ಹಾಸನದ ಮಲೆನಾಡು ಭಾಗದಲ್ಲೂ ಮಳೆಯಬ್ಬರ; ಶಿರಾಡಿಘಾಟ್‌ನಲ್ಲಿ ಸರಣಿ ಭೂಕುಸಿತ – ಬೆಂಗಳೂರು, ಮಂಗಳೂರು ಸಂಚಾರ ಬಂದ್

Public TV
2 Min Read
hassan rain

ಹಾಸನ: ಕಳೆದ ಐದು ದಿನಗಳಿಂದ ಹಾಸನ ಜಿಲ್ಲೆಯಲ್ಲಿ ಮಳೆ ಅಬ್ಬರ ಜೋರಾಗಿದೆ. ಮಳೆಯ ಹೊಡೆತಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಅದರಲ್ಲೂ ಮಲೆನಾಡು ಭಾಗವಾದ ಸಕಲೇಶಪುರ, ಆಲೂರು, ಬೇಲೂರು ಭಾಗಗಳಲ್ಲಿ ವರುಣನ ಆರ್ಭಟಕ್ಕೆ ಅಲ್ಲಿನ ಜನರು ತತ್ತರಿಸಿದ್ದಾರೆ. ಮಂಗಳೂರು-ಬೆಂಗಳೂರು ಸಂಪರ್ಕ ಕಲ್ಪಿಸುವ ಶಿರಾಡಿ ಘಾಟ್‌ನಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿದೆ.

ಪುನರ್ವಸು ಮಳೆಯ ಆರ್ಭಟಕ್ಕೆ ಹಾಸನ ಜಿಲ್ಲೆಯ ಜನತೆ ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ಕಿರು ಸೇತುವೆಗಳು ತುಂಬಿ ಹರಿದು ಹಲವು ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಗ್ರಾಮಗಳಿಗೆ ತೆರಳಲು ಪರದಾಡುವಂತಾಗಿದೆ.

ಗಾಳಿ ಸಹಿತ ಸುರಿಯುತ್ತಿರುವ ಮಳೆಗೆ ಬೃಹತ್ ಗಾತ್ರದ ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಸಕಲೇಶಪುರ ತಾಲ್ಲೂಕಿನ, ಬಿಸಿಲೆ, ಕಟ್ಟೆಪುರ, ಮಾಗೇರಿ, ಮಾರನಹಳ್ಳಿ, ಹಾನಬಾಳು, ಬೇಲೂರು ತಾಲ್ಲೂಕಿನ, ಬಿಕ್ಕೋಡು, ಮಾಳೆಗೆರೆ, ಕುಶಾವರ ಸೇರಿದಂತೆ ಇನ್ನೂ ಹಲವು ಗ್ರಾಮಗಳಲ್ಲಿ ಮೂರ್ನಾಲ್ಕು ದಿನಗಳಿಂದ ವಿದ್ಯುತ್ ಇಲ್ಲದೆ ತೀವ್ರ ತೊಂದರೆ ಅನುಭವಿಸುವಂತಾಗಿದೆ. ಸುರಿಯುತ್ತಿರುವ ಮಳೆಯ ನಡುವೆಯೂ ವಿದ್ಯುತ್ ಇಲಾಖೆ ಸಿಬ್ಬಂದಿ ಬಿಡುವಿಲ್ಲದೆ ಶ್ರಮಿಸುತ್ತಿದ್ದಾರೆ.

ನಿರಂತರ ಮಳೆಗೆ ರಾಷ್ಟ್ರೀಯ ಹೆದ್ದಾರಿ-75 ಶಿರಾಡಿಘಾಟ್ ರಸ್ತೆಯಲ್ಲಿ ಭೂಕುಸಿತ ಸಂಭವಿಸುತ್ತಲೇ ಇದೆ. ದೊಡ್ಡತಪ್ಲು, ಎತ್ತಿನಹಳ್ಳ ಬಳಿ ಗುಡ್ಡ ಕುಸಿಯುತ್ತಲೇ ಇದೆ. ಭೂಕುಸಿಯುತ್ತಿರುವ ಸ್ಥಳಗಳಲ್ಲಿ ಕಂದಾಯ, ಪೊಲೀಸ್ ಇಲಾಖೆ ಹಾಗೂ ರಸ್ತೆ ನಿರ್ಮಾಣ ಮಾಡುತ್ತಿರುವ ಕಂಪನಿಯ ಸಿಬ್ಬಂದಿ ಮೊಕ್ಕಾಂ ಹೂಡಿ ಗುಡ್ಡ ಕುಸಿಯುತ್ತಿದ್ದಂತೆ ಮಣ್ಣು ತೆರವುಗೊಳಿಸುತ್ತಿದ್ದಾರೆ. ಶಿರಾಡಿಘಾಟ್‌ನಲ್ಲಿ ಸರಣಿ ಭೂ ಕುಸಿತದಿಂದ ಅವಘಡ ಆಗದಂತೆ ವಾಹನ ಸಂಚಾರ ಬಂದ್ ಮಾಡಲಾಗಿದೆ. ಶಿರಾಡಿಘಾಟ್‌ನ ದೊಡ್ಡತಪ್ಲು ಪ್ರದೇಶದಲ್ಲಿ ಭೂಕುಸಿತವಾಗ್ತಿರೋ ಕಾರಣ ರಸ್ತೆ ದುರಸ್ತಿ ಆಗುವವರೆಗೆ ಎಲ್ಲಾ ರೀತಿಯ ವಾಹನ ಸಂಚಾರ ನಿಷೇಧಿಸಿ ಡಿಸಿ ಆದೇಶ ಹೊರಡಿಸಿದ್ದಾರೆ. ಮಳೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮತ್ತಷ್ಟು ಭೂಕುಸಿತದ ಆತಂಕ ಇದ್ದು, ಬೆಂಗಳೂರಿನಿಂದ ಮಂಗಳೂರಿಗೆ ತೆರಳುವ ವಾಹನಗಳು ಚಾರ್ಮಾಡಿ ಘಾಟ್ ಮೂಲಕ ಸಂಚರಿಸಲು ಸೂಚಿಸಲಾಗಿದೆ.

ಮತ್ತೊಂದೆಡೆ ಜಿಲ್ಲೆಯ ಜೀವನದಿ ಹೇಮಾವತಿ ನದಿಗೆ ಒಳಹರಿವಿನಲ್ಲಿ ಏರಿಕೆಯಾಗುತ್ತಿದೆ. ಯಾವ ಕ್ಷಣದಲ್ಲಾದರೂ ನದಿ ಹಾಗೂ ನಾಲೆಗಳಿಗೆ ನೀರು ಬಿಡುಗಡೆ ಮಾಡಲಿದ್ದು, ನದಿ ಪಾತ್ರದ ಜನರು, ಗ್ರಾಮಸ್ಥರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದ್ದಾರೆ. ಮಳೆ ಅಬ್ಬರ ಕಾರಣ ಮುಂಜಾಗ್ರತಾ ಕ್ರಮವಾಗಿ ಹಾಸನ ಜಿಲ್ಲೆಯ ಆರು ತಾಲ್ಲೂಕಿನ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

Share This Article