ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ – 5 ಸ್ಥಳಗಳನ್ನು ತಿಳಿಸಿದ ಎಂಬಿಪಿ

Public TV
2 Min Read
MB PATIL

ಬೆಂಗಳೂರು: ಐದು ಮಾನದಂಡದ ಆಧಾರದಲ್ಲಿ ಬೆಂಗಳೂರು (Bengaluru) ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (International Airport) ಸ್ಥಳವನ್ನು ಅಂತಿಮಗೊಳಿಸಲಾಗುತ್ತದೆ ಎಂದು ಬೃಹತ್ ಕೈಗಾರಿಕಾ, ಮೂಲ ಸೌಕರ್ಯ ಸಚಿವ ಎಂ.ಬಿ.ಪಾಟೀಲ್ (MB Patil) ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರು ಅಂತಾರಾಷ್ಟ್ರೀಯ ನಗರವಾಗಿ ಬೆಳೆದಿದೆ. ಕೆಂಪೇಗೌಡ ವಿಮಾನ ನಿಲ್ದಾಣ (Kempegowda Airport) ಮೂರನೇ ಅತಿ ದೊಡ್ಡ ವಿಮಾನ ನಿಲ್ದಾಣ. ಅತಿ ದಟ್ಟಣೆ ಹೊಂದಿರುವ ವಿಮಾನ ನಿಲ್ದಾಣವಾಗಿದೆ. 2023-24ರಲ್ಲಿ ವಿಮಾನ ನಿಲ್ದಾಣದಲ್ಲಿ 3.7 ಕೋಟಿ ಪ್ರಯಾಣಿಕರು ಸಂಚಾರ ನಡೆಸಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವರ್ಷಕ್ಕೆ 5.2 ಕೋಟಿ ಮಂದಿ ಪ್ರಯಾಣಿಕರು ಸಂಚಾರ ನಡೆಸುತ್ತಿದ್ದಾರೆ.

ಕೆಂಪೇಗೌಡ ವಿಮಾನ ನಿಲ್ದಾಣ 110 ಮಿಲಿಯನ್ ಗರಿಷ್ಠ ಸಾಮರ್ಥ್ಯ ಹೊಂದಿದೆ. ಕಾರ್ಗೋ ಸಾಮರ್ಥ್ಯ 0.71 ಮಿಲಿಯನ್ ಟನ್ ಇದೆ. ಗರಿಷ್ಠ ಕಾರ್ಗೋ ಸಾಮರ್ಥ್ಯ 1.10 ಮಿಲಿಯನ್ ಟನ್ ಸಾಮರ್ಥ್ಯವಿದೆ ಎಂದರು. ಇದನ್ನೂ ಓದಿ: 2.5 ಕೋಟಿ ನಗದು ಬಹುಮಾನ ನಿರಾಕರಿಸಿದ ದ್ರಾವಿಡ್‌ – ಕನ್ನಡಿಗನ ನಡೆಗೆ ವ್ಯಾಪಕ ಮೆಚ್ಚುಗೆ!

BENGALURU AIRPORT 5
ಬೆಂಗಳೂರು ವಿಮಾನ ನಿಲ್ದಾಣ ಟರ್ಮಿನಲ್‌ – 2

2035ಕ್ಕೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಎರಡನೇ ರನ್ ವೇ ವಿಸ್ತರಣೆಗೆ ಅವಕಾಶ ಇರುವುದಿಲ್ಲ. 2033ಕ್ಕೆ (BIAL)  ಜೊತೆಗಿನ ವಿಶೇಷ ಒಪ್ಪಂದ ಮುಕ್ತಾಯವಾಗಲಿದೆ. ಅದರಂತೆ 150 ಕಿ.ಮೀ. ವರೆಗೆ ಹೊಸ ವಿಮಾನ ನಿಲ್ದಾಣ ಸ್ಥಾಪಿಸುವಂತಿಲ್ಲ.‌ ಬಳಿಕ 150 ಕಿ.ಮೀ. ದೂರದ ಆ ಷರತ್ತು ಮುಕ್ತಾಯವಾಗಲಿದೆ. ಮುಂಬೈ ಹಾಗೂ ದೆಹಲಿಯಲ್ಲಿ ಈ ರೀತಿಯ ಷರತ್ತು ಇಲ್ಲ. 2035ಗೆ ಕೆಂಪೇಗೌಡ ಏರ್ ಪೋರ್ಟ್ ಸಾಮರ್ಥ್ಯ ಗರಿಷ್ಠ ಮಟ್ಟಕ್ಕೆ ಮುಟ್ಟಲಿದೆ. ಹೀಗಾಗಿ ಹೊಸ ವಿಮಾನ ನಿಲ್ದಾಣಕ್ಕೆ ಈಗಿನಿಂದಲೇ ತಯಾರಿ ಮಾಡಲಾಗಿದೆ. ಈ ಸಂಬಂಧ ಸಭೆ ನಡೆಸಲಾಗಿದೆ ಎಂದು ಹೇಳಿದರು.

Bengaluru Kempegowda International Airport 1
ಬೆಂಗಳೂರು ವಿಮಾನ ನಿಲ್ದಾಣ

ಹೊಸ ವಿಮಾನ ನಿಲ್ದಾಣಕ್ಕೆ ಐದು ಮಾನದಂಡವನ್ನು ಪಾಲನೆ ಮಾಡಬೇಕು‌. ಅದರಲ್ಲಿ ತಾಂತ್ರಿಕ ಕಾರ್ಯಸಾಧು, ಸಂಪರ್ಕ, ಪ್ರಯಾಣಿಕರ ಅನುಕೂಲತೆ, ಅನುಕೂಲಕರ ಭೂಮಿ, ಪ್ರಸಕ್ತ ಏರ್ ಪೋರ್ಟ್ ಗೆ ಸಂಪರ್ಕ ಅಂಶಗಳನ್ನೊಳಗೊಂಡ ಮಾನದಂಡಗಳನ್ನು ಪಾಲಿಸಬೇಕು. ಈ ಮಾನದಂಡದ ಬಗ್ಗೆ ತಜ್ಞರ ಸಲಹೆ ಕೇಳಿದ್ದೇವೆ ಎಂದು ವಿವರಿಸಿದರು.

ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ನಮ್ಮ ಮುಂದೆ ಐದಾರು ಸ್ಥಳಗಳ ಪ್ರಸ್ತಾವನೆ ಇದೆ‌. ಈ ಸಂಬಂಧ ಸಂಪುಟದಲ್ಲಿ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳುತ್ತೇವೆ. ಸ್ಥಳ ಇನ್ನೂ ಯಾವುದೂ ಅಂತಿಮವಾಗಿಲ್ಲ. ಹೊಸ ವಿಮಾನ ನಿಲ್ದಾಣಕ್ಕಾಗಿ ಮೈಸೂರು ರಸ್ತೆ, ಮಾಗಡಿ, ದಾಬಸ್ ಪೇಟೆ, ಜಿಗಣಿ, ತುಮಕೂರು, ಕನಕಪುರ ಹೆಸರುಗಳು ಕೇಳಿ ಬರುತ್ತಿವೆ. ಆದರೆ ಐದೂ ಮಾನದಂಡ ಪೂರೈಸುವ ಸೂಕ್ತ ಸ್ಥಳದ ಬಗ್ಗೆ ತಜ್ಞರ ಜೊತೆ ಚರ್ಚಿಸಿ ಎಲ್ಲಿಯಾಗಬೇಕು ಎಂದು ತೀರ್ಮಾನ ಮಾಡಲಾಗುತ್ತದೆ ಎಂದು ತಿಳಿಸಿದರು.

ಹೊಸ ವಿಮಾನ ನಿಲ್ದಾಣ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿರಲಿದೆ. ಸುಮಾರು 100 ಮಿಲಿಯನ್ ಸಾಮರ್ಥ್ಯದ ಹೊಸ ವಿಮಾನ ನಿಲ್ದಾಣ ಆಗಿರಲಿದೆ.‌ ಹೊಸ ವಿಮಾನ ನಿಲ್ದಾಣಕ್ಕೆ 4,500-5,000 ಎಕರೆ ಜಮೀನಿನ ಅಗತ್ಯ ಇದೆ. ಈ ಸಂಬಂಧ ಎರಡನೇ ಸಭೆ ನಡೆಸಲಾಗುವುದು. ಸಭೆಯಲ್ಲಿ ತಜ್ಞರ ಜೊತೆ ಚರ್ಚೆ ನಡೆಸುತ್ತೇನೆ ಎಂದು ತಿಳಿಸಿದರು.

 

Share This Article