ನೀಟ್‌ ಚರ್ಚೆಗೆ ಅವಕಾಶ ಮಾಡಿಕೊಡಿ – ಪ್ರಧಾನಿ ಮೋದಿಗೆ ರಾಹುಲ್‌ ಗಾಂಧಿ ಪತ್ರ!

Public TV
2 Min Read
Rahul gandhi and Narendra Modi

ನವದೆಹಲಿ: ʻನೀಟ್‌ʼ ಪರೀಕ್ಷಾ ಅಕ್ರಮದ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಸಲು ಅವಕಾಶ ಮಾಡಿಕೊಡುವಂತೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ಖುದ್ದು ಪತ್ರ ಬರೆದಿದ್ದಾರೆ. ಈ ಪತ್ರವನ್ನು ತಮ್ಮ ಸೋಷಿಯಲ್‌ ಮೀಡಿಯಾ ಎಕ್ಸ್‌ ಖಾತೆಯಲ್ಲೂ ಹಂಚಿಕೊಂಡಿದ್ದಾರೆ.

ಜುಲೈ 1ರಂದು ರಾಷ್ಟ್ರಪತಿಗಳ (President Of India) ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡಿದ್ದ ರಾಹುಲ್‌ ಗಾಂಧಿ ನೀಟ್‌ ಕುರಿತು ಚರ್ಚೆಗೆ (NEET Debate) ಅವಕಾಶ ಕೋರಿದ್ದರು. ಆದರೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸದನದ ನಿಯಮಗಳು ಮತ್ತು ಕಾರ್ಯವಿಧಾನಗಳನ್ನು ಉಲ್ಲೇಖಿಸಿ ಚರ್ಚೆಗೆ ಅವಕಾಶ ನಿರಾಕರಿಸಿದ್ದರು. ಇದಾದ ಮರುದಿನವೇ ರಾಹುಲ್‌ ಗಾಂಧಿ ಅವರು ಪತ್ರ ಬರೆದಿದ್ದಾರೆ.

RAHUL GANDHI NARENDRA MODI

ರಾಹುಲ್‌ ಗಾಂಧಿ ಬರೆದ ಪತ್ರದಲ್ಲಿ ಏನಿದೆ?
ಈ ಪತ್ರವು ನಿಮ್ಮನ್ನು ಚೆನ್ನಾಗಿ ಕಂಡುಕೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ. NEET ಕುರಿತು ಸಂಸತ್ತಿನಲ್ಲಿ ಚರ್ಚೆಗೆ ಮನವಿ ಮಾಡುವಂತೆ ಕೋರಿ ಪತ್ರ ಬರೆಯುತ್ತಿದ್ದೇನೆ. ಜೂನ್‌ 28ರಂದು ಸಂಸತ್ತಿನ ಉಭಯ ಸದನಗಳಲ್ಲಿ ನೋಟ್‌ ಕುರಿತು ಚರ್ಚೆ ನಡೆಸಬೇಕು ಎಂಬ ವಿರೋಧ ಪಕ್ಷಗಳ ಮನವಿಯನ್ನು ನಿರಾಕರಿಸಲಾಯಿತು. ಜೂನ್‌ 30 ರಂದು ಸಹ ವಿಪಕ್ಷಗಳು ಮತ್ತೊಮೆ ಚರ್ಚೆಗೆ ಮನವಿ ಮಾಡಿದೆ. ಆದ್ರೆ ಲೋಕಸಭೆಯ ಗೌರವಾನ್ವಿತ ಸ್ಪೀಕರ್‌ ಅವರು ಈ ಬಗ್ಗೆ ಸರ್ಕಾರದ ಜೊತೆ ಚರ್ಚಿಸುವುದಾಗಿ ಭರವಸೆ ನೀಡಿದ್ದರು. ಆದ್ದರಿಂದ ಮುಂದಿನ ದಾರಿ ಕಂಡುಕೊಳ್ಳಲು ರಚನಾತ್ಮಕವಾಗಿ ತೊಡಗಿಸಿಕೊಳ್ಳುವುದು ನಮ್ಮ ಗುರಿಯಾಗಿದೆ.

ಈ ಕ್ಷಣದಲ್ಲಿ ದೇಶಾದ್ಯಂತ ಸುಮಾರು 24 ಲಕ್ಷ ನೀಟ್‌ ಆಕಾಂಕ್ಷಿಗಳ ರಕ್ಷಣೆ ಮಾಡುವುದು ಮಾತ್ರ ನಮ್ಮ ಕಾಳಜಿಯಾಗಿದೆ. ಲಕ್ಷಾಂತರ ಕುಟುಂಬಗಳು ತಮ್ಮ ಮಕ್ಕಳಿಗಳಿಗೆ ಅನೇಕ ತ್ಯಾಗ ಮಾಡಿದ್ದಾರೆ. ಆದ್ರೆ ಪ್ರಶ್ನೆ ಪತ್ರಿಕೆ ಸೋರಿಕೆ ಎಷ್ಟೋ ಜನರ ಜೀವನದ ಕನಸನ್ನೇ ನುಚ್ಚುನೂರು ಮಾಡಿದೆ. ಈ ನಿಟ್ಟಿನಲ್ಲಿ ನೊಂದ ವಿದ್ಯಾರ್ಥಿಗಳು ಹಾಗೂ ಅವರ ಕುಟುಂಬದವರು ಜನಪ್ರತಿನಿಧಿಗಳಾದ ನಮ್ಮ ಮೇಲೆ ನಂಬಿಕೆಯಿಟ್ಟಿದ್ದಾರೆ. ನಾವು ಏನು ಕ್ರಮ ಕೈಗೊಳ್ಳುತ್ತೇವೆ ಎಂಬುದನ್ನು ಎದುರು ನೋಡುತ್ತಿದ್ದಾರೆ.

ನೀಟ್‌ ಪರೀಕ್ಷಾ ಅಕ್ರಮವು ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿನ ಹುಳುಕನ್ನು ಬಹಿರಂಗಪಡಿಸಿದ್ದು, ತಕ್ಷಣದ ಚರ್ಚೆಗೆ ಅರ್ಹವಾದ ವಿಚಾರವಾಗಿದೆ. ಕಳೆದ 7 ವರ್ಷಗಳಲ್ಲಿ 70ಕ್ಕೂ ಹೆಚ್ಚು ಪೇಪರ್‌ ಸೋರಿಕೆಯಾಗಿದ್ದು, 2 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಿದೆ. ಆದ್ರೆ ಇತರ ಪರೀಕ್ಷೆಗಳನ್ನು ಮುಂದೂಡುವುದು, ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ (ಎನ್‌ಟಿಎ) ಮಹಾನಿರ್ದೇಶಕರನ್ನು ಬದಲಾಯಿಸುವ ಸರ್ಕಾರದ ಕ್ರಮ ಕೇವಲ ಕ್ರಮವನ್ನು ಮುಚ್ಚಿಹಾಕುವ ಪ್ರಯತ್ನದ ಭಾಗವಾಗಿದೆ.

ನಮ್ಮ ವಿದ್ಯಾರ್ಥಿಗಳು ಈ ಸಮಸ್ಯೆಗಳಿಗೆ ಸರ್ಕಾರದಿಂದ ಸೂಕ್ತ ಉತ್ತರ ಕಂಡುಕೊಳ್ಳಲು ಅರ್ಹರಾಗಿದ್ದಾರೆ. ಸಂಸತ್ತಿನ ಚರ್ಚೆಯು ಅವರ ನಂಬಿಕೆಯನ್ನು ಮರುಸ್ಥಾಪಿಸಲು ಮೊದಲ ಹೆಜ್ಜೆಯಾಗಿದೆ. ಆದ್ದರಿಂದ ನೀಟ್‌ ವಿಚಾರವನ್ನು ತುರ್ತು ವಿಷಯವನ್ನಾಗಿ ಪರಿಗಣಿಸಿ ಚರ್ಚೆಗೆ ಅವಕಾಶ ಮಾಡಿಕೊಡಬೇಕೆಂದು ಸರ್ಕಾರಕ್ಕೆ ಮನವಿ ಮಾಡುತ್ತೇನೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನೀವು ಈ ಚರ್ಚೆಯನ್ನು ಮುನ್ನಡೆಸಿದರೆ ಅದು ಸೂಕ್ತವಾಗಿರುತ್ತದೆ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

Share This Article