– ನೀವು ಲೂಟಿಕೋರರು: ಬಿಜೆಪಿ ನಾಯಕರ ವಿರುದ್ಧ ಡಿಕೆಶಿ ವಾಗ್ದಾಳಿ
– ಸಿಎಂ ರಾಜೀನಾಮೆಗೆ ಆರ್.ಅಶೋಕ್ ಆಗ್ರಹ
ಬೆಂಗಳೂರು: ವಿಧಾನಸಭೆಯಲ್ಲಿ ವಾಲ್ಮೀಕಿ ನಿಗಮದ ಅಕ್ರಮ ಪ್ರಕರಣ ಸರ್ಕಾರ ಹಾಗೂ ವಿಪಕ್ಷ ನಾಯಕರ ಗದ್ದಲಕ್ಕೆ ಕಾರಣವಾಯಿತು. ಸದನದಲ್ಲಿ ಜಟಾಪಟಿಯೂ ತಾರಕಕ್ಕೆ ಏರಿತ್ತು.
ಬಿಜೆಪಿ ಮಾಜಿ ಡಿಸಿಎಂ ಅಶ್ವಥ್ ನಾರಾಯಣ್ ಮಾತನಾಡಿ, ಸದನದಲ್ಲಿ ಕಾಂಗ್ರೆಸ್‌ನವರು ಯಾರೂ ಇಲ್ಲ, ಸಿಎಂ ಇಲ್ಲ, ಸಚಿವರು ಇಲ್ಲ ಎಂದು ಅಸಮಾಧಾನ ಹೊರಹಾಕಿದರು. ಖುದ್ದು ಸಿಎಂ ಮೇಲೆ ಆರೋಪವಿದೆ. ಆದರೆ ಇದರ ಚರ್ಚೆ ವೇಳೆ ಸಿಎಂ ಇಲ್ಲ. ಇದೇನಾ ಅವರ ಜವಾಬ್ದಾರಿ? ಸದನ ನಡೀತಿದೆ, ಸದನಕ್ಕೆ ಬರಲು ಸಿಎಂಗೆ ಪುರುಸೊತ್ತಿಲ್ವಾ? ಕರೆಸಿ ಸಿಎಂನಾ ಎಂದು ಕಿಡಿಕಾರಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್, ಹೌದು.. ನೀವು ಲೂಟಿ ಮಾಡಿದ್ದಕ್ಕೆ ಜನ ನಮ್ಮನ್ನ ಇಲ್ಲಿ ಕೂರಿಸಿರೋದು. ನೀವು ಮಾಡಬಾರದ ಲೂಟಿ ಮಾಡಿದ್ದಕ್ಕೆ ನಿಮ್ಮನ್ನ ಜನ ಅಲ್ಲಿ ಕೂರಿಸಿರೋದು. ನೀನು ಲೂಟಿ ಮಾಡುವವರ ಪಿತಾಮಹ ಅಂತಾ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ಡಿಸಿಎಂ ನನ್ನ ಹೆಸರು ಹೇಳಿ ಆರೋಪ ಮಾಡಿದ್ದಾರೆ. ಹಿಟ್ ಅಂಡ್ ರನ್ ಹೇಳಿಕೆ ಕೊಟ್ಟಿದ್ದಾರೆ. ನಾನು ಮಾಡಬಾರದ್ದು ಏನು ಮಾಡಿದ್ದೀನಿ ಅಂತಾ ಡಿಕೆಶಿವಕುಮಾರ್ ಹೇಳಬೇಕು. ನಾವು ನಿಮ್ಮ ಹಾಗೆ ಓಡಿ ಹೋಗಲ್ಲ. ಇಲ್ಲೇ ಇರ್ತೇವೆ. ಡಿ.ಕೆ.ಶಿವಕುಮಾರ್ ಕ್ಷಮೆ ಕೇಳಬೇಕು ಎಂದು ಅಶ್ವಥ್ ನಾರಾಯಣ್ ಸೇರಿದಂತೆ ಬಿಜೆಪಿ ಶಾಸಕರು ಪಟ್ಟು ಹಿಡಿದರು. ಆಡಳಿತ ಹಾಗೂ ವಿಪಕ್ಷ ನಾಯಕರ ಗದ್ದಲ ಏರ್ಪಟ್ಟಿತು.
ನಿಗಮದ ಅಕ್ರಮ ಪ್ರಕರಣ ಕುರಿತು ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಸಿಎಂ ಅವರು 187 ಕೋಟಿ ಅಕ್ರಮ ವರ್ಗಾವಣೆ ಆಗಿಲ್ಲ. ವರ್ಗಾವಣೆ ಆಗಿರೋದು 89.62 ಕೋಟಿ ಅಂದ್ರು. ಅಲ್ಲಿಗೆ ಅಕ್ರಮ ವರ್ಗಾವಣೆ ಆಗಿರೋದನ್ನ ಸಿಎಂ ಒಪ್ಪಿಕೊಂಡ ಹಾಗಾಯ್ತಲ್ಲ. ಎಂಜಿ ರಸ್ತೆಯಲ್ಲಿ ಕಳ್ಳತನಕ್ಕೆ ಅಂತಾನೇ ಖಾತೆ ತೆರೆದು 187 ಕೋಟಿ ಕದ್ದು ವರ್ಗಾವಣೆ ಮಾಡಿದ್ದಾರೆ. ಕಳವು ಮಾಡಲು 187 ಕೋಟಿ ವರ್ಗಾವಣೆ ಮಾಡಿದ್ರೆ ಹಗರಣ ಸಹ 187 ಕೋಟಿ ಅಷ್ಟೇ ಆಗಿದೆ ಅಂತರ್ಥ. ಸಿಎಂ 89.62 ಕೋಟಿ ಅಂತಾ ಹೇಗೆ ಹೇಳ್ತಾರೆ? ಇದು ಪಕ್ಕಾ 187 ಕೋಟಿ ಅಕ್ರಮನೇ. ಕದ್ದು ಇನ್ನೊಂದು ಕಡೆ ಇಟ್ಟಿದ್ದಾರೆ ಅಂದ್ರೆ ಅದು ನಿಗಮದ ಹಣ ತಾನೇ? ಈ ಕಳ್ಳತನ ಸಿಎಂಗೆ ಗೊತ್ತಿದ್ರೂ ಅವರದ್ದೇ ತಪ್ಪು ಗೊತ್ತಿಲ್ಲ ಅಂದ್ರೂ ಅವರದ್ದೇ ತಪ್ಪು. ಯಾಕಂದ್ರೆ ಸಿಎಂ ಅವರೇ ಯಜಮಾನರು ಎಂದು ಆರೋಪಿಸಿದರು.
ವಾಲ್ಮೀಕಿ ಪ್ರಕರಣದಲ್ಲಿ ಎಸ್‌ಐಟಿ ವಿಫಲ ಆಗಿದೆ. ನಾಗೇಂದ್ರ ಎಸ್‌ಐಟಿ ವಿಚಾರಣೆ ಎದುರಿಸಿ ನಗ್ತಾ ಹೋಗ್ತಾರೆ, ನಗ್ತಾ ಬರ್ತಾರೆ. ಅದೇ ರೇವಣ್ಣ ಎಸ್‌ಐಟಿ ವಿಚಾರಣೆಗೆ ಮುನ್ನ ಬೇಲ್ ಬೇಲ್ ಅಂತಾ ಓಡ್ತಾರೆ. ಇದು ಎಸ್‌ಐಟಿ ವೈಫಲ್ಯ. ವಾಲ್ಮೀಕಿ ಪ್ರಕರಣ ಮುಚ್ಚಿ ಹಾಕಲು ಎಸ್‌ಐಟಿ ರಚನೆ ಆಗಿದೆಯಾ? ಬೇನಾಮಿ ಖಾತೆಗಳಿಗೆ ಹಣ ವರ್ಗಾವಣೆ ಆಗಿದೆ. ಎಸ್‌ಐಟಿ ಏನ್ ಮಾಡ್ತಿದೆ. ನಾಗೇಂದ್ರಗೆ ಒಂದು ಕಾನೂನು ಬೇರೆಯವರಿಗೆ ಒಂದು ಕಾನೂನಾ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.
ಅಶೋಕ್ ಮಾತಿಗೆ ಶಾಸಕ ರಿಜ್ವಾನ್ ಅರ್ಷದ್ ಆಕ್ಷೇಪ ವ್ಯಕ್ತಪಡಿಸಿದರು. ಈ ಪ್ರಕರಣ, ಆ ಪ್ರಕರಣ ಒಂದೇನಾ? ಅಲ್ಲಿ ನೂರಾರು ಮಹಿಳೆಯರ ಮಾನ ಹೋಗಿದೆ. ಮಹಿಳೆಯರ ಮಾನದ ಬಗ್ಗೆ ಚಿಂತೆ ಇಲ್ವಾ? ಪದೇ ಪದೇ ಎರಡರ ತುಲನೆ ಮಾಡಿ ಮಾತಾಡ್ತಿದ್ದಾರೆ ಅಶೋಕ್. ರೇವಣ್ಣ ಪ್ರಕರಣ ಗಂಭೀರ ಅಲ್ವಾ ಎಂದು ಪ್ರಶ್ನಿಸಿದರು.
ವಾಲ್ಮೀಕಿ ನಿಗಮದ ಪ್ರಕರಣದಲ್ಲಿ ಎಸ್ಟಿ ಸಮುದಾಯಕ್ಕೆ ಅನ್ಯಾಯ ಆಗಿದೆ. ವಾಲ್ಮೀಕಿ ಜನಾಂಗದ ಶಾಪ ಸರ್ಕಾರಕ್ಕೆ ತಟ್ಟಬಾರದು ಅಂದ್ರೆ ಕೂಡಲೇ 187 ಕೋಟಿ ವಾಪಸ್ ಪಡೆಯಿರಿ. ಪ್ರಕರಣದ ಸಿಬಿಐ ತನಿಖೆ ಆಗಬೇಕು. ಇದು ಸಿಎಂ ಹಣಕಾಸು ಇಲಾಖೆಗೆ ಬರುತ್ತೆ, ಸಿಎಂ ನೈತಿಕ ಹೊಣೆ ಹೊರಬೇಕು. ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ಕೊಡಬೇಕು ಎಂದು ಅಶೋಕ್ ಆಗ್ರಹಿಸಿದರು. ಮೇಜು ಕುಟ್ಟಿ ಬಿಜೆಪಿ ಸದಸ್ಯರು ಸ್ವಾಗತಿಸಿದರು.
ಸಿಎಂ ರಾಜೀನಾಮೆಗೆ ಅಶೋಕ್ ಒತ್ತಾಯಿಸಿದ್ದಕ್ಕೆ ಸದನದಲ್ಲಿ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಸದನದಲ್ಲಿ ಮತ್ತೆ ಗದ್ದಲ ಶುರುವಾಯಿತು. ಅಶೋಕ್ ಚರ್ಚೆ ಮುಗಿದ ಬೆನ್ನಲ್ಲೇ ವಾಕ್ಸಮರ ತಾರಕಕ್ಕೇರಿತು.