ಬಿಹಾರದಲ್ಲಿ ಮೀಸಲಾತಿ ಹೆಚ್ಚಿಸಿದ್ದ ನಿತೀಶ್‌ಗೆ ಹಿನ್ನಡೆ – ಹೈಕೋರ್ಟ್‌ ಆದೇಶಕ್ಕೆ ತಡೆ ನೀಡದ ಸುಪ್ರೀಂ

Public TV
2 Min Read

ನವದೆಹಲಿ: ಬಿಹಾರದಲ್ಲಿ (Bihar) ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು (SC/ST) ,ಹಿಂದುಳಿದ ವರ್ಗಗಳು ಮತ್ತು ಅತ್ಯಂತ ಹಿಂದುಳಿದ ವರ್ಗಗಳ ಮೀಸಲಾತಿಯನ್ನು 50% ನಿಂದ 65% ಕ್ಕೆ ಏರಿಸಿದ್ದನ್ನು ರದ್ದುಗೊಳಿಸಿದ ಪಾಟ್ನಾ ಹೈಕೋರ್ಟ್‌ನ (Patna High Court) ಆದೇಶಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ (Supreme Court) ನಿರಾಕರಿಸಿದೆ.

ತಡೆ ನೀಡದೇ ಇದ್ದರೂ ಪಾಟ್ನಾ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿರುವ 10 ಅರ್ಜಿಗಳ ವಿಚಾರಣೆಯನ್ನು ಸೆಪ್ಟೆಂಬರ್‌ನಲ್ಲಿ ನಡೆಸಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾ. ಜೆ ಬಿ ಪರ್ದಿವಾಲಾ ಮತ್ತು ನ್ಯಾ. ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಹೇಳಿದೆ.

ಬಿಹಾರ ರಾಜ್ಯದ ಪರ ವಾದ ಮಂಡಿಸಿದ ಹಿರಿಯ ವಕೀಲ ಶ್ಯಾಮ್ ದಿವಾನ್, ಛತ್ತೀಸ್‌ಗಢದ ಪ್ರಕರಣವನ್ನು ಉಲ್ಲೇಖಿಸಿ ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆ ನೀಡಿದೆ. ನಮಗೂ ಅದೇ ರೀತಿಯ ಆದೇಶ ನೀಡಬೇಕೆಂದು ಮನವಿ ಮಾಡಿದರು. ಇದಕ್ಕೆ ಕೋರ್ಟ್‌ ತಡೆ ನೀಡಲು ಸಾಧ್ಯವಿಲ್ಲ. ಸೆಪ್ಟೆಂಬರ್‌ನಲ್ಲಿ ವಿಚಾರಣೆಗೆ ಪಟ್ಟಿ ಮಾಡಲಾಗುವುದು ಎಂದು ಸಿಜೆಐ ಹೇಳಿದರು. ಇದನ್ನೂ ಓದಿ: Valmiki Corporation Scam | ಹೈದರಾಬಾದ್‌ನಲ್ಲೇ ಬೀಡುಬಿಟ್ಟ ಎಸ್‌ಐಟಿ – ಒಟ್ಟು 16 ಕೆಜಿ ಚಿನ್ನ ಜಪ್ತಿ

court order law

ಹಿಂದುಳಿದ ವರ್ಗಗಳು, ಅತೀ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಮೀಸಲಾತಿಯನ್ನು 50% ರಿಂದ 65%ಗೆ ಸರ್ಕಾರ ಹೆಚ್ಚಿಸಿತ್ತು. ಖಾಲಿ ಹುದ್ದೆಗಳ ಬಿಹಾರ ಮೀಸಲಾತಿ (Amendment) ಕಾಯ್ದೆ 2023 ಮತ್ತು ಬಿಹಾರ (ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ) ಮೀಸಲಾತಿ (ತಿದ್ದುಪಡಿ) ಕಾಯ್ದೆ 2023 ಸಂವಿಧಾನ 14ನೇ ವಿಧಿಯ ಅಡಿಯಲ್ಲಿ ನೀಡಲಾದ ಸಮಾನತೆಯ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಪಾಟ್ನಾ ಹೈಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಕೆ. ವಿನೋದ್‌ ಚಂದ್ರನ್‌ ಹಾಗೂ ಹರೀಶ್‌ ಕುಮಾರ್‌ ಅವರಿದ್ದ ವಿಭಾಗೀಯ ಪೀಠ ಅಭಿಪ್ರಾಯಪಟ್ಟು ರದ್ದುಗೊಳಿಸಿತ್ತು.

ಬಿಹಾರ ಸರ್ಕಾರದ ನಿರ್ಧಾರವು ಸಂವಿಧಾನದ ವ್ಯಾಪ್ತಿಯನ್ನು ಮೀರಿದೆ. ಅಲ್ಲದೇ ಸಂವಿಧಾನ (Constitution) ವಿಧಿ 14, 15 ಮತ್ತು 16ನೇ ವಿಧಿಗಳ ಅಡಿಯಲ್ಲಿ ಇದು ಸಮಾನತೆಯ ಷರತ್ತನ್ನು ಉಲ್ಲಂಘಿಸುತ್ತವೆ ಎಂದು ಕೋರ್ಟ್‌ ಹೇಳಿತ್ತು. ಇದನ್ನೂ ಓದಿ: ಕೆಆರ್‌ಎಸ್‌ ಭರ್ತಿ: ಮೂರನೇ ಬಾರಿ ಬಾಗಿನ ಅರ್ಪಿಸಿದ ಸಿಎಂ

2023ರ ನವೆಂಬರ್‌ ತಿಂಗಳಲ್ಲಿ ಬಿಹಾರ ವಿಧಾನಸಭೆಯು ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿತ್ತು. ತಿದ್ದುಪಡಿ ಮಾಡಲಾದ ಮೀಸಲಾತಿ ಕೋಟಾವು ಪರಿಶಿಷ್ಟ ಜಾತಿಗಳಿಗೆ 20%, ಪರಿಶಿಷ್ಟ ಪಂಗಡಗಳಿಗೆ 2% , ಇತರೇ ಹಿಂದುಳಿದ ವರ್ಗಗಳಿಗೆ ಮತ್ತು ಅತ್ಯಂತ ಹಿಂದುಳಿದ ವರ್ಗಗಳಿಗೆ 43% ಮೀಸಲಾತಿ ಒಳಗೊಂಡಿತ್ತು.

 

Share This Article