Champions Trophy 2025: ಭಾರತ ಕ್ರಿಕೆಟ್‌ ತಂಡವು ಪಾಕ್‌ಗೆ ಹೋಗಲ್ಲ – ಬಿಸಿಸಿಐ ಖಡಕ್‌ ನಿರ್ಧಾರ!

Public TV
3 Min Read
IND vs PAK

ಮುಂಬೈ: 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ (Champions Trophy 2025) ಟೂರ್ನಿಗಾಗಿ ಭಾರತ ಕ್ರಿಕೆಟ್‌ ತಂಡವು ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ಬಿಸಿಸಿಐ ಮೂಲಗಳು ಖಚಿತಪಡಿಸಿವೆ. ಭಾರತದ ಪಂದ್ಯಗಳನ್ನು ಶ್ರೀಲಂಕಾ ಅಥವಾ ದುಬೈನಲ್ಲಿ ನಡೆಸುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿಗೆ ಕೇಳಿದೆ ಎಂದು ಬಿಸಿಸಿಐ (BCCI) ಮೂಲಗಳು ತಿಳಿಸಿವೆ.

2025ರ ಫೆಬ್ರವರಿ 19ರಿಂದ ಮಾರ್ಚ್‌ 9ರ ವರೆಗೆ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ (Champions Trophy) ಪಾಕ್‌ ಆತಿಥ್ಯದಲ್ಲಿ ನಡೆಯಲಿದೆ. ಫೈನಲ್‌ ಪಂದ್ಯಕ್ಕೆ ಮಳೆ ಅಡ್ಡಿಯಾದ್ರೆ ಮಾರ್ಚ್‌ 10 ರಂದು ಮೀಸಲು ದಿನ ಇರಲಿದೆ. ಪಾಕಿಸ್ತಾನದ (Pakistan) ಕರಾಚಿ, ಲಾಹೋರ್, ಮುಲ್ತಾನ್ ಮತ್ತು ರಾವಲ್ಪಿಂಡಿ ಕ್ರೀಡಾಂಗಣಗಳು ಆತಿಥ್ಯ ವಹಿಸಲಿವೆ. ಸದ್ಯ ಭಾರತ ಮತ್ತು ಪಾಕ್‌ ನಡುವಿನ ಪಂದ್ಯ ಲಾಹೋರ್‌ನಲ್ಲಿ ನಿಗದಿಯಾಗಿದೆ. ಆದ್ರೆ ಪಾಕಿಸ್ತಾನಕ್ಕೆ ತೆರಳಲು ಬಿಸಿಸಿಐ ಹಿಂದೇಟು ಹಾಕಿದೆ. ಇದನ್ನೂ ಓದಿ: 2.5 ಕೋಟಿ ನಗದು ಬಹುಮಾನ ನಿರಾಕರಿಸಿದ ದ್ರಾವಿಡ್‌ – ಕನ್ನಡಿಗನ ನಡೆಗೆ ವ್ಯಾಪಕ ಮೆಚ್ಚುಗೆ!

INDvsPAK

ತನ್ನ ಎಲ್ಲಾ ಪಂದ್ಯಗಳನ್ನು ಒಂದೇ ನಗರದಲ್ಲಿ ಆಡುವಂತೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಭಾರತಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಅದಕ್ಕಾಗಿ ಭಾರತದ ಎಲ್ಲಾ ಪಂದ್ಯಗಳನ್ನು ಲಾಹೋರ್‌ ಮೈದಾನದಲ್ಲೇ ನಿಗದಿಪಡಿಸಲಾಗಿತ್ತು. ಆದ್ರೆ ಭಾರತ ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ. ದುಬೈ ಅಥವಾ ಶ್ರೀಲಂಕಾದಲ್ಲಿ ತನ್ನ ಪಂದ್ಯಗಳನ್ನು ಆಯೋಜಿಸುವಂತೆ ಐಸಿಸಿಗೆ ಕೇಳಿಕೊಂಡಿದೆ ಎಂದು ಬಿಸಿಸಿಐ ಖಚಿತಪಡಿಸಿದೆ. ಕಳೆದ ಮೇ ತಿಂಗಳಲ್ಲಿ ಬಿಸಿಸಿಐ ಉಪಾಧ್ಯಕ್ಷ ರಾಜೀವ್‌ ಶುಕ್ಲಾ, ಕೇಂದ್ರ ಸರ್ಕಾರ ಅನುಮತಿ ನೀಡಿದರೆ ಭಾರತ ತಂಡ ಪಾಕಿಸ್ತಾನಕ್ಕೆ ತೆರಳಲಿದೆ ಎಂದು ಹೇಳಿದ್ದರು. ಇದೀಗ ಪಾಕ್‌ಗೆ ತೆರಳುವುದಿಲ್ಲ ಎಂದು ಬಿಸಿಸಿಐ ಖಚಿತಪಡಿಸಿದೆ.

IND vs PAK 6

ಹೈಬ್ರಿಡ್‌ ಮಾದರಿಯಲ್ಲಿ ಆಯೋಜನೆಯಾಗುತ್ತಾ?
ಕಳೆದ ವರ್ಷ ಏಕದಿನ ಏಷ್ಯಾಕಪ್‌ ಟೂರ್ನಿಯನ್ನಾಡಲು ಭಾರತ ತಂಡವನ್ನು ಪಾಕ್‌ಗೆ ಕಳುಹಿಸಲು ಬಿಸಿಸಿಐ ನಿರಾಕರಿಸಿದ ನಂತರ ACC (ಏಷ್ಯನ್‌ ಕ್ರಿಕೆಟ್‌ ಸಮಿತಿ) ಹೈಬ್ರಿಡ್‌ ಮಾದರಿಯಲ್ಲಿ ಆಡಿಸಲು ನಿರ್ಧರಿಸಿತು. ಏಷ್ಯಾಕಪ್‌ ಟೂರ್ನಿಯ ಹಕ್ಕು ಪಾಕಿಸ್ತಾನದ ಬಳಿಯಿದ್ದರೂ ಪಾಕ್‌ನಲ್ಲಿ ಕೇವಲ 4 ಪಂದ್ಯಗಳನ್ನಾಡಲು ಮಾತ್ರವೇ ಅನುಮತಿ ನೀಡಿತು. ಉಳಿದ 9 ಪಂದ್ಯಗಳನ್ನ ಶ್ರೀಲಂಕಾದಲ್ಲಿ ಆಡಿಸಲು ನಿರ್ಧರಿಸಿತು. ಈ ಬಾರಿಯೂ ಅದೇ ರೀತಿ ಹೈಬ್ರಿಡ್‌ ಮಾದರಿಯಲ್ಲಿ ಪಂದ್ಯಗಳನ್ನು ಆಯೋಜಿಸಲಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: ಗಿಲ್‌, ಗಾಯಕ್‌ವಾಡ್‌ ಸ್ಫೋಟಕ ಆಟ – ಟೀಂ ಇಂಡಿಯಾಗೆ 23 ರನ್‌ಗಳ ಜಯ

IndvsPak

ಪಾಕ್‌ಗೆ ಪ್ರಯಾಣಿಸಲು ಭಾರತ ಹಿಂದೇಟು ಏಕೆ?
ಪಾಕಿಸ್ತಾನ ಮುಸ್ಲಿಂ ರಾಷ್ಟ್ರವಾಗಿ ಬೇರ್ಪಟ್ಟ ನಂತರ ಭಾರತದ ವಿರುದ್ಧ ದ್ವೇಷ ಸಾಧಿಸುತ್ತಲೇ ಬಂದಿತು. 1947-48ರಲ್ಲಿ ರಾಜ ಹರಿಸಿಂಗ್‌ ಭಾರತದೊಂದಿಗೆ ಕಾಶ್ಮೀರ ವಿಲೀನ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಇಂಡೋ ಪಾಕ್‌ ಯುದ್ಧ (Indo Pak War) ನಡೆಯಿತು. ಆ ನಂತರ 1965ರಲ್ಲಿ ಕಾಶ್ಮೀರಕ್ಕಾಗಿ ನಡೆದ ಯುದ್ಧ, 1971ರಲ್ಲಿ ಪೂರ್ವ ಪಾಕಿಸ್ತಾನ (ಇಂದಿನ ಬಾಂಗ್ಲಾದೇಶ) ವಿಮೋಚನೆಗಾಗಿ ನಡೆದ ಯುದ್ಧ, 1999 ರಲ್ಲಿ ನಡೆದ ಕಾರ್ಗಿಲ್‌ ಯುದ್ಧ ಇವೆಲ್ಲವೂ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧವನ್ನ ಮತ್ತಷ್ಟು ಹದಗೆಡಿಸುತ್ತಾ ಹೋಯಿತು. ಆದ್ರೆ ಕ್ರೀಡೆಯಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಕಾರ್ಗಿಲ್‌ ಯುದ್ಧದ ನಂತರವೂ ಭಾರತ ಮತ್ತು ಪಾಕ್‌ ತಂಡಗಳು ದ್ವಿಪಕ್ಷಿಯ ಸರಣಿ, ಏಕದಿನ ಹಾಗೂ ಟಿ20 ಸರಣಿಗಳಲ್ಲಿ ಮುಖಾಮುಖಿಯಾಗಿವೆ. ಭಾರತ ತಂಡವು ಸಹ ಪಾಕಿಸ್ತಾನದಲ್ಲೇ ದ್ವಿಪಕ್ಷಿಯ ಸರಣಿಗಳನ್ನಾಡಿದೆ. ಆದ್ರೆ 2008ರಲ್ಲಿ ನಡೆದ ಮುಂಬೈ ದಾಳಿ (Mumbai Attack) ಎರಡು ರಾಷ್ಟ್ರಗಳ ಮೇಲೆ ಭಾರೀ ಪರಿಣಾಮ ಬೀರಿತು.

ಭಾರತ ತಂಡವು 2005-2006ರಲ್ಲಿ ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಪಾಕಿಸ್ತಾನಕ್ಕೆ ತನ್ನ ಕೊನೆಯ ಪ್ರವಾಸ ಕೈಗೊಂಡಿತ್ತು. ಈ ಪಂದ್ಯದಲ್ಲಿ ಇತ್ತಂಡಗಳು 3 ಟೆಸ್ಟ್ ಹಾಗೂ 5 ಏಕದಿನ ಪಂದ್ಯಗಳನ್ನಾಡಿದ್ದವು. ಆದ್ರೆ 2008ರಲ್ಲಿ ನಡೆದ ಮುಂಬೈ ದಾಳಿಯ ನಂತರ ಉಭಯ ತಂಡಗಳ ನಡುವೆ ಯಾವುದೇ ದ್ವಿಪಕ್ಷೀಯ ಸರಣಿ ನಡೆದಿಲ್ಲ. ಐಸಿಸಿ ಟೂರ್ನಿ ಅಥವಾ ಏಷ್ಯಾಕಪ್ ಟೂರ್ನಿಗಳಲ್ಲಿ ಮಾತ್ರವೇ ಪರಸ್ಪರ ಮುಖಾಮುಖಿಯಾಗುತ್ತಿವೆ. ಕಳೆದ ವರ್ಷ ಪಾಕಿಸ್ತಾನ ತಂಡ ಭಾರತದಲ್ಲಿ ನಡೆದ ವಿಶ್ವಕಪ್‌ ಟೂರ್ನಿಯಲ್ಲಿ ಪಾಕ್‌ ತಂಡ ಪಾಲ್ಗೊಂಡಿತ್ತು. ಇದನ್ನೂ ಓದಿ: ವಿಶ್ವ ಚಾಂಪಿಯನ್ಸ್‌ಗೆ 125 ಕೋಟಿ ರೂ. ಬಹುಮಾನ – ರೋಹಿತ್‌, ಕೊಹ್ಲಿ, ದ್ರಾವಿಡ್‌ಗೆ ಸಿಕ್ಕಿದ್ದೆಷ್ಟು? 

Share This Article