– ಪ್ರಜಾಪ್ರಭುತ್ವದಲ್ಲಿ ಬಹುಮತಕ್ಕೆ ಬೆಲೆ ಜಾಸ್ತಿ
– ಡಿಕೆಶಿ ಎಚ್ಚರಿಕೆ ಮರುದಿನವೇ ಸಿಎಂ ಪರ ಆಪ್ತನ ಬ್ಯಾಟಿಂಗ್
ಬೆಂಗಳೂರು: ಅವರಿಗೆ ಕೊಡಿ ಇವರಿಗೆ ಕೊಡಿ ಎನ್ನುವುದಕ್ಕೆ ಸಿಎಂ ಹುದ್ದೆ (Chief Minister) ಅದೇನು ಕಡಲೆಪುರಿನಾ? ಅದು ನನ್ನ ಕೈಯ್ಯಲ್ಲೂ ಇಲ್ಲ, ಧರ್ಮಗುರುಗಳ ಕೈಯ್ಯಲ್ಲೂ ಇಲ್ಲ. ಶಾಸಕರ ಬೆಂಬಲ ಕ್ರೋಢಿಕರಿಸಿಯೇ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಹೆಚ್‌ಸಿ ಮಹಾದೇವಪ್ಪ (HC Mahadevappa) ಹೇಳಿದ್ದಾರೆ.
ಸಿಎಂ, ಡಿಸಿಎಂ, ಅಧ್ಯಕ್ಷ ಹುದ್ದೆಯ ಬಗ್ಗೆ ಯಾರೂ ಬಹಿರಂಗ ಹೇಳಿಕೆ ನೀಡಬಾರದು. ಈ ರೀತಿ ಹೇಳಿಕೆ ನೀಡಿದವರಿಗೆ ನೋಟಿಸ್ ನೀಡಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಎಚ್ಚರಿಕೆ ನೀಡಿದ ಮರು ದಿನವೇ ಸಿಎಂ ಆಪ್ತ ಮಹಾದೇವಪ್ಪ ಈಗ ಬಹಿರಂಗವಾಗಿಯೇ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ್ದಾರೆ.
ವಿಶೇಷ ಏನೆಂದರೆ ಈ ಮೊದಲು ಮಳವಳ್ಳಿಯ ಶಾಸಕ ನರೇಂದ್ರಸ್ವಾಮಿ (Narendraswamy) ಅವರು ಸಿದ್ದರಾಮಯ್ಯ ಅವರನ್ನು ಸಿಎಂ ಮಾಡಿದ್ದು ಶಾಸಕರು ಎಂದು ಹೇಳಿಕೆ ನೀಡಿ ಸಿಎಂ ಪರ ಬ್ಯಾಟಿಂಗ್ ಮಾಡಿದ್ದರು. ಈಗ ಮಹಾದೇವಪ್ಪನವರು ಸಿಎಂ ವಿಚಾರ ಪ್ರಸ್ತಾಪಿಸುವ ಮೂಲಕ ಡಿಕೆ ಶಿವಕುಮಾರ್ ಆದೇಶಕ್ಕೂ ಡೋಂಟ್ ಕೇರ್ ಅಂದಿದ್ದಾರೆ. ಇದನ್ನೂ ಓದಿ: ಸ್ಪೀಕರ್‌ಗೆ ಪತ್ರ ಬರೆದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ
2023 ರಲ್ಲಿ ವಿಧಾನಸಭೆ ಚುನಾವಣೆ ನಡೆದು ರಾಜ್ಯದ ಮತದಾರರು ಕಾಂಗ್ರೆಸ್‌ಗೆ (Congress) 135 ಶಾಸಕರನ್ನು ಆಯ್ಕೆ ಮಾಡಿದರು. ಪಕ್ಷದ ಹೈಕಮಾಂಡ್ ವೀಕ್ಷಕರನ್ನು ಕಳಿಸಿ ಶಾಸಕಾಂಗ ಪಕ್ಷದ ನಾಯಕರನ್ನು ಆಯ್ಕೆ ಮಾಡಿತು. ಶಾಸಕಾಂಗ ಪಕ್ಷದ ನಾಯಕರ ಸ್ಪರ್ಧೆಯಲ್ಲಿ ಒಬ್ಬೊಬ್ಬ ಶಾಸಕರು ಯಾರು ಆಯ್ಕೆ ಆಗಬೇಕು ಎಂಬುದನ್ನು ಚೀಟಿಯಲ್ಲಿ ಹೆಸರು ಬರೆದುಕೊಟ್ಟಿದ್ದರು. ಇದನ್ನು ಲೆಕ್ಕ ಹಾಕಿದಾಗ ಸಿದ್ದರಾಮಯ್ಯ ಅವರು ಹೆಚ್ಚು ಶಾಸಕರ ಬೆಂಬಲ ಪಡೆದು ಆಯ್ಕೆ ಆಗಿದ್ದಾರೆ ಎಂದರು.
ಪ್ರಜಾಪ್ರಭುತ್ವದ ಅಡಿಯಲ್ಲಿ ಹೆಚ್ಚು ಶಾಸಕರ ಬೆಂಬಲ ಪಡೆದು ಮುಖ್ಯಮಂತ್ರಿಯಾಗಿ ಆಯ್ಕೆ ಆಗಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಬಹುಮತವೇ ಮುಖ್ಯ. ಬೊಗಸೆ.. ಬೊಗಸೆ. ಅಂತ ಎತ್ತಿ ಕೊಡುವುದಕ್ಕೆ ಸಿಎಂ ಸ್ಥಾನವೇನೂ ಕಡಲೆಪುರಿನಾ ಎಂದು ಪ್ರಶ್ನೆ ಮಾಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರದ ಬಗ್ಗೆ ಕೇಳಲಾದ ಪ್ರಶ್ನೆಗೆ, ಒನ್ ಮ್ಯಾನ್ ಒನ್ ಪೋಸ್ಟ್ ಪಾಲಿಸಿಯನ್ನು ನಮ್ಮ ಹೈಕಮಾಂಡ್ ನಾಯಕರು ಇಟ್ಟುಕೊಂಡಿದ್ದಾರೆ. ತೀರ್ಮಾನ ನೋಡಿಕೊಂಡು ಮಾಡುತ್ತಾರೆ ಎಂದರು.