ಮಂಡ್ಯ: ಕಾವೇರಿ ಒಡಲಿಗೆ ಕನ್ನ ಹಾಕ್ತಿದ್ದ ಭೂಗಳ್ಳರ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ವಿಸ್ತೃತ ವರದಿ ಪ್ರಸಾರ ಬಳಿಕ ಇದೀಗ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಕೆಆರ್‌ಎಸ್ (KRS Dam) ಹಿನ್ನೀರು ಪ್ರದೇಶದ ಒತ್ತುರಿಗೆ ಬ್ರೇಕ್ ಹಾಕಲಾಗಿದೆ.
ಬುಧವಾರವಷ್ಟೇ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂ ಹಿನ್ನೀರು ಪ್ರದೇಶದ ಅತಿಕ್ರಮಣ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ವರದಿ ಪ್ರಸಾರವಾಗಿತ್ತು. ಒತ್ತುವರಿ ಜಾಗದಲ್ಲಿ ಜೆಸಿಬಿ ಮೂಲಕ ಟ್ರಂಚ್ ಹೊಡೆಸಿ ಫೆನ್ಸ್ ನಿರ್ಮಾಣಕ್ಕೆ ಸಿದ್ಧತೆ ಮಾಡಲಾಗಿದೆ. ಸರ್ವೆ ನಂ 279ರಲ್ಲಿ ಜಮೀನು ಹೊಂದಿರುವ ಕೇರಳ ಮೂಲದ ನಕೇಶ್ ಜಾನ್ ಮ್ಯಾಥ್ಯೂ ಎಂಬವರಿಂದ ಒತ್ತುವರಿ ನಡೆದಿದ್ದು, ಡ್ಯಾಂನ ನೀರು ಸಂಗ್ರಹದ ಕಣ್ಣಳತೆ ದೂರದಲ್ಲಿ ಒತ್ತುವರಿ ಆಗ್ತಿದ್ರು ಹೇಳೋರಿರಲ್ಲ ಕೇಳೋರಿರಲ್ಲ. ಸ್ಥಳೀಯ ಜನಪ್ರತಿನಿಧಿಗಳು, ರಾಜಕೀಯ ಮುಖಂಡರ ಸಹಾಯದಿಂದ ಅತಿಕ್ರಮಣ ಕೆಲಸ ನಡೆಯುತ್ತಿದೆ ಎಂದು ಸ್ಥಳೀಯರು ಆರೋಪ ಮಾಡಿದ್ದರು.
ಅಕ್ರಮ ಒತ್ತುವರಿಯಿಂದಾಗಿ ಡ್ಯಾಂ ನೀರು ಸಂಗ್ರಹಕ್ಕೆ ಧಕ್ಕೆ ಸಾಧ್ಯತೆ ಇದೆ ಎಂದು ಪಬ್ಲಿಕ್ ಟಿವಿಯಲ್ಲಿ ಸುದ್ದಿ ಬಿತ್ತರಿಸಿತ್ತು. ಇದೀಗ ಪಬ್ಲಿಕ್ ಟಿವಿ ವರದಿ ಬಳಿಕ ಎಚ್ಚೆತ್ತ ಅಧಿಕಾರಿಗಳಿಂದ ಸ್ಥಳಕ್ಕೆ ಭೇಟಿ ನೀಡಿ ಅಕ್ರಮ ಒತ್ತುವರಿಗಾಗಿ ತೆಗೆಯಲಾಗಿದ್ದ ಗುಂಡಿ ಮುಚ್ಚಲು ಸೂಚನೆ ನೀಡಲಾಗಿದೆ. ಬಳಿಕ ಜೆಸಿಬಿ ಸಹಾಯದಿಂದ ಜಮೀನಿನ ಮಾಲೀಕ ಗುಂಡಿ ಮುಚ್ಚಿಸಿದ್ದಾನೆ. ಇದನ್ನೂ ಓದಿ: KRS ಅಣೆಕಟ್ಟು ಜಾಗದ ಮೇಲೆ ಭೂಗಳ್ಳರ ಕಣ್ಣು- ಒತ್ತುವರಿ ಮಾಡ್ತಿದ್ರೂ ಅಧಿಕಾರಿಗಳು ಸೈಲೆಂಟ್!