ಬಾಗಲಕೋಟೆ: ವ್ಯಕ್ತಿಯೊಬ್ಬರು ಹುಟ್ಟುವ 11 ವರ್ಷಗಳ ಮುನ್ನವೇ ಅವರ ಹೆಸರಲ್ಲಿ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಆಸ್ತಿ ನಮೂದಾಗಿರುವ ಪ್ರಕರಣ ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ನಡೆದಿದೆ.
ನಜೀರ್ ಅಹ್ಮದ್ ಕಂಗನೊಳ್ಳಿ ಎಂಬವರ ಹೆಸರಲ್ಲಿ ಕೋಟ್ಯಾಂತರ ರೂ. ಬೆಲೆಬಾಳುವ ಸೈಟ್ ನಮೂದಾಗಿದೆ. ನಜೀರ್ ಅವರು ಸದ್ಯ ಕರ್ನಾಟಕ ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ಮಂಡಳಿಯ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯವೋ ಅಥವಾ ಭ್ರಷ್ಟ ರಾಜಕಾರಣಿಯ ದರ್ಬಾರೋ ಗೊತ್ತಿಲ್ಲ ನಜೀರ್ ಅವರ ಹೆಸರಲ್ಲಿ ಮಾತ್ರ ಸೈಟ್ ನಮೂದಾಗಿದೆ.
ನಜೀರ್ ಅವರು ಹುಟ್ಟಿದ್ದು ಜನವರಿ 6, 1974ರಲ್ಲಿ, ಆದರೆ 1963 ರಲ್ಲಿ ಅಂದ್ರೆ ಇವರು ಹುಟ್ಟುವ 11 ವರ್ಷ ಮೊದಲೇ ಇವರ ಹೆಸ್ರಲ್ಲಿ ಜಮಖಂಡಿ ನಗರಸಭೆಯ ಅಧೀನದಲ್ಲಿದ್ದ 279 ಸ್ಕ್ವೇರ್ ಮೀಟರ್ ಆಸ್ತಿ ನಮೂದಾಗಿದೆ. ಸಿಟಿ ಸರ್ವೇ ನಂಬರ್ 4618/01 ಆಸ್ತಿ ಇದಾಗಿದೆ. ನಜೀರ್ ಕಂಗನೊಳ್ಳಿ ತಮ್ಮ ಪ್ರಭಾವ ಬಳಸಿಕೊಂಡು ಬೆಲೆಬಾಳುವ ಸರ್ಕಾರಿ ಜಾಗ ಕೊಳ್ಳೆ ಹೊಡೆಯಲು ಮುಂದಾಗಿದ್ದಾರೆ ಎಂದು ಜಮಖಂಡಿ ಮಾಜಿ ಶಾಸಕ ಶ್ರೀಕಾಂತ್ ಕುಲಕರ್ಣಿ ಆರೋಪಿಸಿದ್ದಾರೆ.
ಮಾಜಿ ಶಾಸಕರ ಆರೋಪದಲ್ಲಿ ಹುರುಳಿಲ್ಲ, ನಾನು ಯಾವುದೇ ತಪ್ಪು ಮಾಡಿಲ್ಲ. ನಗರಸಭೆಯಿಂದ 2000ರಲ್ಲಿ ರಾಜೀವ್ ಗಾಂಧಿ ಮೀನುಗಾರಿಕೆ ಸಹಕಾರಿ ಸಂಘಕ್ಕೆ ಸೈಟನ್ನು ಖರೀದಿಸಲಾಗಿದೆ. ಸ್ವಂತಕ್ಕಾಗಿ ಖರೀದಿ ಮಾಡಿಲ್ಲ ಎಂದು ನಜೀರ್ ಅಹ್ಮದ್ ಹೇಳಿದ್ದಾರೆ.
ನಗರಸಭೆಯ ಆಸ್ತಿಯ ಅಕ್ರಮ ಪರಭಾರೆ ವಿಚಾರದ ಬಗ್ಗೆ ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡ್ತಿದ್ದಾರೆ. ಆದರೆ ಈ ಬಗ್ಗೆ ತನಿಖೆಯಾಗಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.