹ!

ತನ್ನವರ ಹುಡುಕುತ್ತಾ ನದಿ ತೀರ ಅಲೆಯುತ್ತಿದ್ದಾನೆ ಮೈಸೂರಿಗ
ಜಲಪ್ರಳಯದಲ್ಲಿ ಅಕ್ಷರಶಃ ಕೊಚ್ಚಿ ಹೋದ ಚೂರಲ್ಮಲದ (Chooralmala)ಮೈಸೂರು ಭಾಗದ ಒಂದು ದೊಡ್ಡ ಕುಟುಂಬ ವಾಸವಿತ್ತು. ಮೈಸೂರಿನ ಹುಣಸೂರು ಮೂಲದ ರವಿ 40 ವರ್ಷದ ಹಿಂದೆ ಈ ಪ್ರದೇಶಕ್ಕೆ ಪ್ರವಾಸ ಬಂದಿದ್ದರು. ಈ ಸ್ಥಳ ಇಷ್ಟವಾಗಿ ಈಗ ಇಲ್ಲೇ ನೆಲೆಸಿದ್ದಾರೆ. ಇವರ ಜೊತೆ ಇವರು ಸಂಬಂಧಿಗಳು ಬಂದು ದೊಡ್ಡ ಕುಟುಂಬವೇ ಆಗಿದೆ‌. ಈಗ ಇವರು ಅಪ್ಪಟ ಕೇರಳಿಗರೇ ಆಗಿದ್ದಾರೆ. ಈಗ ಈ ಕುಟುಂಬದ 11 ಮಂದಿ ನಾಪತ್ತೆಯಾಗಿದ್ದಾರೆ.

 

ರವಿ ಅವರು ಚೂರಲ್ಮಲ ಎತ್ತರದ ಪ್ರದೇಶದಲ್ಲಿ ವಾಸವಾಗಿರುವ ಕಾರಣ ಬಚಾವ್ ಆಗಿದ್ದಾರೆ. ಆದರೆ ಕುಟುಂಬದ 11 ಜನರ ನಾಪತ್ತೆಯಿಂದ ರವಿ ಈಗ ಕಂಗಾಲಾಗಿದ್ದಾರೆ. ಕೋಲು ಹಿಡಿದುಕೊಂಡು ಒಬ್ಬರೇ ನದಿ ತೀರದಲ್ಲಿ ತಮ್ಮವರಿಗೆ ಹುಡುಕಾಟ ಮಾಡುತ್ತಿದ್ದಾರೆ. ನಮ್ಮವರು ಸತ್ತಿದ್ದಾರೆ ಅನ್ನೋದು ನನಗೆ ಗೊತ್ತಿದೆ. ಶವ ಹುಡುಕುತ್ತಿದ್ದೇನೆ. ಶವವಾದರೂ ಸಿಕ್ಕರೇ ಅಂತ್ಯಸಂಸ್ಕಾರವಾದರೂ ಮಾಡುತ್ತೇನೆ ಎಂದು ಮಡುಗಟ್ಟಿದ ದುಃಖವನ್ನು ತಡೆದುಕೊಂಡು ಅಚ್ಚ ಕನ್ನಡದಲ್ಲಿ ನೋವು ಹೇಳುತ್ತಿದ್ದಾರೆ. ಆದರೆ ಈ ನೋವಿಗೆ ಕಿವಿಯಾಗುವವರೇ ಇಲ್ಲ. ಏಕೆಂದರೆ ಮೃತದೇಹ ಸಿಕ್ಕರೇ ಪುಣ್ಯ. ಸಿಗದಿದ್ದರೆ ಭೂಮಿ ತಾಯಿಗೆ ಅರ್ಪಣೆ ಎನ್ನುವ ತೀರ್ಮಾನಕ್ಕೆ ಬಹಳಷ್ಟು ಜನ ಬಂದಿದ್ದಾರೆ. ಇದೇ ವಾಸ್ತವದ ಕಠೋರ ಸತ್ಯ.

Share This Article