ಗ್ಯಾಂಗ್ಟಾಕ್: ನಾಪತ್ತೆಯಾಗಿದ್ದ ಸಿಕ್ಕಿಂನ (Sikkim) ಮಾಜಿ ಸಚಿವ ಆರ್.ಸಿ ಪೌಡ್ಯಾಲ್ (80) (RC Poudyal) ಅವರ ಮೃತದೇಹ ಪಶ್ಚಿಮ ಬಂಗಾಳದ (West Bengal) ಸಿಲಿಗುರಿಯ ಬಳಿ ಕಾಲುವೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೌಡ್ಯಾಲ್ ಶವ ತೀಸ್ತಾ ನದಿಯಿಂದ ಕಾಲುವೆಗೆ ತೇಲಿ ಬಂದಿದೆ ಎಂದು ಶಂಕಿಸಲಾಗಿದೆ. ವಾಚ್ ಮತ್ತು ಧರಿಸಿದ್ದ ಬಟ್ಟೆಗಳಿಂದ ಅವರ ಮೃತದೇಹದ ಗುರುತು ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಜು.7 ರಂದು ಪೌಡ್ಯಾಲ್ ಅವರು ಪಾಕ್ಯೊಂಗ್ ಜಿಲ್ಲೆಯ ಚೋಟಾ ಸಿಂಗ್ಟಾಮ್‍ನಿಂದ ನಾಪತ್ತೆಯಾಗಿದ್ದರು. ಅವರನ್ನು ಹುಡುಕಲು ವಿಶೇಷ ತನಿಖಾ ತಂಡವನ್ನು (ಎಸ್‍ಐಟಿ) ರಚಿಸಲಾಗಿತ್ತು. ದುರಾದೃಷ್ಟವಶಾತ್ ಅವರು ಸಾವಿಗೀಡಾಗಿದ್ದಾರೆ. ಈ ಬಗ್ಗೆ ತನಿಖೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೌಡ್ಯಾಲ್ ಅವರು ಸಿಕ್ಕಿಂ ವಿಧಾನಸಭೆಯಲ್ಲಿ ಉಪಸಭಾಪತಿಯಾಗಿದ್ದರು ಮತ್ತು ನಂತರ ರಾಜ್ಯದ ಅರಣ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. 70 ಮತ್ತು 80ರ ದಶಕದಲ್ಲಿ ರೈಸಿಂಗ್ ಸನ್ ಪಾರ್ಟಿಯನ್ನು ಸ್ಥಾಪಿಸುವ ಮೂಲಕ ಸಿಕ್ಕಿಂ ರಾಜ್ಯದ ರಾಜಕೀಯದಲ್ಲಿ ಪ್ರಮುಖ ವ್ಯಕ್ತಿ ಎಂದು ಪರಿಗಣಿಸಲ್ಪಟ್ಟರು. ಅವರು ಸಿಕ್ಕಿಂನ ಸಾಂಸ್ಕೃತಿಕ ಮತ್ತು ಸಾಮಾಜಿಕ ವಿಚಾರಗಳ ಆಳವಾದ ಜ್ಞಾನಕ್ಕೆ ಹೆಸರುವಾಸಿಯಾಗಿದ್ದರು.
ಪೌಡ್ಯಾಲ್ ಸಾವಿಗೆ ಸಿಕ್ಕಿಂನ ಸಿಎಂ ಪಿಎಸ್ ತಮಾಂಗ್ ಸಂತಾಪ ಸೂಚಿಸಿದ್ದು, ಸಚಿವರಾಗಿಯೂ ಸೇರಿದಂತೆ ಸಿಕ್ಕಿಂ ಸರ್ಕಾರಕ್ಕೆ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಮತ್ತು ಜುಲ್ಕೆ ಘಮ್ ಪಕ್ಷದ ನಾಯಕರಾಗಿದ್ದ ಪೌಡ್ಯಾಲ್ ನಿಧನದಿಂದ ನಾನು ತೀವ್ರ ದುಃಖಿತನಾಗಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.