ನೀಟ್ ರದ್ದತಿ, ಒಂದು ರಾಷ್ಟ್ರ ಒಂದು ಚುನಾವಣೆ ವಿರೋಧಿಸಿ ವಿಧಾನಸಭೆಯಲ್ಲಿ ನಿರ್ಣಯ

Public TV
3 Min Read
karnataka cabinet gives nod for resolutions against neet one nation one election delimitation

-ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ಒಟ್ಟು 4 ನಿರ್ಣಯ

ಬೆಂಗಳೂರು: ವಿಧಾನಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ನಾಲ್ಕು ಮಹತ್ವದ ನಿರ್ಣಯಗಳು ಮಂಡನೆ ಆಗಿದ್ದು, ಎಲ್ಲವೂ ಅಂಗೀಕಾರ ಆಗಿವೆ. ಬಿಜೆಪಿ-ಜೆಡಿಎಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿರುವಾಗಲೇ ನಾಲ್ಕು ನಿರ್ಣಯಗಳನ್ನ ಮಂಡಿಸಿ, ಸದನದ ಅಂಗೀಕಾರ ಪಡೆಯಲಾಯ್ತು. ಸಿಎಂ ಸಿದ್ದರಾಮಯ್ಯ (CM Siddaramaiah) ಅನುಪಸ್ಥಿತಿಯಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಎರಡು ನಿರ್ಣಯ ಮಂಡಿಸಿ ಅಂಗೀಕಾರ ಪಡೆಯಲಾಯ್ತು.

1971ರ ಜನಗಣತಿ ಆಧರಿಸಿಯೇ ಲೋಕಸಭಾ, ವಿಧಾನಸಭೆ ಕ್ಷೇತ್ರಗಳ ಪುನರ್ ವಿಂಗಡಣೆ ಮಾಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ ನಿರ್ಣಯ, ಒಂದು ರಾಷ್ಟ್ರ ಒಂದು ಚುನಾವಣೆ (One Nation Onee Election) ವಿರೋಧಿಸಿ, ಆ ವ್ಯವಸ್ಥೆ ಬೇಡ ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ನಿರ್ಣಯ ಕೈಗೊಳ್ಳಲಾಯ್ತು. ಇನ್ನೂ ನೀಟ್ ವಿರೋಧಿಸಿ, ನೀಟ್ (NEET) ರದ್ದುಪಡಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ನಿರ್ಣಯ ಮಂಡಿಸಿ ಸದನದ ಅಂಗೀಕಾರ ಪಡೆಯಲಾಯ್ತು. ಅಲ್ಲದೇ ಪಾರಂಪರಿಕ ಅರಣ್ಯ ವಾಸಿಗಳ ನಿಯಮಗಳನ್ನ ಮಾರ್ಪಾಡು ಮಾಡುವಂತೆ ಕೇಂದ್ರ ಸರ್ಕಾರವನ್ನ ಒತ್ತಾಯಿಸಿ ಅರಣ್ಯ ಸಚಿವ ಈಶ್ವರ ಖಂಡ್ರೆ ನಿರ್ಣಯ ಮಂಡಿಸಿ, ಸದನದ ಅಂಗೀಕಾರ ಪಡೆಯಲಾಯ್ತು. ಈ ವೇಳೆ ಒಂದು ರಾಷ್ಟ್ರ ಒಂದು ಚುನಾವಣೆ, ನೀಟ್ ರದ್ದತಿ ನಿರ್ಣಯಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿತು. ಕ್ಷೇತ್ರ ಪುನರ್ ವಿಂಗಡಣೆ ವಿರೋಧಿಸಿದ ನಿರ್ಣಯದ ಪರ ನಾವು ಇದ್ದೇವೆ. ಚರ್ಚೆ ನಡೆಸಬೇಕು ಮುಂದಕ್ಕೆ ಹಾಕಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಒತ್ತಾಯಿಸಿದರು.

karnataka cabinet gives nod for resolutions against neet one nation one election delimitation 1

ಕ್ಷೇತ್ರ ಪುನರ್ ವಿಂಗಡಣೆ ವಿರೋಧಿಸಿದ ನಿರ್ಣಯದ ಅಂಶಗಳು:
“ಕರ್ನಾಟಕ ವಿಧಾನಸಭೆಯು, 2026ರಲ್ಲಿನ ಅಥವಾ ಅದರ ನಂತರ ನಡೆಸುವ ಹೊಸ ಜನಗಣತಿಯ ಆಧಾರದ ಮೇಲೆ ಕ್ಷೇತ್ರ ಪುನರ್ ವಿಂಗಡಣಾ ಪ್ರಕ್ರಿಯೆಯನ್ನು ನಡೆಸಬಾರದೆಂದು ಜನಸಂಖ್ಯೆಯನ್ನು ಆಧರಿಸಿ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸುವ ಸಂದರ್ಭದಲ್ಲಿ, ಪ್ರತೀ ರಾಜ್ಯಕ್ಕೆ ಹಂಚಿಕೆ ಮಾಡಬೇಕಾದ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಮತ್ತು ಪ್ರತಿ ರಾಜ್ಯದ ವಿಧಾನಸಭೆಗೆ ನಿಗದಿಪಡಿಸಬೇಕಾದ ಸ್ಥಾನಗಳ ಒಟ್ಟು ಸಂಖ್ಯೆಯನ್ನು 1971ರ ಜನಗಣತಿಯನ್ನಾಧರಿಸಿ ನಿರ್ಧರಿಸಬೇಕೆಂದು ಕೇಂದ್ರ ಸರ್ಕಾರವನ್ನು ಈ ಸದನವು ಒತ್ತಾಯಿಸುತ್ತದೆ”.

ಒಂದು ರಾಷ್ಟ ಒಂದು ಚುನಾವಣೆ ವಿರೋಧಿಸಿದ ನಿರ್ಣಯದ ಅಂಶಗಳು:
ಭಾರತವು ವಿಶ್ವದ ಅತಿದೊಡ್ಡ ಒಕ್ಕೂಟ ಪ್ರಜಾಪುಭುತ್ವವಾಗಿದೆ. ಭಾರತ ಸಂವಿಧಾನದ ಭಾಗ ಆಗಿರಲಿ ಎಂದು ಪ್ರತಿಪಾದಿಸಿರುವ ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆಯ ತತ್ವವು ಈ ಪ್ರಜಾಪ್ರಭುತ್ವದ ಆತ್ಮವಾಗಿದೆ. `ಒಂದು ರಾಷ್ಟ್ರ, ಒಂದು ಚುನಾವಣೆ’ ಪ್ರಸ್ತಾವವು ಭಾರತದ ಪ್ರಜಾಸತ್ತಾತ್ಮಕ ಮತ್ತು ಒಕ್ಕೂಟ ವ್ಯವಸ್ಥೆಗೆ ಅಪಾಯವನ್ನುಂಟು ಮಾಡುತ್ತದೆ. ಬೇರೆ ಬೇರೆ ರಾಜ್ಯಗಳ ವಿಧಾನಸಭೆಗಳು ಅವುಗಳದ್ದೇ ಆದ ಅಧಿಕಾರ ಅವಧಿಗಳನ್ನು ಹೊಂದಿರುತ್ತವೆ. ಮತ್ತು ಏಕರೂಪ ಚುನಾವಣಾ ವೇಳಾಪಟ್ಟಿಯು ರಾಷ್ಟ್ರೀಯ ವಿಷಯಗಳ ಮೇಲೆ ಹೆಚ್ಚಾಗಿ ಗಮನಹರಿಸುವ ಮತ್ತು ಸ್ಥಳೀಯ ಕಾಳಜಿಗಳನ್ನು ನಿರ್ಲಕ್ಷಿಸುವ ಮೂಲಕ ರಾಜ್ಯಗಳ ಸ್ವಾಯತ್ತತೆಯನ್ನು ದುರ್ಬಲಗೊಳಿಸಬಹುದು. ಸಾಕಷ್ಟು ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದು, ಚುನಾವಣಾ ಸಿಬ್ಬಂದಿಯನ್ನು ನಿರ್ವಹಿಸುವುದು, ಮತದಾರರ ಬೇಸರ, ಕಡಿಮೆಗೊಂಡ ಸರ್ಕಾರದ ಉತ್ತರದಾಯಿತ್ವ ಹಾಗೂ ಆರ್ಥಿಕ ಮತ್ತು ಸಾಮಾಜಿಕ ಅಡತಡೆಗಳು ಏಕಕಾಲಿಕ ಚುನಾವಣೆಗಳಿಗೆ ಸಂಬAಧಿಸಿದ ಗುರುತರ ಗಂಡಾAತರಗಳಾಗಿವೆ. ಹಾಗಾಗಿ ಭಾರತದ ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳು ಮತ್ತು ಒಕ್ಕೂಟ ಸಮಗ್ರತೆಯನ್ನು ರಕ್ಷಿಸಲು ಕಠೋರ ನೀತಿಯನ್ನು ಅನುಷ್ಠಾನಗೊಳಿಸಬಾರದೆಂದು ಕೇಂದ್ರ ಸರ್ಕಾರವನ್ನು ಈ ಸದನವು ಒತ್ತಾಯಿಸುತ್ತದೆ.

ನೀಟ್ ರದ್ದತಿ ಬಗ್ಗೆ ನಿರ್ಣಯದ ಅಂಶಗಳು:
“ನೀಟ್ ಪರೀಕ್ಷಾ ವ್ಯವಸ್ಥೆಯು, ಗ್ರಾಮೀಣ ಬಡ ಮಕ್ಕಳ ವೈದ್ಯಕೀಯ ಶಿಕ್ಷಣಾವಕಾಶಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿದ್ದು ಹಾಗೂ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ನಿರರ್ಥಕಗೊಳಿಸುವುದು ಮಾತ್ರವಲ್ಲದೆ, ರಾಜ್ಯ ಸರ್ಕಾರದ ವೈದ್ಯಕೀಯ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ರಾಜ್ಯ ಸರ್ಕಾರದ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದು, ಅದನ್ನು ರದ್ದುಪಡಿಸಬೇಕೆಂದು ಕೋರಲಾಗಿದೆ.

ಈ ಪರೀಕ್ಷೆಯಿಂದ ಕರ್ನಾಟಕಕ್ಕೆ ವಿನಾಯಿತಿ ನೀಡಬೇಕೆಂದು ಹಾಗೂ ಶಾಲಾ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವು ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಅಂಕಗಳನ್ನಾಧರಿಸಿ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶಾತಿ ನೀಡಬೇಕೆಂದು ಮತ್ತು ನೀಟ್ ಪರೀಕ್ಷೆಗಳಲ್ಲಿ ಆಗುತ್ತಿರುವ ಪುನರಾವರ್ತಿತ ಅಕ್ರಮಗಳನ್ನು ಪರಿಗಣಿಸಿ ರಾಷ್ಟ್ರೀಯ ಮಟ್ಟದಲ್ಲಿ ನೀಟ್ ವ್ಯವಸ್ಥೆಯನ್ನು ರದ್ದುಪಡಿಸುವ, ಹಾಗೆ ಕೇಂದ್ರ ಸರ್ಕಾರವು ರಾಷ್ಟ್ರೀಯ ವೈದ್ಯಕೀಯ ಆಯೋಗ ಅಧಿನಿಯಮ, 2019 (2019ರ ಕೇಂದ್ರ ಅಧಿನಿಯಮ 30)ರಲ್ಲಿ ಅಗತ್ಯ ತಿದ್ದುಪಡಿಗಳನ್ನೂ ಸಹ ಮಾಡುವಂತೆ ಕೇಂದ್ರ ಸರ್ಕಾರವನ್ನು ಈ ಸದನವು ಒತ್ತಾಯಿಸುತ್ತದೆ.”

ಪಾರಂಪರಿಕ ಅರಣ್ಯವಾಸಿಗಳ ನಿಯಮ ಮಾರ್ಪಾಡಿಗೆ ಆಗ್ರಹಿಸಿದ ನಿರ್ಣಯದ ಅಂಶಗಳು:
ಅರಣ್ಯವಾಸಿ ಅನುಸೂಚಿತ ಬುಡಕಟ್ಟುಗಳಿಗೆ ಸಮಾನವಾಗಿ ಇತರ ಪಾರಂಪರಿಕ ಅರಣ್ಯ ವಾಸಿಗಳನ್ನು ಪರಿಗಣಿಸುವ ಹಾಗೆ, ಅನುಸೂಚಿತ ಬುಡಕಟ್ಟುಗಳ ಮತ್ತು ಇತರೆ ಪಾರಂಪರಿಕ ಅರಣ್ಯ ವಾಸಿಗಳ (ಅರಣ್ಯ ಹಕ್ಕುಗಳ ಮಾನ್ಯತೆ) ಅಧಿನಿಯಮ, 2006 (2007 ರ ಕೇಂದ್ರ ಅಧಿನಿಯಮ 02) ಮತ್ತು ಅದರಡಿಯಲ್ಲಿ ಮಾಡಲಾದ ನಿಯಮಗಳನ್ನು ಸೂಕ್ತವಾಗಿ ಮತ್ತು ಸಮರ್ಪಕವಾಗಿ ಮಾರ್ಪಡಿಸುವಂತೆ ಕೇಂದ್ರ ಸರ್ಕಾರವನ್ನು ಈ ಸದನವು ಒತ್ತಾಯಿಸುತ್ತದೆ.”

Share This Article