– ಸಚಿವ ವೆಂಕಟೇಶ್ ಮೂಲಕ ಬೆದರಿಕೆ ಆರೋಪ
ಮೈಸೂರು: ಸಹಕಾರ ಕ್ಷೇತ್ರದ ಹಿಡಿತ ಪಡೆಯಲು ಸಿಎಂ ಯತ್ನಿಸಿದ್ದಾರೆ ಎಂದು ಹೇಳಲಾಗುತ್ತಿದ್ದು, ತವರು ಜಿಲ್ಲೆಯಿಂದಲೇ ಕಾಂಗ್ರೆಸ್ ನಾಯಕರು ಸಹಕಾರ ಕ್ಷೇತ್ರದ ಆಪರೇಷನ್ ಶುರುಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಡಿಸೆಂಬರ್ ನಲ್ಲಿ ನಡೆಯಬೇಕಿದ್ದ ಎಂಡಿಸಿಸಿ ಬ್ಯಾಂಕ್ (MDCC Bank) ಚುನಾವಣೆಯನ್ನು ರಾಜ್ಯ ಸರ್ಕಾರ ಮುಂದೂಡಿತ್ತು. ಅಲ್ಲದೇ ಜಿ.ಟಿ ದೇವೇಗೌಡ (GT Devegowda) ಮಗ, ಶಾಸಕ ಹರೀಶ್ ಗೌಡನನ್ನು ಅಪೇಕ್ಸ್ ಬ್ಯಾಂಕ್ ಉಪಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದ್ದೂ ಆಯ್ತು. ಈಗ ಮೈಮೂಲ್ ಸರದಿಯಾಗಿದೆ.
ಸಹಕಾರ ಕ್ಷೇತ್ರದಲ್ಲಿ ಜಿಟಿ.ದೇವೇಗೌಡರ ಪಾರುಪತ್ಯ ಮುರಿಯಲು ಶತ ಪ್ರಯತ್ನ ನಡೆಸಲಾಗುತ್ತಿದೆ. 15 ಸದಸ್ಯರ ಪೈಕಿ 12 ಸದಸ್ಯ ಬಲದೊಂದಿಗೆ ಮೈಮೂಲ್ ಅಧ್ಯಕ್ಷ ಆಗಿರುವ ಪಿ.ಎಂ.ಪ್ರಸನ್ನ ಅವರು ಜಿಟಿಡಿ ಆಪ್ತ ಮಾಜಿ ಶಾಸಕ ಕೆ.ಮಹದೇವ್ ಪುತ್ರ. ಈ ಕಾರಣಕ್ಕೆ ಪ್ರಸನ್ನ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಯತ್ನಿಸಲಾಗುತ್ತಿದೆ ಎನ್ನಲಾಗಿದೆ.
ಪಶು ಸಂಗೋಪನೆ ಸಚಿವ ಕೆ.ವೆಂಕಟೇಶ್ ಮೂಲಕ ಆಪರೇಷನ್ ನಡೆಯುತ್ತಿದ್ದು, ವಾಸಸ್ಥಳ ದೃಢೀಕರಣ ವಿಚಾರವಾಗಿಯೇ ಹೆಚ್ಚು ಬಾರಿ ನೋಟೀಸ್ ಕೊಟ್ಟು ಕಿರುಕುಳ ನೀಡಲಾಗುತ್ತದೆ. ಮೈಮೂಲ್ ಇತರ ಸದಸ್ಯರನ್ನು ಬೆದರಿಸುವ ಮೂಲಕ ಪ್ರಸನ್ನ ಮೇಲೆ ಒತ್ತಡ ಹೇರಲಾಗುತ್ತಿದೆ. ಈ ಮೂಲಕ ಸದ್ಯ ಸಚಿವ ವೆಂಕಟೇಶ್ ವಿರುದ್ಧ ದ್ವೇಷ ರಾಜಕಾರಣದ ಗಂಭೀರ ಆರೋಪ ಕೇಳಿಬಂದಿದೆ.