ನವದೆಹಲಿ: ಅಗ್ನಿವೀರ್‌ನಂತಹ (Agniveer) ಯೋಜಿತವಲ್ಲದ `ತುಘಲಕಿ’ ಯೋಜನೆ ತರುವ ಮೂಲಕ ಯುವಕರ ನೈತಿಕ ಸ್ಥೈರ್ಯವನ್ನು ಮೋದಿ ಸರ್ಕಾರ ಛಿದ್ರಗೊಳಿಸಿದೆ. ಇದರಿಂದಾಗಿ ಕೂಡಲೇ ಅಗ್ನಿವೀರ್ ಯೋಜನೆಯನ್ನು ರದ್ದು ಮಾಡಬೇಕು ಎಂದು ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ಅಗ್ರಹಿಸಿದ್ದಾರೆ.
ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲೆ ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಕೇವಲ ಘೋಷಣೆಗಳನ್ನು ನೀಡುವುದರಲ್ಲಿ ನಿಪುಣರಾಗಿದ್ದಾರೆ. ಕಳೆದ ವರ್ಷದಿಂದ ಮಣಿಪುರ ಹೊತ್ತಿ ಉರಿಯುತ್ತಿದೆ. ಆದರೆ ಪ್ರಧಾನಿ ಮೋದಿ (Narendra Modi) ಅಲ್ಲಿಗೆ ಭೇಟಿ ನೀಡಿಲ್ಲ. ವಿರೋಧ ಪಕ್ಷಗಳು ಜನಸಾಮಾನ್ಯರ ಸಂಕಷ್ಟದ ಬಗ್ಗೆ ಮಾತನಾಡುತ್ತವೆ. ಆದರೆ ಮೋದಿ ಕೇವಲ `ಮನ್ ಕಿ ಬಾತ್’ ಮಾಡುತ್ತಾರೆ. ಪ್ರಧಾನಿ ಮೋದಿಯವರು ಚುನಾವಣಾ ಸಮಯದಲ್ಲಿ ತಮ್ಮ ಭಾಷಣದ ಮೂಲಕ ಸಮಾಜವನ್ನು ಒಡೆಯಲು ಪ್ರಯತ್ನಿಸಿದ್ದಾರೆ. ಈ ಹಿಂದೆ ದೇಶದ ಯಾವ ಪ್ರಧಾನಿಯೂ ಈ ರೀತಿ ಮಾಡಿರಲಿಲ್ಲ ಎಂದು ಅವರು ಕಿಡಿಕಾರಿದ್ದಾರೆ. ಇದನ್ನೂ ಓದಿ: ಪುತ್ರ ಪ್ರಜ್ವಲ್ ನೋಡಲು ಜೈಲಿಗೆ ಬಂದ ಭವಾನಿ ರೇವಣ್ಣ
ಜೂ.27 ರಂದು ಅಧ್ಯಕ್ಷೆ ದ್ರೌಪದಿ ಮುರ್ಮು ಅವರ ಸಂಸತ್ತಿನ ಭಾಷಣದಲ್ಲಿ ನಿರ್ದೇಶನ ಮತ್ತು ದೂರದೃಷ್ಟಿ ಇಲ್ಲ. ಈ ವರ್ಷ ರಾಷ್ಟ್ರಪತಿಗಳ ಮೊದಲ ಭಾಷಣ ಜನವರಿಯಲ್ಲಿ ಮತ್ತು ಎರಡನೆಯದು ಜೂನ್‍ನಲ್ಲಿ ನಡೆಯಿತು. ಮೊದಲ ಭಾಷಣ ಚುನಾವಣೆಗೆ ಮತ್ತು ಎರಡನೆಯದು ಅದರ ಮತ್ತೊಂದು ಪ್ರತಿಯಾಗಿದೆ. ಅವರ ಭಾಷಣದಲ್ಲಿ ದಲಿತರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳಿಗೆ ಏನೂ ಸಂದೇಶ ಇರಲಿಲ್ಲ. ಕಳೆದ ಬಾರಿಯಂತೆ ರಾಷ್ಟ್ರಪತಿಗಳ ಭಾಷಣದಲ್ಲಿ ದೂರದೃಷ್ಟಿ ಇಲ್ಲ. ಇದು ಕೇವಲ ಸರ್ಕಾರದ ಬಗ್ಗೆ ಮೆಚ್ಚುಗೆಯ ಮಾತುಗಳಿಂದ ಕೂಡಿತ್ತು ಎಂದು ಅವರು ಆಕ್ರೋಶ ಹೊರ ಹಾಕಿದ್ದಾರೆ.
ಮೋದಿ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಾರೆ. ಸಂವಿಧಾನದಲ್ಲಿ ಸ್ಪೀಕರ್, ಡೆಪ್ಯೂಟಿ ಸ್ಪೀಕರ್, ಚೇರ್ಮನ್, ಡೆಪ್ಯೂಟಿ ಚೇರ್ಮನ್ ಹುದ್ದೆಗಳಿವೆ. ಆದರೆ ಐದು ವರ್ಷ ಖಾಲಿ ಇಡಲಾಗಿದೆ. ಆ ಹುದ್ದೆಗಳನ್ನು ಖಾಲಿ ಬಿಡುವುದು ಪ್ರಜಾಪ್ರಭುತ್ವದ ಮಾರ್ಗವೇ? ಎಂದು ಅವರು ಪ್ರಶ್ನಿಸಿದ್ದಾರೆ.
ಇದೇ ವೇಳೆ ಮಹಾತ್ಮ ಗಾಂಧಿ, ಅಂಬೇಡ್ಕರ್ ಮತ್ತು ಇತರರ ಪ್ರತಿಮೆಗಳನ್ನು ಸಂಸತ್ತಿನ ಸಂಕೀರ್ಣದಲ್ಲಿ ಅವುಗಳ ಮೂಲ ಸ್ಥಳಗಳಲ್ಲಿ ಇರಿಸುವಂತೆ ಅವರು ಒತ್ತಾಯಿಸಿದರು. ಇದನ್ನೂ ಓದಿ: ಸಿಎಂ, ಡಿಎಸಿಎಂ ಹುದ್ದೆ ಕೇಳುವ ಹಕ್ಕು ಎಲ್ಲರಿಗೂ ಇದೆ: ಪ್ರಿಯಾಂಕ್ ಖರ್ಗೆ