– ಆತಂಕ ಬೇಡ, ಆರೋಗ್ಯ ಸಂಪೂರ್ಣ ಕೆಟ್ಟಿಲ್ಲ: ಹೆಚ್‌ಡಿಕೆ
ಬೆಂಗಳೂರು: ಇದ್ದಕ್ಕಿದ್ದಂತೆ ಮೂಗಿನಿಂದ ರಕ್ತಸ್ರಾವ ಉಂಟಾಗಿ ಆಸ್ಪತ್ರೆಗೆ ದಾಖಲಾಗಿದ್ದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಇದೀಗ ಚಿಕಿತ್ಸೆ ಪಡೆದು ಜಯನಗರದ ಅಪೋಲೋ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಜೆಪಿ ನಗರದ ತಮ್ಮ ನಿವಾಸಕ್ಕೆ ವಾಪಸ್ಸಾದರು.
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾರೂ ಆತಂಕಕ್ಕೆ ಒಳಗಾಗೋದು ಬೇಡ. ಭಗವಂತ, ನಿಮ್ಮ ಆಶೀರ್ವಾದ ಇರುವವರೆಗೆ ಯಾವುದೇ ಅಪಾಯವಿಲ್ಲ. ಮೂರು ಬಾರಿ ವಾಲ್ ರಿಪ್ಲೇಸ್‌ಮೆಂಟ್ ಆಗಿದೆ. ಬ್ಲಡ್ ಥಿನ್ನರ್ ತೆಗೆದುಕೊಳ್ಳುತ್ತೇನೆ. ಒತ್ತಡಗಳು ಜಾಸ್ತಿಯಾದಾಗ ಮೂಗಿನಿಂದ ರಕ್ತಸ್ರಾವ ಆಗೋದು ಸಹಜ. ಕೆಲಸದ ಒತ್ತಡ ಕಡಿಮೆ ಮಾಡಿಕೊಳ್ಳಿ ಎಂದು ವೈದ್ಯರು ಸಲಹೆ ನೀಡಿದ್ದಾರೆ. ವಿಶ್ರಾಂತಿ ತೆಗೆದುಕೊಳ್ಳುವುದು ಸೂಕ್ತ ಎಂದು ಡಾಕ್ಟರ್ ಹೇಳಿದ್ದಾರೆಂದು ತಿಳಿಸಿದ್ದಾರೆ. ಇದನ್ನೂ ಓದಿ: ಮುಡಾ ಹಗರಣ | ಸಿಎಂ ರಾಜೀನಾಮೆಗೆ ಆಗ್ರಹಿಸಿ ಆ.3ರಿಂದ ಬಿಜೆಪಿ-ಜೆಡಿಎಸ್ ಪಾದಯಾತ್ರೆ
ಕೇಂದ್ರದಿಂದ ರಾಜ್ಯಕ್ಕೆ, ಜನರಿಗೆ ಕೊಡುಗೆ ಕೊಡಬೇಕು. ನನ್ನ ಆರೋಗ್ಯ ಸಂಪೂರ್ಣ ಕೆಟ್ಟಿಲ್ಲ. ಪಾದಯಾತ್ರೆಗೆ ಇನ್ನೂ ಒಂದು ವಾರ ಇದೆ. ಆಮೇಲೆ ನೋಡೋಣ. ಅಂತಹ ಸಂದರ್ಭ ಬಂದರೆ ನಿಖಿಲ್ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಸೋಮವಾರ ರಾಜ್ಯಸಭೆಯಲ್ಲಿ ಕಾವೇರಿ ನೀರಿನ ಪ್ರಸ್ತಾಪ ಬಂದೇ ಬರುತ್ತದೆ. ತಮಿಳುನಾಡಿನ ಬೇರೆ ಬೇರೆ ಪಕ್ಷದ ನಾಯಕರು ದೇವೇಗೌಡರ ಭಾಷಣಕ್ಕೆ ಹಲವು ವರ್ಷಗಳಿಂದ ಅಡ್ಡಿಪಡಿಸುತ್ತಾ ಬರುತ್ತಿದ್ದಾರೆ. ನಾನು ಈ ಸಂದರ್ಭ ಅವರ ಜೊತೆ ಇರಬೇಕು ಅನ್ನೋದು ನನ್ನ ಆಸೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹೆಚ್‌ಡಿಕೆಗೆ ದಿಢೀರ್ ರಕ್ತಸ್ರಾವವಾಗಲು ಕಾರಣವೇನು? – ಬ್ಲಡ್ ಥಿನ್ನರ್ ಔಷಧಿ ತೆಗೆದುಕೊಳ್ಳುತ್ತಿದ್ದದ್ದು ಏಕೆ?
ಹೆಚ್‌ಡಿಕೆಗೆ ಏನಾಗಿತ್ತು?
ಮುಡಾ ಅಕ್ರಮವನ್ನು ಖಂಡಿಸಿ ರಾಜ್ಯ ಸರ್ಕಾರದ (Karnataka Govt) ವಿರುದ್ಧ ಮೈಸೂರಿನಿಂದ ಪಾದಯಾತ್ರೆ ಹಮ್ಮಿಕೊಳ್ಳಲು ಬೆಂಗಳೂರಿನ ಖಾಸಗಿ ಹೋಟೆಲ್ (Private Hotel) ಒಂದರಲ್ಲಿ ಬಿಜೆಪಿ-ಜೆಡಿಎಸ್ ನಾಯಕರು (BJP JDS Leader) ಜಂಟಿಯಾಗಿ ಸಭೆ ನಡೆಸಿದ್ದರು. ಸಭೆಯಲ್ಲಿ ಹೆಚ್.ಡಿ ಕುಮಾರಸ್ವಾಮಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ್ ಸೇರಿದಂತೆ ಅನೇಕ ನಾಯಕರು ಪಾಲ್ಗೊಂಡಿದ್ದರು. ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಮೂಗಿನಿಂದ ರಕ್ತಸ್ರಾವ ಉಂಟಾಯಿತು. ಕೂಡಲೇ ಅವರನ್ನು ನಗರದ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದನ್ನೂ ಓದಿ: ಕೇಂದ್ರ ಸಚಿವ ಹೆಚ್‌ಡಿಕೆಗೆ ಮೂಗಿನಿಂದ ದಿಢೀರ್ ರಕ್ತಸ್ರಾವ – ಆಸ್ಪತ್ರೆಗೆ ಕರೆದೊಯ್ದ ಸಿಬ್ಬಂದಿ