ರಾಯಚೂರು: ಜಿಲ್ಲೆಯ ಸರ್ಕಾರಿ ಶಾಲೆಗಳ ಸುವ್ಯವಸ್ಥೆ ಕಾಪಾಡಿ ಅಗತ್ಯ ಸೌಲಭ್ಯ ಒದಗಿಸಬೇಕಾದ ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿಯಲ್ಲೇ (BEO Office) ಅವ್ಯವಸ್ಥೆ ಹಾಗೂ ಭಯದಲ್ಲಿ ಕೆಲಸ ಮಾಡಬೇಕಾದ ಪರಸ್ಥಿತಿ ಎದುರಿಸುತ್ತಿದ್ದಾರೆ. ಈಗಲೋ ಆಗಲೋ ಬಿದ್ದು ಹೋಗಬಹುದಾದ ಕಟ್ಟಡದಲ್ಲಿ ಬಿಇಒ ಕಚೇರಿ (BEO Office) ಸಿಬ್ಬಂದಿ ಕೆಲಸಮಾಡುತ್ತಿದ್ದಾರೆ.
ರಾಯಚೂರು (Raichur) ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದು, ಎಷ್ಟು ಬಾರಿ ರಿಪೇರಿ ಮಾಡಿದರೂ ಆಗಾಗ ಮೇಲ್ಚಾವಣಿ ಕುಸಿದು ಬೀಳುತ್ತಲೇ ಇದೆ. ಮಳೆ ಬಂದಾಗಲೆಲ್ಲಾ ಬಿಇಒ ಕಚೇರಿ ಸೋರುತ್ತಲೇ ಇದೆ. ಹೀಗಾಗಿ ಇಲ್ಲಿನ ಸಿಬ್ಬಂದಿ ಜೀವಭಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಗಳೇ ಶಿಥಿಲಾವಸ್ಥೆಯ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದರೆ, ನಗರ ಹಾಗೂ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಸುಧಾರಣೆ, ಗುಣಮಟ್ಟದ ಶಿಕ್ಷಣ ಹೇಗೆ ಅನ್ನೋದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಎಷ್ಟೋ ಶಾಲೆಗಳಲ್ಲಿ ಅಗತ್ಯಕ್ಕನುಗುಣವಾಗಿ ಕೊಠಡಿಗಳಿಲ್ಲ, ಶೌಚಾಲಯಗಳಿಲ್ಲ. ಆದ್ರೆ ಸ್ವತಃ ಬಿಇಒ ಕಚೇರಿಯೇ ಮಳೆಗೆ ಸೋರುತ್ತಿದ್ದರೆ ಶಾಲಾ ಮುಖ್ಯಶಿಕ್ಷಕರು, ವಿದ್ಯಾರ್ಥಿಗಳು ಯಾರ ಬಳಿ ಕಷ್ಟ ಹೇಳೋದು ಅನ್ನೋ ಪರಸ್ಥಿತಿ ಬಂದೊದಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಒಂಟಿ, ದ್ವೇಷದಿಂದ ಬಿಜೆಪಿ ವಿರುದ್ಧ ಹಗರಣ ಆರೋಪ: ಕಾರಜೋಳ ಕಿಡಿ
1995 ರಲ್ಲಿ ನಿರ್ಮಾಣವಾದ ಸುಮಾರು 30 ವರ್ಷಗಳ ಹಳೆಯ ಕಟ್ಟಡ ಈಗ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ. ಸಾಮರ್ಥ್ಯ ಸೌಧ ನಿರ್ಮಾಣಕ್ಕಾಗಿ 5 ಕೋಟಿ 50 ಲಕ್ಷ ರೂ. ಅಂದಾಜು ಪಟ್ಟಿಯನ್ನ ತಯಾರಿಸಿ ಕೆಕೆಆರ್‌ಡಿಬಿಗೆ ಶಿಕ್ಷಣ ಇಲಾಖೆ ಈಗಾಗಲೇ ಕಳುಹಿಸಿದೆ. ಆದಾಗ್ಯೂ ಯಾವುದೇ ಪ್ರಯೋಜವಾಗಿಲ್ಲ. ಇದರಿಂದ ಪಕ್ಕದ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿಗೆ ಸ್ಥಳಾಂತರಗೊಳ್ಳಲು ಅನುಮತಿ ಪಡೆದಿದ್ದಾರೆ. ದುರಂತ ಅಂದ್ರೆ ಆ ಕಾಲೇಜು ಸಹ ಮಳೆ ಬಂದಾಗ ಸೋರುತ್ತಿದೆ. ಹೀಗಾಗಿ ಯಾವುದಾದರೂ ಶಾಲೆಗೆ ಕಚೇರಿ ಸ್ಥಳಾಂತರ ಮಾಡಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಕಚೇರಿಯ 13 ಸಿಬ್ಬಂದಿ ಈಗ ಹೊಸ ಕಟ್ಟಡ ಕಟ್ಟಿಕೊಡಿ ಅಂತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಹೆಚ್ಚಿದ ತುಂಗಭದ್ರಾ ನೀರಿನ ಮಟ್ಟ – ಜಾನುವಾರು ಮೈತೊಳೆಯಲು ತೆರಳಿದ್ದ ಯುವಕ ನೀರುಪಾಲು
ಒಟ್ಟಿನಲ್ಲಿ, ರಾಯಚೂರು ತಾಲೂಕಿನ ಸರ್ಕಾರಿ ಶಾಲೆಗಳ ಸುರಕ್ಷತೆ ಕಾಪಾಡಬೇಕಾದ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸುರಕ್ಷತೆಯಿಲ್ಲದಂತಾಗಿದೆ. ಯಾವಾಗ ಎಲ್ಲಿ ಚಾವಣಿ ಕುಸಿದು ಬೀಳುತ್ತೋ ಏನ್ ಅಪಾಯ ಕಾದಿದೆಯೋ ಅನ್ನೋ ಭಯ ಸಿಬ್ಬಂದಿಯಲ್ಲಿ ಮನೆ ಮಾಡಿದೆ. ಕನಿಷ್ಠ ಈಗಲಾದ್ರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಬಾಂಗ್ಲಾದಲ್ಲಿ ನಿಯಂತ್ರಣಕ್ಕೆ ಬಾರದ ಹಿಂಸಾಚಾರ – ಕಂಡಲ್ಲಿ ಗುಂಡು ಹಾರಿಸಲು ಸೂಚನೆ